ಸದ್ಯ ಎಲ್ಲ ಕಡೆ ಐಪಿಎಲ್ ಫೀವರ್ ಜೋರಾಗಿದೆ. ಒಂದೆಡೆ ಐಪಿಎಲ್ ಸೀಜನ್ ನಲ್ಲಿ ಕ್ರಿಕೆಟ್ ಆಟಗಾರರು ತಮ್ಮ ತಂಡಗಳ ಪರವಾಗಿ ಸ್ಟೇಡಿ ಯಂನಲ್ಲಿ ಆಟವಾಡುತ್ತಿದ್ದರೆ, ಮತ್ತೂಂದೆಡೆ ಬೆಟ್ಟಿಂಗ್ ಅನ್ನೋ ಪೆಡಂ ಭೂತ ಬುಕ್ಕಿಗಳ ಕೈಯಲ್ಲಿ ತೆರೆಮರೆಯಲ್ಲಿ ಆಟವಾಡಲು ಶುರು ಮಾಡಿ ರುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರತಿ ಐಪಿಎಲ್ ಸೀಜನ್ ನಲ್ಲೂ ಚರ್ಚೆಯಾಗುವ ಬಳಿಕ ಎಲ್ಲರೂ ಮರೆತು ಸುಮ್ಮನಾ ಗುವ ಬೆಟ್ಟಿಂಗ್ ಕಹಾನಿಯನ್ನು ತೆರೆಮೇಲೆ ಹೇಳಿರುವ ಸಿನಿಮಾ “ಕ್ರಿಟಿಕಲ್ ಕೀರ್ತನೆಗಳು’.
ಒಂದು ಗಂಭೀರ ವಿಷಯವನ್ನು ಕಥಾಹಂದರವಾಗಿ ಇಟ್ಟು ಕೊಂಡು ಅದಕ್ಕೆ ಒಂದಷ್ಟು ಮನರಂಜನಾತ್ಮಕ ಅಂಶಗಳನ್ನು ಸೇರಿಸಿ “ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾವನ್ನು ಅಚ್ಚು ಕಟ್ಟಾಗಿ ಪ್ರೇಕ್ಷಕರ ಮುಂದೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕುಮಾರ್. ಕರ್ನಾಟಕದ ನಾಲ್ಕು ಬೇರೆ ಬೇರೆ ಪ್ರಾದೇಶಿಕ ಹಿನ್ನೆಲೆಯಲ್ಲಿ ವಿಭಿನ್ನ ಮನಸ್ಥಿತಿಯ ನಾಲ್ಕು ಕಥೆಯನ್ನು ಒಂದೇ ಎಳೆಯಲ್ಲಿ ಜೋಡಿಸಿ ರುವ ನಿರ್ದೇಶಕರ ಪ್ರಯತ್ನ ಮೆಚ್ಚುವಂತದ್ದು.
ಸಿನಿಮಾದ ಮೊದಲರ್ಧ ಕಾಮಿಡಿಯಾಗಿ ಸಾಗುವ ಕಥೆ ಮತ್ತು ದೃಶ್ಯಗಳು, ದ್ವಿತಿಯಾರ್ಧದಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳು ತ್ತದೆ. ಕೆಲ ಸನ್ನಿವೇಶಗಳಿಗೆ ಮತ್ತು ಪಾತ್ರಗಳಿಗೆ ಕತ್ತರಿ ಹಾಕಿ, ಚಿತ್ರಕಥೆಗೆ ಇನ್ನಷ್ಟು ವೇಗ ಕೊಟ್ಟಿದ್ದರೆ, “ಕೀರ್ತನೆಗಳು’ ಇನ್ನಷ್ಟು ಪರಿಣಾಮಕಾರಿಯಾಗಿ ನೋಡುಗ ರನ್ನು ಮುಟ್ಟುವ ಸಾಧ್ಯತೆ ಗಳಿದ್ದವು.
ಅದೆಲ್ಲದರ ಹೊರತಾಗಿಯೂ ಅಂತಿಮವಾಗಿ, ನೋಡುಗರು ಕೆಲಹೊತ್ತು ಯೋಚಿಸುತ್ತ ಥಿಯೇಟರ್‌ನಿಂದ ಹೊರಗೆ ಬರುವಂತೆ ಮಾಡಲು “ಕ್ರಿಟಿಕಲ್ ಕೀರ್ತನೆ’ ಯಶಸ್ವಿಯಾಗಿದೆ.
ಇನ್ನು ತಬಲನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವಾ ಭಾರದ್ವಾಜ್, ದೀಪಾ ತಮ್ಮ ಪಾತ್ರಗಳಲ್ಲಿ ನೋಡುಗರ ಗಮನ ಸೆಳೆಯುತ್ತಾರೆ. ಉಳಿದಂತೆ ಅರುಣಾ ಬಾಲರಾಜ್, ಧರ್ಮ, ಯಶ್ವಂತ್ ಶೆಟ್ಟಿ, ದಿನೇಶ್ ಮಂಗಳೂರು, ಮಾ. ಮಹೇಂದ್ರ, ಮಾ. ಪುಟ್ಟರಾಜು, ಅಪೂರ್ವಾ ಮೊದಲಾದ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನಿತರ ಕಲಾವಿದರು ಮತ್ತು ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.
ಚಿತ್ರದ ಎರಡು ಹಾಡುಗಳು ಗುನುಗುವಂತಿದ್ದು, ಛಾಯಾಗ್ರಹಣ ಕಾರ್ಯ ಚಿತ್ರವನ್ನು ಸುಂದರವಾಗಿ ಕಾಣುವಂತೆ ಮಾಡಿದೆ. ಸಂಕಲನ, ಕಲರಿಂಗ್, ಹಿನ್ನೆಲೆ ಸಂಗೀತದ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಕೆಲವೊಂದು ಸಣ್ಣ ಲೋಪಗಳನ್ನು ಬದಿಗಿಟ್ಟು ನೋಡುವುದಾದರೆ, “ಕ್ರಿಟಿಕಲ್ ಕೀರ್ತನೆಗಳು’ ಫ್ಯಾಮಿಲಿ ಜೊತೆ ಕುಳಿತು ಆಸ್ವಾಧಿಸಬಹುದಾದ ಸಿನಿಮಾ ಎನ್ನಲು ಅಡ್ಡಿಯಿಲ್ಲ.
ಜಿ. ಎಸ್. ಕಾರ್ತಿಕ ಸುಧನ್