ಮಡಿಕೇರಿ : ಕೆಲಸ ನೀಡಿದ ಸಂಸ್ಥೆಯ ಕಚೇರಿಯ ಬೀಗವನ್ನೇ ಮುರಿದು ನಗದು ದೋಚಿದ ಇಬ್ಬರು ಆರೋಪಿಗಳನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಬೇಟೋಳಿಯ ಹೆಗ್ಗಳ ನಿರ್ಮಲಗಿರಿ ಗ್ರಾಮದ ನಿವಾಸಿ ಎಸ್. ಸಿವಿನ್ (20) ಹಾಗೂ ಸೆಬಾಸ್ಟಿನ್ ಡಿ’ಸೋಜಾ (20) ಬಂಧಿತರು. ಕಳವು ಮಾಡಿದ್ದ ಹಣದಲ್ಲಿ 82 ಸಾವಿರ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಪಟ್ಟಣದ ಮಲಬಾರ್ ರಸ್ತೆಯಲ್ಲಿರುವ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಇದೇ ಜೂ. 12ರಂದು ರಾತ್ರಿ ಕಚೇರಿಯ ಬೀಗ ಮುರಿದು ನಗದು ಪೆಟ್ಟಿಗೆಯಲ್ಲಿದ್ದ 1.02 ಲಕ್ಷ ರೂ.ಗಳನ್ನು ದೋಚಿದ್ದರು. ಆರೋಪಿಗಳಿಬ್ಬರು ವೆಬ್ ಸಿರೀಸ್‌ನಲ್ಲಿ ಬರುತ್ತಿದ್ದ ಚಲನಚಿತ್ರದ ಕಳವು ಪ್ರಕರಣಗಳಂತೆಯೇ ಸಂಸ್ಥೆಯಿಂದ ಹಣ ದೋಚಲು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ. ಗುರುತು ಪತ್ತೆಯಾಗದಂತೆ ರೈನ್ ಕೋಟ್ ಮತ್ತು ಗ್ಲೌಸ್ ಧರಿಸಿ, ಮುಖ ಮುಚ್ಚಿಕೊಂಡು, ಕಚೇರಿಯ ಬೀಗ ಒಡೆದು, ಸಿಸಿ ಟಿವಿ ಕೆಮರಾಕ್ಕೆ ಸ್ಪ್ರೇ ಮಾಡಿ ಕಳವು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಹಾಗೂ ವಿರಾಜಪೇಟೆ ಡಿವೈಎಸ್‌ಪಿ ನಿರಂಜನ್ ರಾಜ್ ಅರಸ್ ಅವರ ಮಾರ್ಗದರ್ಶನ, ವಿರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ಅವರ ನಿರ್ದೇಶನದಂತೆ ವಿರಾಜಪೇಟೆ ನಗರ ಎಸ್‌ಐ ಸಿ.ವಿ. ಶ್ರೀಧರ, ಎಎಸ್‌ಐ ಎಂ.ಎಂ. ಮೊಹಮ್ಮದ್, ಸಿಬಂದಿ ಸುಬ್ರಮಣಿ, ಗಿರೀಶ್, ರಜನ್ ಕುಮಾರ್, ಧರ್ಮ, ಗೀತಾ, ಮಧು, ಕಿರಣ್, ಮಹಂತೇಶ್ ಪೂಜಾರಿ, ಸಂತೋಷ್ ಹಾಗೂ ಚಾಲಕ ರಮೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.