ಮಡಿಕೇರಿ: ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಮೂರು ಎಕರೆ ಪೈಸಾರಿ ಕಾಲನಿಯಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದಡಿ ಕೇರಳ ಮೂಲದ ಕ್ರೈಸ್ತ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂರು ಎಕರೆ ಪೈಸಾರಿಯ ಪಣಿ ಎರವರ ಮುತ್ತ ಅವರ ಮನೆಗೆ ಬಂದ ಕೇರಳದ ಮಾನಂದವಾಡಿಯ ಕುರಿಯಚ್ಚನ್ ಹಾಗೂ ಆತನ ಪತ್ನಿ ಬಲವಂತದ ಮತಾಂತರಕ್ಕೆ ಯತ್ನಿಸಿರುವುದಲ್ಲದೆ ಆಮಿಷವೊಡ್ಡಿರುವುದಾಗಿ ಆರೋಪಿಸಲಾಗಿದೆ. ಕುಟ್ಟ ಪೊಲೀಸ್ ಠಾಣೆಗೆ ದೂರು ನೀಡಿರುವ ಮುತ್ತ ತಮ್ಮನ್ನು ಮತಾಂತರಗೊಳಿಸಲು ದಂಪತಿ ಪ್ರಯತ್ನಿಸಿದರು ಎಂದು ತಿಳಿಸಿದ್ದಾರೆ.
ಕ್ರೈಸ್ತ ದಂಪತಿ ಮತಾಂತರ ಕಾರ್ಯದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಸ್ಥಳಕ್ಕೆ ಬಂದ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು ನೂತನ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.
ಬಾಡಗ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಪೆಮ್ಮಣಮಾಡ, ಬೂತ್ ಅಧ್ಯಕ್ಷ ಜಾಯ್ ಅಯ್ಯಪ್ಪ, ಕುಟ್ಟ ಗ್ರಾ.ಪಂ. ಸದಸ್ಯೆ ಹಾಗೂ ಮಾತೃ ಮಂಡಳಿ ತಾಲೂಕು ಅಧ್ಯಕ್ಷೆ ತೀತಿರ ತೀರ್ಥ ಮಂಜುನಾಥ್, ಬಜರಂಗದಳ ತಾಲೂಕು ಸಂಚಾಲಕ ಸಜು ಗಣಪತಿ, ಧರ್ಮ ಜಾಗರಣ ಸ್ವಯಂ ಸೇವಕರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.
Related Articles
ಇದನ್ನೂ ಓದಿ:ಕುಂದಾಪುರ: ರಸ್ತೆ ದಾಟುತ್ತಿದ್ದ ವೇಳೆ ಬಾಲಕಿಗೆ ರಿಕ್ಷಾ ಢಿಕ್ಕಿ ; ಗಾಯ
ಖಂಡನೆ
ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಅವರು ಮತಾಂತರ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೊಡಗಿನ ದುರ್ಬಲ ವರ್ಗವನ್ನು ಗುರಿಯಾಗಿಸಿಕೊಂಡು ಆಮಿಷವೊಡ್ಡುವ ಮೂಲಕ ಬಲವಂತದ ಮತಾಂತರ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜಾರಿಗೆ ಬಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದು ಕಠಿನ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.