ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪದ್ಮನೂರು ಶೆಟ್ಟಿಗಾಡು ನಿವಾಸಿ ಹಿತೇಶ್ (46) ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ತಾನೂ ಆತ್ಮಹತ್ಯೆ ಯತ್ನ ಮಾಡಿದ ಪ್ರಕರಣದಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ಹಿತೇಶ್‌ನ ಮಾನಸಿಕ ಖಿನ್ನತೆ, ಮೌನ, ಆರ್ಥಿಕ ಮುಗ್ಗಟ್ಟು ಮೂವರು ಮಕ್ಕಳನ್ನು ಸಾವಿನಂಚಿಗೆ ತಳ್ಳಿದೆ. ಘಟನೆ ನಡೆದ ಪದ್ಮನ್ನೂರಿನಲ್ಲಿ ನೀರವ ಮೌನ ಆವರಿಸಿದೆ.
ಹಿತೇಶ್ ಮೊದಲಿಗೆ ಪತ್ನಿ ಲಕ್ಷ್ಮೀಯ ಜತೆಗೆ ಉತ್ತಮವಾಗಿಯೇ ಇದ್ದ. ಎರಡನೇ ಪುತ್ರ ಉದಯ ಜನಿಸಿದ ಅನಂತರ ಆತನ ವರ್ತನೆಯಲ್ಲಿ ಬದಲಾ ವಣೆ ಕಾಣಿಸಿಕೊಂಡಿತ್ತು ಎಂದು ಪತ್ನಿ ಲಕ್ಷ್ಮೀ ಹೇಳಿದ್ದಾರೆ. ಮೂರೂ ಮಕ್ಕಳಲ್ಲೂ ಸ್ವಲ್ಪ ಮಟ್ಟಿನ ಅಂಗವೈಕಲ್ಯವೂ ಹಿತೇಶನ ಮಾನಸಿಕ ಖಿನ್ನತೆಗೆ ಕಾರಣವಾಗಿತ್ತು. ವ್ಯವಹಾರಕ್ಕಾಗಿ ಮಾಡಿದ್ದ ಸಾಲ, ಬ್ಯಾಂಕ್‌ಗೆ ಕಟ್ಟಬೇಕಾಗಿದ್ದ ಬಡ್ಡಿ, ಸರಿಸುಮಾರು ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಅಂಗಡಿ ಕಟ್ಟಡ ಕಟ್ಟಿದ್ದ. ಆದರೆ ಅದಕ್ಕೆ ಲೈಸೆನ್ಸ್ ಸಿಕ್ಕಿರಲಿಲ್ಲ.
ಹೀಗಾಗಿ ಮತ್ತಷ್ಟು ಸಾಲ ಬಿಗಾಡಿಯಿಸಿತ್ತು. ಹೀಗೆ ಎಲ್ಲ ಸಮಸ್ಯೆಗಳು ಆತನನ್ನು ಅಕ್ಷರಶಃ ಮಾನಸಿಕ ಖನ್ನತೆಯತ್ತ ತಳ್ಳಲ್ಪಟ್ಟಿತ್ತು. ಆದರೆ ಏನೂ ಅರಿಯದ ಮೂವರು ಮಕ್ಕಳನ್ನು ಆತ ಕೊಂದು ಹಾಕಿದನಲ್ಲ ಎನ್ನುವ ನೋವು ಊರಿನ ಪ್ರತೀಯೋರ್ವರಲ್ಲೂ ಕಂಡುಬಂದಿದೆ. ಈ ಹಿಂದೆ 10-12 ವರ್ಷ ಮುಂಬಯಿಯಲ್ಲಿ ಹೊಟೇಲ್ ಇನ್ನಿತರ ಕೆಲಸ ಮಾಡಿಕೊಂಡಿದ್ದ ಹಿತೇಶ್, 2 ಮಕ್ಕಳಾಗುವವರೆಗೂ ಊರಿಗೆ ಬಂದು ಹೋಗುತ್ತಿದ್ದ. ಅನಂತರ ಮುಂಬಯಿ ಬಿಟ್ಟು ಬಂದು ಊರಿನಲ್ಲಿಯೇ ನೆಲೆಸಿದ್ದ.
Related Articles
ಶಾಲೆಗಳಿಗೆ ರಜೆ ಸಾರಲಾಗಿತ್ತು
ವಿದ್ಯಾರ್ಥಿನಿ ಮೃತ ರಶ್ಮಿತಾ (14) ಸ್ಮರಣಾರ್ಥ ಆಕೆ ಕಲಿಯುತ್ತಿದ್ದ ಕಟೀಲು ಪ್ರೌಢಶಾಲೆಗೆ ರಜೆ ಸಾರಲಾಗಿತ್ತು. ಉದಯ (12) ಕಲಿಯುತ್ತಿದ್ದ ಪುನರೂರು ಶಾಲೆ ಮತ್ತು ದಕ್ಷಾ (6) ಹೋಗುತ್ತಿದ್ದ ಪದ್ಮನೂರು ಅಂಗನವಾಡಿಗೆ ರಜೆ ಸಾರಲಾಗಿತ್ತು. ಮಕ್ಕಳ ಅಂತ್ಯಕ್ರಿಯೆಯಲ್ಲಿ ತಂದೆ ಹಿತೇಶ್‌ಗೆ ಭಾಗವಹಿಸಲು ಅವಕಾಶ ನೀಡಲಾಗಿಲ್ಲ.
ಪುತ್ರನ ಹುಟ್ಟುಹಬ್ಬಕ್ಕೆ ಕೇಕ್ ಆರ್ಡರ್!
ತಾನೇ ಕೈಯ್ನಾರೆ ಕೊಂದ ತನ್ನ 2ನೇ ಪುತ್ರ ಉದಯನ ಹುಟ್ಟು ಹಬ್ಬ ಜೂ. 28ರಂದು ನಡೆಯಲಿಕ್ಕಿತ್ತು. ಇನ್ನೂ ಕೆಲವು ದಿನ ಇದ್ದರೂ, ವಾರದ ಹಿಂದೆಯೇ ಪುತ್ರನ ಬರ್ತ್‌ಡೇ ಕೇಕ್ ಅನ್ನು ಕಿನ್ನಿಗೋಳಿಯ ಬೇಕರಿಯಲ್ಲಿ ಆರ್ಡರ್ ಮಾಡಿದ್ದರು ಪುತ್ರನ ತಾಯಿ ಲಕ್ಷ್ಮೀ. ಆದರೆ ವಿಧಿಯಾಟ ಪತಿ ಹಿತೇಶನ ಮಾನಸಿಕತೆಗೆ ಪುತ್ರ ಉದಯ ಸಾವಿಗೀಡಾಗಿದ್ದ. ತಾಯಿ ಬೀಡಿ ಕಟ್ಟಿ ಮಕ್ಕಳಿಗೆ ಹೊಸ ಯೂನಿಫಾರಂ ಅನ್ನು ಕೂಡ ಹೊಲಿಸಿಟ್ಟಿದ್ದರು. ಉದಯನ ಅಂತಿಮ ಸಂಸ್ಕಾರದ ಸಮಯದಲ್ಲಿ ಕೇಕ್ ಹಾಗೂ ಹೊಸ ಬಟ್ಟೆಯನ್ನು ಇಟ್ಟು ಸುಡಲಾಯಿತು. ಈ ಎಲ್ಲ ಘಟನೆಗಳೂ ಅಲ್ಲಿ ನೆರೆದವರ ಮನಕಲಕುವಂತಿತ್ತು.