Advertisement

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

08:10 PM Oct 26, 2021 | Team Udayavani |

ಬೆಂಗಳೂರು: ವಿವಿಧ ಪ್ಯಾಕೆಜ್‌ಗಳಲ್ಲಿ ನೆರೆ ರಾಜ್ಯ,ರಾಷ್ಟ್ರಗಳಿಗೆ ಪ್ರವಾಸ ಕಳುಹಿಸುವುದರ ಜತೆ ಚೈನ್‌ಲಿಂಕ್‌ ಮಾದರಿಯಲ್ಲಿ ಇತರರನ್ನು ಸೇರಿಸಿದರೆ ಶೇಕಡ ಪ್ರಮಾಣದಲ್ಲಿ ಲಾಭಾಂಶ ಕೊಡುವುದಾಗಿ ಸಾರ್ವಜನಿಕರ ನಂಬಿಸಿ ವಂಚಿಸುತ್ತಿದ್ದ ಅಣ್ಣ-ತಂಗಿಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ಸರ್‌ ಎಂ.ವಿ.ವಿಶ್ವೇಶ್ವರಯ್ಯ ಲೇಔಟ್‌ ನಿವಾಸಿ ಬಿ.ಪ್ರಶಾಂತ್‌ (35) ಮತ್ತು ಆತನ ಸಹೋದರಿ ರೇಖಾ (30) ಬಂಧಿತರು. ಆರೋಪಿಗಳು ವಿವಿಧ ಪ್ಯಾಕೆಜ್‌ಗಳಲ್ಲಿ ನೆರೆ ರಾಜ್ಯಗಳು ಮತ್ತು ವಿದೇಶಗಳಿಗೆ ಪ್ರವಾಸಕ್ಕೆಂದು ಕಳುಹಿಸುವುದರ ಜತೆ, ಅವರನ್ನು ತನ್ನ ಕಂಪನಿಯ ಸದಸ್ಯರನ್ನಾಗಿ ಮಾಡಿಕೊಂಡು ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿ ಪ್ರಶಾಂತ್‌, ತನ್ನ ತಂಗಿ ರೇಖಾ ಮತ್ತು ತಾಯಿ ಸುಂದರಿ ಹೆಸರಿನಲ್ಲಿ ಗಿರಿನಗರದಲ್ಲಿ  ರಾಯಲ್‌ ಡ್ರೀಮ್‌ ಟು ಫ್ಲೈ ಪ್ರೈ.ಲಿ ಎಂಬ ಸಂಸ್ಥೆ ತೆರೆದಿದ್ದ. ಈ ಮೂಲಕ ವಿವಿಧ ಪ್ಯಾಕೆಜ್‌ಗಳಲ್ಲಿ  ಗೋವಾಕ್ಕೆ 14 ಸಾವಿರ ರೂ., ಮೈಸೂರು, ಪಾಂಡಿಚೇರಿ 9000 ರೂ., ಥೈಲ್ಯಾಂಡ್‌ 40 ಸಾವಿರ ರೂ., ಮಲೇಷ್ಯಾಕ್ಕೆ 43 ಸಾವಿರ ರೂ. ಹಾಗ ದುಬೈಗೆ 60 ಸಾವಿರ ರೂ. ಇದೆ ಎಂದು ಕಂುಪನಿಯ ವೆಬ್‌ಸೈಟ್‌ ಮತ್ತು ಬಿತ್ತಿಪತ್ರಗಳಲ್ಲಿ ಜಾಹಿರಾತು ನೀಡುತ್ತಿದ್ದರು. ಅದನ್ನು ನಂಬಿದ ಪ್ರವಾಸಿಗರು ಆನ್‌ಲೈನ್‌ ಮೂಲಕ ಪ್ರವಾಸದ ಸ್ಥಳ ಕಾಯ್ದಿರಿಸುತ್ತಿದ್ದರು. ಅವರನ್ನು ಪ್ರವಾಸಕ್ಕೆ ಕರೆದೊಯ್ಯುವುದರ ಜತೆಗೆ ಸಂಸ್ಥೆಯ ಸದಸ್ಯರನ್ನಾಗಿ ಮಾಡಿಕೊಳ್ಳುತ್ತಿದ್ದ. ಬಳಿಕ ಆ ಸದಸ್ಯರಿಂದ ಚೈನ್‌ ಲಿಂಕ್‌ ಮೂಲಕ ಹೆಚ್ಚಿನ ಸದಸ್ಯರಿಂದ ಹಣ ಹೂಡಿಕೆ ಮಾಡಿಸಿದರೆ ಪ್ರವಾಸದ ಜತೆ ಶೇ. 25ರಷ್ಟು ಲಾಭಾಂಶದ ಜತೆಗೆ ಎಲೆಕ್ಟ್ರಾನಿಕ್‌ ವಸ್ತುಗಳು ಮತ್ತು ಥೈಲ್ಯಾಂಡ್‌, ತಾಜ್‌ ಮಹಲ್‌ಗೆ ಉಚಿತವಾಗಿ ಪ್ರವಾಸ ಕಳುಹಿಸುವುದಾಗಿ ನಂಬಿಸಿ ಹಣ ಸಂಗ್ರಹಿಸುತ್ತಿದ್ದ. ಬಳಿಕ ಪ್ರವಾಸಕ್ಕೆ ಕಳುಹಿಸಿ ಲಾಭಾಂಶ ನೀಡದೆ ವಂಚಿಸುತ್ತಿದ್ದ. ಈ ಸಂಬಂಧ 2017ರಲ್ಲಿ ಚಂದ್ರ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ :ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

ಗಿರಿನಗರದಲ್ಲಿ ನೂರಾರು ಮಂದಿಗೆ ವಂಚಿಸಿದ ಬಳಿಕ ಕಚೇರಿ ಮುಚ್ಚಿ, ಇದೀಗ ಸರ್‌.ಎಂ. ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಪ್ರವಾಸದ ಪ್ಯಾಕೇಜ್‌ ಹೆಸರಿನಲ್ಲಿ  ಸಾರ್ವಜನಿಕರಿಗೆ ವಂಚಿಸಲು ಪ್ರಾರಂಭ ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಪ್ರಶಾಂತ್‌ ಹಾಗೂ ಆತನ ಸಹೋದರಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next