Advertisement

ಹಣ ಕೊಟ್ಟರೆ ಯುವಕರಿಗೂ ವೃದ್ಧಾಪ್ಯ ವೇತನ!

12:01 PM Mar 21, 2023 | Team Udayavani |

ಬೆಂಗಳೂರು: ಆಧಾರ್‌ ಕಾರ್ಡ್‌ಗಳಲ್ಲಿ ಉಲ್ಲೇಖೀಸಿದ್ದ ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಿ ಅನರ್ಹರಿಗೆ ವೃದ್ಧಾಪ್ಯ ವೇತನ ಮಂಜೂರು ಮಾಡಿಸುತ್ತಿದ್ದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ರಾಜಾಜಿನಗರ ನಿವಾಸಿ ಚತುರ್‌(45) ಬಂಧಿತ ಆರೋಪಿ. ಈತನಿಂದ ಕೃತ್ಯಕ್ಕೆ ಬಳಸಿದ್ದ 1 ಲ್ಯಾಪ್‌ಟಾಪ್‌, 6 ಕಂಪ್ಯೂಟರ್‌, 4 ಮೊಬೈಲ್‌ಗ‌ಳು, 205 ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಸಿಸಿಬಿ ಮುಖ್ಯಸ್ಥ ಡಾ|ಎಸ್‌.ಡಿ. ಶರಣಪ್ಪ ಹೇಳಿದರು.

ಸರ್ಕಾರಿ ಯೋಜನೆಗಳನ್ನು ಕೊಡಿಸುವ ಮಧ್ಯವರ್ತಿಯಾಗಿರುವ ಆರೋಪಿ ಚತುರ್‌, ನಗರದ ಮೂರು ಕಡೆ ಮಳಿಗೆ ಇಟ್ಟುಕೊಂಡಿದ್ದಾನೆ. ಚಾಲನಾ ಪರವಾನಗಿ, ವೃದ್ಧಾಪ್ಯ ವೇತನ, ಆದಾಯ ಪ್ರಮಾಣ ಪತ್ರ ಹೀಗೆ ಸರ್ಕಾರದ ಹತ್ತಾರು ಯೋಜನೆಗಳನ್ನು ಕೊಡಿಸುತ್ತಿದ್ದನು. ಈತನ ಅಕ್ರಮದ ಮಾಹಿತಿ ಮೇರೆಗೆ ರಾಜಾಜಿನಗರದ ಎರಡು ಕಡೆ ಮತ್ತು ಕೆಂಗೇರಿಯಲ್ಲಿರುವ ಒಂದು ಮಳಿಗೆಯ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ವಂಚನೆ: ಸರ್ಕಾರಿ ನಿಯಮದ ಪ್ರಕಾರ 60 ವರ್ಷ ಅಥವಾ 60 ವರ್ಷ ಮೇಲ್ಪಟ್ಟವರಿಗೆ ವೃದ್ಧಾಪ್ಯ ವೇತನ ನೀಡಲಾಗುತ್ತದೆ. ಈ ಯೋಜನೆಗಾಗಿ ಆದಾಯ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌ ಹಾಗೂ ಇತರೆ ದಾಖಲೆಗಳು ಪ್ರಮುಖವಾಗಿವೆ. ಆದರೆ, ಆರೋಪಿ ಹಣಕ್ಕಾಗಿ 40-50 ವಯೋಮಾನದವರಿಗೂ ವೃದ್ಧಾಪ್ಯ ವೇತನ ಕೊಡಿಸುತ್ತಿದ್ದ. ಅವರ ಇ-ಆಧಾರ್‌ ಕಾರ್ಡ್‌ ಪಡೆದು, ಅದನ್ನು ಇಜಿØ ಪಿಡಿಎಫ್ ಎಡಿಟರ್‌ ಹಾಗೂ ಇತರೆ ಪಿಡಿಎಫ್ ಎಡಿಟರ್‌ ಸಾಫ್ಟ್ವೇರ್‌ಗಳನ್ನು ಬಳಸಿ, ಆಧಾರ್‌ ಕಾರ್ಡ್‌ಗಳಲ್ಲಿರುವ ಜನ್ಮ ದಿನಾಂಕವನ್ನು 60 ವರ್ಷ ಮೇಲ್ಪಟ್ಟವರಂತೆ ಬದಲಾವಣೆ ಮಾಡುತ್ತಿದ್ದ. ಬಳಿಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ವೃದ್ಧಾಪ್ಯ ವೇತನ ಕೊಡಿಸುತ್ತಿದ್ದ. ಹೀಗೆ ಪ್ರತಿ ಅರ್ಜಿದಾರನಿಂದ 5-8 ಸಾವಿರ ರೂ. ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದ. ಇದುವರೆಗೂ ಸುಮಾರು 205 ಮಂದಿಗೆ ವೃದ್ಧಾಪ್ಯ ವೇತನ ಕೊಡಿಸಿದ್ದಾನೆ. ಮತ್ತೂಂದೆಡೆ ಈ ಅಕ್ರಮದಲ್ಲಿ ಉಪತಹಶೀಲ್ದಾರ್‌ ಮಟ್ಟದ ಅಧಿಕಾರಿಗಳು ಭಾಗಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next