ಕಾರ್ಕಳ: ಬಡವರಿಗೆಂದು ಉಚಿತವಾಗಿ ಸರಕಾರ ವಿತರಿಸುವ ಪಡಿತರ ಅಕ್ಕಿಯನ್ನು ಮನೆಮನೆಗೆ ತೆರಳಿ ಹಣ ನೀಡಿ ಸಂಗ್ರಹಿಸಿ ಅದನ್ನು ಅಧಿಕ ಹಣಕ್ಕೆ ಮಾರಲು ಯತ್ನಿಸುತ್ತಿದ್ದ ಕೃತ್ಯವನ್ನು ನೀರೆ ಗ್ರಾಮ ಪಂಚಾಯತ್ ಪತ್ತೆ ಹಚ್ಚಿದೆ.
ಆರೋಪಿ ಮೊಹಮ್ಮದ್ ಅಬ್ದುಲ್ ರಹಿಮನ್‌ನನ್ನು ಪೊಲೀಸರು ಬಂಧಿಸಿದ್ದು, 20 ಕ್ವಿಂಟಾಲ್ ಅಕ್ಕಿ ಮತ್ತು ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನೀರೆ ಗ್ರಾ.ಪಂ.ನ ಕಣಜಾರು ಶೆಮೆಗುರಿಯಲ್ಲಿ ಘಟನೆ ಬುಧವಾರ ವ್ಯಕ್ತಿಯೋರ್ವ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ವಾಹನದಲ್ಲಿ ಸಾಗಿಸುತ್ತಿರುವುದು ಪಂಚಾಯತ್ ಸದಸ್ಯ ಸಚ್ಚಿದಾನಂದ ಪ್ರಭು ಅವರ ಗಮನಕ್ಕೆ ಬಂದಿದ್ದು, ತತ್‌ಕ್ಷಣ ಪಿಡಿಒ ಅಂಕಿತಾ ಅವರ ಗಮನಕ್ಕೆ ತಂದರು. ಪಿಡಿಒ ತಹಶೀಲ್ದಾರ್‌ಗೆ ಮತ್ತು ಹಿರಿಯಡಕ ಠಾಣೆಗೆ ಮಾಹಿತಿ ರವಾನಿಸಿದರು.
ನೀರೆ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಸತೀಶ್, ಸದಸ್ಯರಾದ ಶಿವಪ್ರಸಾದ್, ವಿದ್ಯಾ, ಮಾಜಿ ಸದಸ್ಯ ರಘುರಾಮ್ ಶೆಟ್ಟಿ, ಗ್ರಾಮ ಕಾರಣಿಕ ಸುಚಿತ್ರಾ ಹಾಗೂ ಸ್ಥಳೀಯರಾದ ಯೋಗೀಶ್ ಮಡಿವಾಳ್, ಗ್ರಾಮಸ್ಥರು ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದಾರೆ.
ಉಚಿತ ಅಕ್ಕಿ 10 ರೂ.ಗೆ ಮಾರಾಟ!
ಹಿರಿಯಡಕ ಎಸ್‌ಐ ಸಿಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಆರೋಪಿತನನ್ನು ವಿಚಾರಿಸಿ ದರು. ನೀರೆ ಹಾಗೂ ಕಣಜಾರು ಗ್ರಾಮಗಳ ಬಿಪಿಎಲ್ ಕುಟುಂಬದವರಿಗೆ ತಿಂಗಳಿಗೆ 50 ಕೆಜಿ ಅಕ್ಕಿ ಸಿಗುತ್ತಿದ್ದು, ಕೆಲವರು ಅದನ್ನು ಈ ವ್ಯಕ್ತಿಗೆ ನೀಡಿ ಕೆಜಿಗೆ 10 ರೂ.ಗಳಂತೆ ಹಣ ಪಡೆಯುತ್ತಿದ್ದರು. ಆತ ಈ ಅಕ್ಕಿಯನ್ನು ಮಿಲ್‌ನಲ್ಲಿ ಪಾಲಿಷ್ ಮಾಡಿಸಿ ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ ಅಧಿಕ ಬೆಲೆಗೆ ಮಾರುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಫುಡ್ ಇನ್‌ಸ್ಪೆಕ್ಟರ್ ಸುಮತಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.