Advertisement

ಡಿ.ಕೆ. ಶಿವಕುಮಾರ್‌ ನಿಂದನೆ: ಆರೋಪಿಗೆ ಜೈಲು

10:13 AM Apr 19, 2022 | Team Udayavani |

ಸುಳ್ಯ: ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಅವರಿಗೆ ದೂರವಾಣಿ ಕರೆ ಮಾಡಿ ಬೈದು ನಿಂದಿಸಿದ್ದಾರೆಂಬ ಆರೋಪದಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ್‌ ರೈ ಅವರಿಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

Advertisement

ಸುಳ್ಯದ ಅನಿಯಮಿತ ವಿದ್ಯುತ್‌ ಕಡಿತದ ಪರಿಸ್ಥಿತಿಯ ಬಗ್ಗೆ ಬೆಳ್ಳಾರೆಯ ವಿದ್ಯುತ್‌ ಬಳಕೆದಾರ ಸಾಯಿ ಗಿರಿಧರ ರೈ ಅವರು 2016 ಫೆಬ್ರವರಿ 28ರಂದು ಆಗಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆತ್ತಿಕೊಂಡಿದ್ದರು. ಈ ಸಂದರ್ಭ ಅವರು ಸುಳ್ಯದ ವಿದ್ಯುತ್‌ ಸಮಸ್ಯೆ ಬಗ್ಗೆ ಹೇಳುವುದರ ಜತೆಗೆ ಸಚಿವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆಂದು ಡಿಕೆಶಿ ಪರವಾಗಿ ಮೆಸ್ಕಾಂ ಹಿರಿಯ ಅಧಿಕಾರಿಗಳು ಗಿರಿಧರ ರೈಯವರ ಮೇಲೆ ದೂರು ನೀಡಿದ್ದರು. ಕೇಸು ದಾಖಲಿಸಿಕೊಂಡ ಪೊಲೀಸರು ರಾತ್ರೋರಾತ್ರಿ ಗಿರಿಧರ್‌ರೈಯವರ ಮನೆಗೆ ತೆರಳಿದ್ದರು.

ಮನೆ ಬಾಗಿಲು ತೆರೆಯದಿದ್ದಾಗ ಹೆಂಚು ಸರಿಸಿ ಒಳ ಪ್ರವೇಶಿಸಿ ಗಿರಿಧರ್‌ ರೈ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣ ರಾಜ್ಯಾದಾದ್ಯಂತ ಕುತೂಹಲ ಕೆರಳಿಸಿತ್ತು ಮತ್ತು ಚರ್ಚೆಗೆ ಕಾರಣವಾಗಿತ್ತು. ಘಟನೆಯ ಕುರಿತಂತೆ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಮಾನ ಹಾನಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ನಾಲ್ಕು ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ:ಹೊರಟ್ಟಿ ಸೇರ್ಪಡೆ ಕುರಿತು ನಾಯಕರ ತೀರ್ಮಾನ : ಸಚಿವ ಪ್ರಹ್ಲಾದ ಜೋಶಿ

ಸುಳ್ಯ ಪೊಲೀಸ್‌ ಠಾಣೆಯ ಆಗಿನ ಎಸ್‌.ಐ. ಚಂದ್ರಶೇಖರ್‌ಎಚ್‌.ವಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸುಳ್ಯ ನ್ಯಾಯಾಲಯದಲ್ಲಿ ಈ ಕುರಿತಂತೆ ವಿಚಾರಣೆ ನಡೆಯುತ್ತಿತ್ತು. ಸಾಕ್ಷಿಗಳ ವಿಚಾರಣೆ ನಡೆದಿತ್ತು.
ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನೂ ಸಾಕ್ಷಿಯನ್ನಾಗಿಸಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ವಾರಂಟ್‌ ಹೊರಡಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್‌ 5ರಂದು ಈಗ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ ಸುಳ್ಯಕ್ಕೆ ಆಗಮಿಸಿ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿದಿದ್ದರು. ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು ಸುಳ್ಯ ಹಿರಿಯ ಸಿವಿಲ್‌ ನ್ಯಾಯಾಧೀಶ ಸೋಮಶೇಖರ್‌ ಎ. ಅವರು ತೀರ್ಪು ಪ್ರಕಟಿಸಿದ್ದಾರೆ.

Advertisement

ಮೇಲ್ಮನವಿಗೆ ಕಾಲಾವಕಾಶ
ನಾಲ್ಕು ಅಪರಾಧಗಳಲ್ಲಿಯೂ 2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಪ್ರಕರಣದಲ್ಲಿ 5 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದ್ದು, 4 ಅಪರಾಧಗಳ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖೀಸಲಾಗಿದೆ. ಆರೋಪಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಪ್ರಾಸಿಕ್ಯೂಷನ್‌ ಪರ ಎಪಿಪಿ ಜನಾರ್ದನ ಬಿ. ಅವರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next