ಮಂಗಳೂರು: ದ್ವೇಷದ ಹಿನ್ನೆಲೆಯಲ್ಲಿ ಅಂಗಡಿ ಮತ್ತು ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ರವಿವಾರ ರಾತ್ರಿ ನಗರದ ಕಾಳಿಕಾಂಬಾ ದೇವಸ್ಥಾನದ ಬಳಿ ಸಂಭವಿಸಿದೆ.
ವಚನರಾಮ್ ರಾಯ್ಕ ಅವರು ಹಾರ್ಡ್‌ವೇರ್ ಮತ್ತು ವುಡನ್ ಮೋಲ್ಡಿಂಗ್ ವ್ಯವಹಾರದ ಅಂಗಡಿಯನ್ನು 7 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದರು. ಸೋಮವಾರ ಮುಂಜಾವ 3.30ಕ್ಕೆ ಅವರು ಅಂಗಡಿಯ ಮುಂದೆ ನಿಲ್ಲಿಸಿದ್ದ ಟಾಟಾ ಏಸ್ ವಾಹನಕ್ಕೆ ಬೆಂಕಿ ತಗಲಿರುವ ಬಗ್ಗೆ ಗಣೇಶ್ ಶೆಟ್ಟಿ ಎಂಬವರು ಕರೆ ಮಾಡಿ ತಿಳಿಸಿದರು.
ವಚನರಾಮ್ ಅವರು ಬಂದು ನೋಡಿದಾಗ ವಾಹನ ಮತ್ತು ಅಂಗಡಿಯಲ್ಲಿ ಬೆಂಕಿ ಇತ್ತು. ಬಳಿಕ ಸಿಸಿ ಕೆಮರಾ ಫೂಟೇಜ್ ಪರಿಶೀಲಿಸಿದಾಗ ವಾಹನ ಮತ್ತು ಅಂಗಡಿಗೆ ಬಿರಾಸ್ ಎಂಬವರು ಬೆಂಕಿ ಕೊಡುತ್ತಿರುವುದು ಕಂಡುಬಂದಿದೆ.
ಅಂಗಡಿ ಕಟ್ಟಡದ 3ನೇ ಮಳಿಗೆಯಲ್ಲಿ ವಾಸವಾಗಿದ್ದ ಬಿರಾಸ್ ಬಾಡಿಗೆ ನೀಡುತ್ತಿರಲಿಲ್ಲ. ಬಾಡಿಗೆ ಕೇಳಿದ್ದ ಹಿನ್ನೆಲೆಯಲ್ಲಿ ದ್ವೇಷದಿಂದ ಉದ್ದೇಶಪೂರ್ವಕವಾಗಿ ರವಿವಾರ ರಾತ್ರಿ ಅಂಗಡಿ ಮತ್ತು ವಾಹನಕ್ಕೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಸುಮಾರು 10ರಿಂದ 15 ಲ.ರೂ. ಮೌಲ್ಯದ ಸೊತ್ತುಗಳು ಹಾನಿಯಾಗಿವೆ. 7 ಲ.ರೂ. ಮೌಲ್ಯದ ವಾಹನಕ್ಕೆ ಹಾನಿಯಾಗಿದೆ ಎಂದು ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.