Advertisement

ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸಾವು: ಇಬ್ಬರ ಸೆರೆ

12:46 AM Sep 20, 2022 | Team Udayavani |

ಮಂಗಳೂರು/ಉಳ್ಳಾಲ: ಬಾಲಕನೊಬ್ಬ ಬಸ್‌ನ ಫುಟ್‌ಬೋರ್ಡ್‌ ನಲ್ಲಿ ನಿಂತಿದ್ದಾಗ ನೇತ್ರಾವತಿ ಸೇತುವೆ ಬಳಿ ಕೆಳಕ್ಕೆ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಬಸ್‌ ಚಾಲಕ, ನಿರ್ವಾಹಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಅವರನ್ನು ವಶಕ್ಕೆ ಪಡೆಯಲಾಗಿದೆ.

Advertisement

ಚಾಲಕ ಕಾರ್ತಿಕ್‌ ಆರ್‌. ಶೆಟ್ಟಿ (30) ಮತ್ತು ಬಸ್‌ ನಿರ್ವಾಹಕ ದಂಸಿರ್‌ (30) ಬಂಧಿತರು. ಅವರ ಮೇಲೆ ಐಪಿಸಿ 304 (ನಿರ್ಲಕ್ಷ್ಯದ ಕೊಲೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸೆ. 7ರಂದು ವಿದ್ಯಾರ್ಥಿ ಯಶರಾಜ್‌ (16) ರೂಟ್‌ ನಂಬರ್‌ 44ಡಿ ಶೆರ್ಲಿ ಬಸ್‌ನ ಬಾಗಿಲಿನ ಬಳಿ ನಿಂತು ಪ್ರಯಾಣಿಸುತ್ತಿದ್ದಾಗ ಡಾಮರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ.

ಈ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಮಾಧ್ಯಮಗಳ ಜತೆ ಮಾತನಾಡಿ, ಈ ಪ್ರಕರಣದಲ್ಲಿ ಬಸ್‌ನ ಚಾಲಕ ಮತ್ತು ಕಂಡಕ್ಟರ್‌ ವಿರುದ್ಧ ಐಪಿಸಿ 304 (ಕೊಲೆಯಲ್ಲದೆ ನಿರ್ಲಕ್ಷ್ಯದ ಸಾವು) ಪ್ರಕರಣ ದಾಖಲಾಗಿದೆ. ಬಸ್‌ನ ಸಿಬಂದಿಗೆ ಅಪಘಾತವಾದರೆ ಸಾವು ಸಂಭವಿಸಬಹುದು ಎಂದು ಗೊತ್ತಿದ್ದರೂ ಆ ಕೃತ್ಯವನ್ನು ತಡೆಯದೆ ವಿದ್ಯಾರ್ಥಿಯ ಬಗ್ಗೆ ಸಿಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ 304 ಪ್ರಕರಣ ದಾಖಲಾಗಿದೆ. ಈ ಬಸ್‌ನ ಮಾಲಕರಿಗೂ ನೋಟಿಸ್‌ ನೀಡಲಾಗಿದೆ ಎಂದರು.

ಸಭೆ ಕರೆಯಲು ಸೂಚನೆ
ಬಸ್‌ಗಳಲ್ಲಿ ಎಚ್ಚರ ವಹಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಬಸ್‌ ಮಾಲಕರು, ಚಾಲಕರು, ನಿರ್ವಾಹಕರ ಸಭೆ ಕರೆಯಲು ಎಸಿಪಿ ಗೀತಾ ಕುಲಕರ್ಣಿ ಅವರಿಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಈ ರೀತಿಯ ಅಪರಾಧಗಳು ಪುನರಾವರ್ತನೆಯಾಗದಂತೆ ಜಾಗೃತಿ ಮೂಡಿಸಲಾಗುವುದು ಎಂದು ಕಮಿಷನರ್‌ ತಿಳಿಸಿದರು.

Advertisement

ಫ‌ುಟ್‌ಬೋರ್ಡ್‌ ಪ್ರಯಾಣ-ಸಿಬಂದಿಯೇ ಹೊಣೆ
ಬಸ್‌ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಕರು ನೇತಾಡುವುದು ಕಂಡರೆ ಕೂಡಲೇ ಬಸ್‌ಗಳನ್ನು ನಿಲ್ಲಿಸಿ, ಪ್ರಯಾಣಿಕರು ಬಸ್‌ನೊಳಗೆ ಬರಲು ಸೂಚನೆ ನೀಡಿ. ಬಸ್‌ನೊಳಗೆ ಪ್ರಯಾಣಿಕ ಬಾರದೆ ಬಸ್‌ ಚಲಾಯಿಸಬೇಡಿ. ಈ ರೀತಿಯ ಕಠಿನ ನಿರ್ಧಾರ ತೆಗೆದುಕೊಳ್ಳದಿದ್ದರೆ ಅಪವಾದಕ್ಕೆ ಬಸ್‌ ಸಿಬಂದಿಯೇ ಹೊಣೆಯಾಗಬೇಕಾಗುತ್ತದೆ. ಅದೇ ಯುವಕರು ಶೋಕಿ ಮನಃಸ್ಥಿತಿ ಬಿಟ್ಟು ಜೀವದ ಬಗ್ಗೆ ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next