Advertisement

ಮಂಗಳೂರು: ಮಹಿಳೆಯನ್ನು ವಂಚಿಸಿ ಚಿನ್ನಾಭರಣ ಪಡೆದು ಪರಾರಿ

11:57 PM Sep 05, 2022 | Team Udayavani |

ಮಂಗಳೂರು: ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯನ್ನು ವಂಚಿಸಿ ಮನೆಯೊಳಗೆ ಬಂದು ಆಕೆಯ ಕೈಯಿಂದಲೇ ಚಿನ್ನಾಭರಣವಿದ್ದ ಹ್ಯಾಂಡ್‌ಬ್ಯಾಗ್‌ ಪಡೆದು ಪರಾರಿಯಾದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.

Advertisement

ಮಹಿಳೆಯೋರ್ವರು ನಗರದ ಬಂದರು ಪೊಲೀಸ್‌ ಠಾಣಾ ವ್ಯಾಪ್ತಿಯ ಜೈನ್‌ ಟೆಂಪಲ್‌ ಹಿಂಬದಿ ಟಿ.ಟಿ. ರಸ್ತೆಯಲ್ಲಿ ತನ್ನ ಮನೆಯಲ್ಲಿರುವಾಗ ಬೆಳಗ್ಗೆ 9.15ರ ಸುಮಾರಿಗೆ ಮನೆಯೊಳಗೆ ಬಂದ ಅಪರಿಚಿತ ವ್ಯಕ್ತಿ 2,000 ರೂ. ತೋರಿಸಿ ಚಿಲ್ಲರೆ ನೀಡುವಂತೆ ಕೇಳಿದ. ಬಳಿಕ ಮಹಿಳೆಯಲ್ಲಿ “ನೀವು ಚಿನ್ನವನ್ನು ಎಲ್ಲಿ ಇಡುತ್ತೀರಿ?’ ಎಂದು ವಿಚಾರಿಸಿದ. ಆಗ ಮಹಿಳೆ ಕಪಾಟಿನಲ್ಲಿ ಚಿನ್ನ ಇಟ್ಟಿದ್ದ ಹ್ಯಾಂಡ್‌ಬ್ಯಾಗ್‌ ತೋರಿಸಿದರು. ಅಪರಿಚಿತ ವ್ಯಕ್ತಿ ಆ ಬ್ಯಾಗ್‌ ಅನ್ನು ನೋಡಿ ಕೊಡುವುದಾಗಿ ಹೇಳಿ ಪಡೆದುಕೊಂಡ. ಬಳಿಕ ಅಲ್ಲಿಂದ ಓಡಿ ಹೋದ. ಸುಮಾರು 5-6 ನಿಮಿಷದ ಅನಂತರ ಮಹಿಳೆ ತನ್ನ ಪತಿಗೆ ಕರೆ ಮಾಡಿ ವಿಷಯ ತಿಳಿಸಿದರು.

130 ಗ್ರಾಂ ಚಿನ್ನವಿತ್ತು
ಹ್ಯಾಂಡ್‌ಬ್ಯಾಗ್‌ನಲ್ಲಿ ಒಂದು ಮಂಗಳಸೂತ್ರದ ಸರ, ಒಂದು ದೊಡ್ಡ ಉಂಗುರ, 5 ಚಿಕ್ಕ ಉಂಗುರ ಸೇರಿದಂತೆ 130 ಗ್ರಾಂ ಚಿನ್ನವಿತ್ತು. ಅಪರಿಚಿತ ವ್ಯಕ್ತಿ ಮುಖಕ್ಕೆ ಮಾಸ್ಕ್ ಧರಿಸಿದ್ದ. ಬಿಳಿ ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮೋಡಿ ಮಾಡಿದ !
ಅಪರಿಚಿತ ವ್ಯಕ್ತಿ ಚಿಲ್ಲರೆ ಕೇಳುವ ನೆಪದಲ್ಲಿ ಮಾತನಾಡುತ್ತಾ ಏನೋ ವಶೀಕರಣ ಮಾಡುವ ರೀತಿಯಲ್ಲಿ ಮೋಡಿ ಮಾಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next