Advertisement

10 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ: ಆರೋಪಿಗಳ ಬಂಧನ

12:45 AM Aug 31, 2022 | Team Udayavani |

ಮಡಿಕೇರಿ: ಹಶೀಶ್‌ ಆಯಿಲ್‌ (ಗಾಂಜಾದಿಂದ ತಯಾರಿಸಲಾದ ಅಂಟು ಮಾದರಿಯ ಮಾದಕ ವಸ್ತು) ಮಾರಾಟ ಜಾಲವನ್ನು ಬಯಲಿಗೆಳೆಯುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳ ಬಳಿ ಇದ್ದ 10 ಲಕ್ಷ ರೂ. ಮೌಲ್ಯದ 1.160 ಕೆ.ಜಿ. ಹಶೀಶ್‌ ಆಯಿಲ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಕೇರಳ ರಾಜ್ಯದ ಕಾಸರಗೋಡಿನ ಅಹಮದ್‌ ಕಬೀರ್‌(37), ಕಾಂಞಂಗಾಡ್‌ ಮೂಲದ ಅಬ್ದುಲ್‌ ಖಾದರ್‌(27) ಹಾಗೂ ಮಹಮದ್‌ ಮುಜಮಿಲ್‌(27) ಬಂಧಿತ ಆರೋಪಿಗಳು.

Advertisement

ಪ್ರಕರಣದ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ. ಎ. ಅಯ್ಯಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಆ. 29ರಂದು ಕೇರಳ ಕಡೆಯಿಂದ ಕರಿಕೆ ಮಾರ್ಗವಾಗಿ ಮಾರುತಿ ಸುಜುಕಿ ಸೆಲೆರಿಯೋ ಕಾರು ಆಗಮಿಸಿದೆ. ಈ ಸಂದರ್ಭ ಕಾರಿನಲ್ಲಿದ್ದ ವ್ಯಕ್ತಿಗಳು ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಭಾಗಮಂಡಲ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದನ್ನು ಆಧರಿಸಿ ಅತ್ತ ಕಡೆ ತೆರಳಿದ ಪೊಲೀಸರು ಕಾರಿನಲ್ಲಿದ್ದವರನ್ನು ವಿಚಾರಿಸಿ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಕಾರಿನ ಡಿಕ್ಕಿಯಲ್ಲಿ 2 ನಂಬರ್‌ ಪ್ಲೇಟ್‌ಗಳು ಪತ್ತೆಯಾಗಿದೆ. ಮಾತ್ರವಲ್ಲದೇ ಪ್ಲಾಸ್ಟಿಕ್‌ ಡಬ್ಬದ ಒಳಭಾಗ ಕಪ್ಪು ಬಣ್ಣದ ಅಂಟು ಮಾದರಿಯ ವಸ್ತು ಕಂಡು ಬಂದಿದೆ.

ಈ ಬಗ್ಗೆ ಕಾರಿನ ಚಾಲಕನನ್ನು ವಿಚಾರಿಸಿದ ಸಂದರ್ಭ ಹಶೀಶ್‌ ಎಂಬ ಮಾದಕ ವಸ್ತುವಾಗಿದ್ದು, ಗಿರಾಕಿಗಳಿಗೆ ಮಾರಾಟ ಮಾಡುವ ಸಲುವಾಗಿ ಗೆಳೆಯರ ಜತೆ ಬಂದಿರುವುದಾಗಿ ಮಾಹಿತಿ ನೀಡಿದ್ದಾನೆ. ಸ್ಥಳದಲ್ಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಕುರಿತು ಭಾಗಮಂಡಲ ಪೊಲೀಸ್‌ ಠಾಣೆಯಲ್ಲಿ ಎನ್‌.ಡಿ.ಪಿ.ಎಸ್‌. ಕಾಯ್ದೆ ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆಂಧ್ರಪ್ರದೇಶದ ಗುಂಟೂರಿನಿಂದ ಮಾದಕ ದ್ರವ್ಯ ತಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಯ್ಯಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

Advertisement

ಪ್ರಕರಣದ ಪ್ರಮುಖ ಆರೋಪಿ ಅಹಮದ್‌ ಕಬೀರ್‌ ವಿರುದ್ಧ ಈ ಹಿಂದೆಯೇ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿದೆ. ಕೇರಳದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಾಹನ ಕಳವು, ದರೋಡೆ ಹಾಗೂ ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ಈತನನ್ನು ಬೇಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಿಂದ ಗಡೀಪಾರು ಮಾಡಲಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡ ಆರೋಪಿಯಾಗಿದ್ದ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಮಾರ್ಗದರ್ಶನದಲ್ಲಿ ಮಡಿಕೇರಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್‌ ನಿರ್ದೇಶನದಂತೆ ಮಡಿಕೇರಿ ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕ ಅನೂಪ್‌ ಮಾದಪ್ಪ, ಭಾಗಮಂಡಲ ಪೊಲೀಸ್‌ ಠಾಣಾಧಿಕಾರಿ ಪ್ರಿಯಾಂಕ, ಎಎಸ್‌ಐ ಬೆಳ್ಳಿಯಪ್ಪ, ಸಿಬಂದಿ ಇಬ್ರಾಹಿಂ, ಬಿ.ಸಿ. ಮಹೇಶ್‌, ಯಲ್ಲಾಲಿಂಗ ಶೇಗುಣನಿ, ಮಹದೇವಸ್ವಾಮಿ, ಪುನೀತ್‌ ಕುಮಾರ್‌ ಹಾಗೂ ಸುರೇಶ್‌ ಕುಮಾರ್‌ ಕಾರ್ಯಾಚರಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next