Advertisement

ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪಿ ಬಂಧನ

12:23 AM Aug 10, 2022 | Team Udayavani |

ಬಜಪೆ: ಬಜಪೆ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪಟ್ಟಿಯಲ್ಲಿರುವ (ಎಂಒಬಿ) ಅದ್ಯಪಾಡಿ ಮಾಂಟೆಬೈಲ್‌ನ ಮೊಹಮ್ಮದ್‌ ಅಜರುದ್ದೀನ್‌ ಯಾನೆ ಅಜರ್‌ (31)ನ ಮನೆ ತಪಾಸಣೆ ನಡೆಸಲು ಆ. 8ರಂದು ತೆರಳಿದ್ದ ಬಜಪೆ ಠಾಣೆಯ ಅಪರಾಧ ವಿಭಾಗದ ಸಿಬಂದಿಗೆ ಅವಾಚ್ಯ ಶಬ್ದಗಳಿಂದ ಬೆೈದು ನಿಂದಿಸಿ ಹಲ್ಲೆ ನಡೆಸಿದ ಆರೋಪಿ ಮೊಹಮ್ಮದ್‌ ಅಜರುದ್ದೀನ್‌ನನ್ನು ವಶಕ್ಕೆ ಪಡೆದು ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆತನ ಮತ್ತು ಆತನ ಮನೆಯವರ ಮೇಲೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

ಹೆಚ್ಚಿನ ವಿಚಾರಣೆ ನಡೆಸಿದಾಗ ಇತ್ತೀಚಿಗೆ ಮೂಡುಬಿದಿರೆ ಠಾಣೆಯ ಕಲ್ಲಬೆಟ್ಟುವಿನಲ್ಲಿ ನಡೆದ ದನಕಳವು, ಕಾರ್ಕಳ ಬಂಗ್ಲೆಗುಡ್ಡೆಯಲ್ಲಿ ನಡೆದ ದನಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿತ್ತು. ಆತ ಬಂಧನಕ್ಕೆ ಸಿಗದೆ ತಲೆಮರೆಸಿಕೊಂಡಿದ್ದ. ಅವನ ಮೇಲೆ ಈ ಹಿಂದೆ ಬಜಪೆ ಠಾಣೆಯಲ್ಲಿ ದರೋಡೆ, ದನಕಳವು, ಕಾರ್ಕಳ ನಗರ ಠಾಣೆಯಲ್ಲಿ 2 ದನಕಳವು ಪ್ರಕರಣ, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಒಂದು, ಮೂಡುಬಿದಿರೆ ಠಾಣೆಯಲ್ಲಿ ಒಂದು ದನಕಳವು ಪ್ರಕರಣ ದಾಖಲಾಗಿದೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಸಮಾಜ ಘಾತುಕರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವ ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರ ಮಾರ್ಗದರ್ಶನದಂತೆ ಡಿಸಿಪಿ ಅಂಶು ಕುಮಾರ್‌ ಮತ್ತು ದಿನೇಶ್‌ ಕುಮಾರ್‌ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಎನ್‌. ಮಹೇಶ್‌ ಕುಮಾರ್‌ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬಜಪೆ ಪೊಲೀಸ್‌ ಠಾಣೆಯ ನಿರೀಕ್ಷಕ ಪ್ರಕಾಶ್‌ ಮತ್ತು ಸಿಬಂದಿ ಪಾಲ್ಗೊಂಡಿದ್ದರು. ಬಜಪೆ ಠಾಣೆ ವ್ಯಾಪ್ತಿಯಲ್ಲಿ ಒಂದೇ ವಾರದಲ್ಲಿ ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎರಡನೇ ಪ್ರಕರಣ ಇದಾಗಿದೆ.

ಪೊಲೀಸರಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ: ಬಂಧನ
ಮಂಗಳೂರು: ಪೊಲೀಸರಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಆಟೋರಿಕ್ಷಾ ಚಾಲಕನನ್ನು ಬಂದರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮಂಗಳಾದೇವಿ ನಿವಾಸಿ ವಿನೋದ್‌ ಪೂಜಾರಿ (48) ಬಂಧಿತ ಆರೋಪಿ. ನಗರದ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ ಬಳಿ ಪೊಲೀಸರು ಕರ್ತವ್ಯದಲ್ಲಿದ್ದಾಗ ಪಾನಮತ್ತನಾಗಿದ್ದ ವಿನೋದ್‌ ಪೂಜಾರಿ ರಸ್ತೆಗೆ ಅಡ್ಡವಾಗಿ ರಿಕ್ಷಾ ನಿಲ್ಲಿಸಿದ್ದ. ಪೊಲೀಸರು ರಿಕ್ಷಾ ತೆರವು ಮಾಡಲು ಹೇಳಿದಾಗ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕರೊಂದಿಗೂ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಐಪಿಸಿ ಸೆಕ್ಷನ್‌ 353ರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next