Advertisement

ಸೋದರತ್ತೆ ಸಹಿತ ನಾಲ್ವರ ಹಂತಕ ಪ್ರವೀಣ್‌ ಬಿಡುಗಡೆಗೆ ವಿರೋಧ: ಆತ ಜೈಲಿನಲ್ಲೇ ಇರಲಿ

12:17 AM Aug 10, 2022 | Team Udayavani |

ಮಂಗಳೂರು: ವಾಮಂಜೂರಿನಲ್ಲಿ 1994ರಲ್ಲಿ ತನ್ನ ನಾಲ್ವರು ಸಂಬಂಧಿಕರನ್ನೇ ಹತ್ಯೆ ಮಾಡಿ ಜೈಲಿನಲ್ಲಿರುವ ಪ್ರವೀಣ್‌ ಕುಮಾರ್‌ನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಪ್ರವೀಣ್‌ ಪತ್ನಿ ಸೇರಿದಂತೆ ಆತನ ಕುಟುಂಬಸ್ಥರು ಮಂಗಳವಾರ ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ಗೆ ಮನವಿ ಸಲ್ಲಿಸಿದರು.

Advertisement

ಮನವಿ ಸ್ವೀಕರಿಸಿದ ಪೊಲೀಸ್‌ ಆಯುಕ್ತರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವೀಣನ ಕುಟುಂಬಸ್ಥರು ಸಲ್ಲಿಸಿರುವ ಆಕ್ಷೇಪವನ್ನು ಕೂಡಲೇ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುವುದು ಎಂದರು.

ಪ್ರವೀಣ್‌ ವಾಮಂಜೂರಿನಲ್ಲಿ ತನ್ನ ಅತ್ತೆ (ತಂದೆಯ ತಂಗಿ) ಅಪ್ಪಿ ಶೇರಿಗಾರ್ತಿ, ಅವರ ಮಗ ಗೋವಿಂದ, ಮಗಳು ಶಕುಂತಳಾ ಹಾಗೂ ಶಕುಂತಳಾ ಅವರ ಪುತ್ರಿ ದೀಪಿಕಾ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಸದ್ಯ ಹಿಂಡಲಗಾ ಜೈಲಿನಲ್ಲಿರುವ ಆತನನ್ನು ಸನ್ನಡತೆಯ ಕಾರಣ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ವರದಿ ಸಂಗ್ರಹಿಸಲು ಎಸ್‌ಪಿ ಕಚೇರಿಗೆ ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯಿಂದ ಆದೇಶ ಮಾಡಲಾಗಿತ್ತು.

ರಕ್ಷಕನಾಗಬೇಕಿದ್ದವ ಜೀವ ಭಕ್ಷಕನಾದ!
ಕೊಲೆಯಾಗಿರುವ ಅಪ್ಪಿ ಅವರ ಪುತ್ರ ಸೀತಾರಾಮ ಗುರುಪುರ ಸುದ್ದಿಗಾರರೊಂದಿಗೆ ಮಾತನಾಡಿ, “ಶಕುಂತಳಾ ಅವರ ಪತಿ ಮಸ್ಕತ್‌ನಿಂದ ಬರುವಾಗ ಚಿನ್ನ ತಂದಿದ್ದರು. ಅದು ಪ್ರವೀಣನಿಗೆ ಗೊತ್ತಿತ್ತು. ಇಟ್ಟಿರುವ ಜಾಗವನ್ನೂ ಅರಿತಿದ್ದ. ಅವನಿಗೆ ಜೂಜು, ಕುಡಿತದ ಚಟವಿತ್ತು. ಆತನ ಮನೆ ಉಪ್ಪಿನಂಗಡಿಯಲ್ಲಿ. ಮಂಗಳೂರಿನಲ್ಲಿ ಟೈಲರಿಂಗ್‌ ವೃತ್ತಿ ಮಾಡುತ್ತಿದ್ದ ಆತ ಹಲವು ವರ್ಷಗಳಿಂದ ಹೆಚ್ಚಾಗಿ ಇದ್ದುದು ವಾಮಂಜೂರಿನ ಅತ್ತೆ ಮನೆಯಲ್ಲೇ. 1994ರ ಫೆ. 23ರ ರಾತ್ರಿಯೂ ಬಂದಿದ್ದ. ಅತ್ತೆಯೇ ಪ್ರೀತಿಯಿಂದ ಊಟ ಬಡಿಸಿದ್ದರು. ಆಗ ಕಳ್ಳರ ಹಾವಳಿ ಹೆಚ್ಚಾಗಿತ್ತು. ಗೋವಿಂದ ಸ್ವಲ್ಪ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ. ಮನೆಯಲ್ಲಿ ಬೇರೆ ಗಂಡಸರು ಇರಲಿಲ್ಲ. ಮನೆಗೆ ಕಾವಲಾಗಿ ಪ್ರವೀಣ ಇದ್ದಾನೆ ಎಂದು ಮನೆಯವರು ಖುಷಿಯಾಗಿದ್ದರು. ಬೇರೆ ದಿನ ತನ್ನ ಕೋಣೆಗೆ ಚಿಲಕ ಹಾಕಿ ಮಲಗುತ್ತಿದ್ದ ಶಕುಂತಳಾ ಅಂದೇಕೋ ಚಿಲಕ ಹಾಕದೆಯೇ ಪುತ್ರಿಯೊಂದಿಗೆ ಮಲಗಿದ್ದರು. ಮಧ್ಯರಾತ್ರಿ ಪ್ರವೀಣ ಮನೆಯಲ್ಲಿದ್ದವರ ಪೈಕಿ ನಾಲ್ವರಿಗೂ ರಾಡ್‌ನಿಂದ ಹೊಡೆದು, ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ. ಹೆಂಗಸರ ಮೈಮೇಲಿದ್ದ ಸುಮಾರು 80,000 ರೂ. ಮೌಲ್ಯದ ಚಿನ್ನ ಮತ್ತು 5,000 ರೂ. ನಗದು ದೋಚಿ ಪರಾರಿಯಾಗಿದ್ದ’ ಎಂದು ತಿಳಿಸಿದರು.

ತಪ್ಪಿಸಿಕೊಂಡಿದ್ದ ಹಂತಕ
ಪೊಲೀಸರು ಬಂಧಿಸಿದ ಅನಂತರವೂ ಒಮ್ಮೆ ತಪ್ಪಿಸಿಕೊಂಡು ಸುಮಾರು ನಾಲ್ಕು ವರ್ಷಗಳ ಕಾಲ ಗೋವಾದಲ್ಲಿ ತಲೆಮರೆಸಿಕೊಂಡಿದ್ದ. ಕೊಲೆಗೆ ಮುನ್ನವೇ ವಿವಾಹಿತನಾಗಿದ್ದ ಆತ ಗೋವಾದಲ್ಲಿದ್ದ ಸಂದರ್ಭ ಅಕ್ರಮವಾಗಿ ಮತ್ತೂಂದು ವಿವಾಹ ವಾಗಿದ್ದ. ಆತನನ್ನು ಪತ್ತೆ ಹಚ್ಚುವಂತೆ ಬಹುಮಾನದ ಘೋಷಣೆ ಮಾಡಲಾಗಿತ್ತು.

Advertisement

ಆತಂಕ ಉಂಟಾಗಿದೆ
ಎರಡನೇ ವಿವಾಹ ವಾಗಿದ್ದ ಮಹಿಳೆಯ ತಮ್ಮನೇ ಪೊಲೀಸರಿಗೆ ಮಾಹಿತಿ ನೀಡಿದ್ದು ಮತ್ತೆ ಬಂಧನಕ್ಕೊಳಗಾಗಿದ್ದ. ಅವನಿಗೆ ಗಲ್ಲು ಶಿಕ್ಷೆ ಘೋಷಣೆಯಾದ ಹಿನ್ನೆಲೆಯಲ್ಲಿ ನೆಮ್ಮದಿಯಿಂದ ಇದ್ದೆವು. ಬಳಿಕ ಅದು ಜೀವಾವಧಿ ಶಿಕ್ಷೆಯಾಗಿತ್ತು. ಆದರೆ ಈಗ ಆತನನ್ನು ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ದೊರೆತಿದ್ದು ನಮಗೆ ಆತಂಕ ಉಂಟಾಗಿದೆ’ ಎಂದು ಹೇಳಿದರು.

ಬಿಡಬೇಡಿ: ಪತ್ನಿ ಮನವಿ
“ನಾನು ಆತನ ಜತೆ ಸ್ವಲ್ಪ ಸಮಯ ಮಾತ್ರ ಜೀವನ ನಡೆಸಿದ್ದೇನೆ. ಆ ಕೊಲೆಗಡುಕನನ್ನು ಬಿಡಬಾರದೆಂದು ಈ ಹಿಂದೆಯೂ ಹೇಳಿದ್ದೇನೆ. ಅವನು ಜೈಲಿನಲ್ಲಿಯೇ ಇರಲಿ’ ಎಂದು ಪ್ರವೀಣ್‌ ಪತ್ನಿ ಹೇಳಿದರು.

ಬಿಡುಗಡೆಯಾದರೆ ದೇಶಕ್ಕೇ ಕಪ್ಪು ದಿನ
ಪ್ರವೀಣನನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಸುದ್ದಿ ನಮಗೆ ಆಘಾತ ತಂದಿದೆ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡಲಿದೆ. ಅವನನ್ನು ಬಿಡುಗಡೆ ಮಾಡಿದರೆ ಭಾರತೀಯರ ಪಾಲಿಗೆ ಅಂದು ಕಪ್ಪು ದಿನವಾಗಲಿದೆ ಎಂದು ಸೀತಾರಾಮ ಅವರ ಪುತ್ರಿ ಸ್ನೇಹಾ ಗುರುಪುರ ಹೇಳಿದರು.

ಕುಟುಂಬದವರಿಗೆ ಜೀವಬೆದರಿಕೆ
ಜೈಲಿನಲ್ಲಿದ್ದಾಗ ನೋಡಲು ಹೋದಾಗ ನನ್ನನ್ನು ಹಾಗೂ ಕುಟುಂಬದ ಇತರರನ್ನು ಕೂಡ ಕೊಲೆ ಮಾಡುವುದಾಗಿ ಹೇಳಿ ಉಗುಳಿದ್ದ. ಆತ ಜೈಲಿನಿಂದ ಬಂದರೆ ಕುಟುಂಬದವರ ಜೀವಕ್ಕೆ ಭಯವಿದೆ. ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಸೀತಾರಾಮ ಗುರುಪುರ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next