Advertisement

ಮಹಿಳೆ ಚೇತರಿಕೆ; ಸ್ಥಳಕ್ಕೆ ಎಸ್‌ಪಿ ಭೇಟಿ, ಮಾಹಿತಿ ಸಂಗ್ರಹ

11:50 PM Aug 06, 2022 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಕಾಡಿನಬೆಟ್ಟು ರಸ್ತೆಯ ಸಮೀಪದಲ್ಲಿ ಶಾಲಾ ಮಕ್ಕಳ ವಾಹನ ಬರುವಿಕೆಗಾಗಿ ಕಾಯುತ್ತಿದ್ದ ಮಹಿಳೆಯ ತಲೆಗೆ ಅಪರಿಚಿತ ವ್ಯಕ್ತಿ ಕಬ್ಬಿಣದ ರಾಡ್‌ನಿಂದ ಹಲ್ಲೆಗೈದು ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದೇವಕಿ ಪೂಜಾರಿ (35) ಅವರು ಚೇತರಿಸಿಕೊಳ್ಳುತ್ತಿದ್ದಾರೆ.

Advertisement

ಆಸ್ಪತ್ರೆಯಿಂದ ಆ. 6ರಂದು ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಮಣಿಪಾಲ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ತಲೆಗೆ ಸುಮಾರು 72ಕ್ಕೂ ಅಧಿಕ ಹೊಲಿಗೆ ಹಾಕಿದ್ದಾರೆ ಎಂದು ಸಹೋದರ ಹರೀಶ್‌ ತಿಳಿಸಿದ್ದಾರೆ. ಹಲ್ಲೆಗೈದು ನೆಲಕ್ಕೆ ಬೀಳಿಸಿದ್ದ ದುಷ್ಕರ್ಮಿಯು ದೇವಕಿಯವರ ಸುಮಾರು ಎರಡು ಪವನ್‌ ತೂಕದ ಚಿನ್ನದ ಕರಿಮಣಿ ಸರ, ಎರಡೂವರೆ ಪವನ್‌ ತೂಕದ ಚಿನ್ನದ ಬಳೆ, ಅರ್ಧ ಪವನ್‌ನ ಒಂಕಿ ಉಂಗುರ ಸೇರಿದಂತೆ ಸುಮಾರು 1.60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ನಡೆದ ಸ್ಥಳವು ನಿರ್ಜನ ಪ್ರದೇಶವಾಗಿದ್ದು, ಅರಣ್ಯ ವ್ಯಾಪ್ತಿಯನ್ನು ಹೊಂದಿದ್ದು, ಇದರ ದುರ್ಲಾಭವನ್ನು ದುಷ್ಕರ್ಮಿ ಉಪಯೋಗಿಸಿಕೊಂಡು ಕೃತ್ಯವೆಸಗಿದ್ದಾನೆ. ಕೆಂಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ ವ್ಯಕ್ತಿಯೊಬ್ಬ ರೈನ್‌ಕೋಟ್‌ ಧರಿಸಿ ತೆರಳುತ್ತಿರುವ ದೃಶ್ಯಾವಳಿಗಳು ಸಮೀಪದ ಕಾಳಾವರದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಕ್ಷಿಪ್ರ ತನಿಖೆಗೆ ಎಸ್‌ಪಿ ಸೂಚನೆ
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌, ಡಿವೈಎಸ್‌ಪಿ ಶ್ರೀಕಾಂತ್‌, ವೃತ್ತ ನಿರೀಕ್ಷಕ ಗೋಪಿಕೃಷ್ಣ ಹಾಗೂ ಕಂಡ್ಲೂರು ಗ್ರಾಮಾಂತರ ಪೊಲೀಸ್‌ ಠಾಣೆಯ ನಿರಂಜನ್‌ ಗೌಡ ಅವರು ಭೇಟಿ ನೀಡಿದ್ದಾರೆ. ಎಸ್‌ಪಿಯವರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಕ್ಷಿಪ್ರ ತನಿಖೆ ನಡೆಸಿ ಆರೋಪಿಯ ಜಾಡು ಪತ್ತೆ ಮಾಡಲು ಸೂಚಿಸಿದ್ದಾರೆ.

ಆರೋಗ್ಯ ಸಹಾಯಕಿ
ಗಾಯಾಳು ದೇವಕಿ ಪೂಜಾರಿ ಈ ಹಿಂದೆ ಕುಂದಾಪುರದ ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಆರೈಕೆಯ ಜತೆಗೆ ತಂದೆ ರಾಮ ಪೂಜಾರಿ ಹಾಗೂ ಸಹೋದರ ಹರೀಶ್‌ ಜತೆಯಲ್ಲಿ ಕೊರ್ಗಿ ಕಾಡಿನಬೆಟ್ಟಿನಲ್ಲಿ ವಾಸವಾಗಿದ್ದರು. ಪತಿ ಅಶೋಕ್‌ ಪೂಜಾರಿ ಮೈಸೂರಿನ ಸರಸ್ವತಿಪುರಂನಲ್ಲಿ ಕ್ಯಾಂಟೀನ್‌ ನಡೆಸಿಕೊಂಡಿದ್ದಾರೆ.

Advertisement

“ವರಲಕ್ಷ್ಮೀ ವ್ರತಾಚರಣೆ ಹಿನ್ನೆಲೆ ಬಂಗಾರ ತೊಟ್ಟಿದ್ದೆ’
“ನಾನು ಕೊಡೆ ಹಿಡಿದುಕೊಂಡು ಮುಂದೆ ತೆರಳುತ್ತಿದ್ದಂತೆ ಹಿಂದಿನಿಂದ ಬಂದಿದ್ದ ವ್ಯಕ್ತಿ ಏಕಾಏಕಿ ರಾಡ್‌ನಿಂದ ಹಲ್ಲೆ ಮಾಡಿ ಬಾಯಿಯನ್ನು ಕೈ ಒತ್ತಿ ತಲೆಕೂದಲು ಹಿಡಿದು ಎಳೆದಾಡಿದ್ದಾನೆ. ನಿರಂತರವಾಗಿ ಹಲ್ಲೆ ಮಾಡಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ. ಬೇಡಿಕೊಂಡರೂ ಆತನ ಮನಸ್ಸು ಕರಗಲಿಲ್ಲ. ಹೊಡೆದ, ಚಿನ್ನಾಭರಣ ದೋಚಿಕೊಂಡೇ ಪರಾರಿಯಾದ. ವರಮಹಾಲಕ್ಷ್ಮೀ ವ್ರತಾಚರಣೆ ಹಿನ್ನೆಲೆಯಲ್ಲಿ ಹೊಸದಾಗಿ ಮಾಡಿರುವ ಮಾಂಗಲ್ಯ ಸರ ಹಾಗೂ ಬಳೆಯನ್ನು ತೊಟ್ಟಿದ್ದೆ. ಸಂಪೂರ್ಣ ಶುದ್ಧ ಕನ್ನಡದಲ್ಲೇ ಮಾತನಾಡುತ್ತಿದ್ದ’ ಎಂದು ಹಲ್ಲೆಗೊಳಗಾಗಿರುವ ದೇವಕಿ ಪೂಜಾರಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

ತಲೆಗೂದಲಲ್ಲಿ ಸಿಲುಕಿಕೊಂಡ ರಾಡ್‌!
ದೇವಕಿ ಪೂಜಾರಿ ಅವರು ಪುತ್ರ ಅದ್ವಿಕ್‌ನನ್ನು ಶಾಲಾ ವಾಹನದಿಂದ ದಟ್ಟವಾಗಿರುವ ಹಾಡಿಯ ನಡುವೆ ನಿರ್ಜನ ಪ್ರದೇಶದಲ್ಲೇ ಮನೆಗೆ ಕರೆದುಕೊಂಡು ಬರಬೇಕಾಗಿತ್ತು. ಇದೇ ಸಂದರ್ಭ ದುರ್ಘ‌ಟನೆಯೂ ನಡೆದಿದೆ. ದುಷ್ಕರ್ಮಿ ಕೃತ್ಯವೆಸಗಿ ಪರಾರಿಯಾಗಿದ್ದಾಗ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ದೇವಕಿ ಅವರನ್ನು ರಕ್ಷಿಸಿದ್ದ ನೆರೆಮನೆಯ ನಿವಾಸಿ ಪಾರ್ವತಿ ಶೆಡ್ತಿ ಅವರು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಕಾಲಿಕ ಕಾರ್ಯ ಮಾಡಿದ್ದರು. ಘಟನೆಯ ತೀವ್ರತೆ ಎಷ್ಟಿತ್ತು ಎಂದರೆ ದೇವಕಿಯವರ ತಲೆಕೂದಲಿನಲ್ಲಿಯೇ ಕಬ್ಬಿಣದ ರಾಡ್‌ ಸಿಲುಕಿಕೊಂಡಿತ್ತು ಎಂದು ಪಾರ್ವತಿ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next