Advertisement

4.15 ಕೋ. ರೂ. ಮೌಲ್ಯದ ರಕ್ತ ಚಂದನ ಸಾಗಾಟ ಪ್ರಕರಣ: ಏಳು ಆರೋಪಿಗಳ ಜಾಮೀನು ರದ್ದು

12:58 AM Jun 18, 2022 | Team Udayavani |

ಮೂಡುಬಿದಿರೆ: ಕಿಲ್ಪಾಡಿ ಗ್ರಾಮದ ಕೆಂಚನಕೆರೆಯಲ್ಲಿ ಅರಣ್ಯ ಸಂಚಾರ ದಳವು ಜೂ. 1ರಂದು 8,308 ಕೆ.ಜಿ. ತೂಕದ ಸುಮಾರು ರೂ 4.15 ಕೋಟಿ ಮೌಲ್ಯದ 316 ರಕ್ತ ಚಂದನ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡು, ಏಳು ಮಂದಿ ಆರೋಪಿಗಳನ್ನು ಬಂಧಿಸಿದ ಪ್ರಕರಣದಲ್ಲಿ ಈ ಆರೋಪಿಗಳ ಜಾಮೀನನ್ನು ಮೂಡುಬಿದಿರೆ ನ್ಯಾಯಾಲಯವು ರದ್ದುಗೊಳಿಸಿದೆ.

Advertisement

ಆಂಧ್ರ ಪ್ರದೇಶದ ಸರಕಾರಿ ಅರಣ್ಯದಿಂದ ಕಡಿದ ರಕ್ತ ಚಂದನದ ದಿಮ್ಮಿಗಳನ್ನು ಲಾರಿಯ ಮೂಲಕ ಮಂಗಳೂರು ಬಂದರಿಗೆ ಸಾಗಿಸಿ ಅಲ್ಲಿಂದ ಸಿಂಗಾಪುರಕ್ಕೆ ಸಾಗಿಸುವ ಯೋಜನೆಯಂತೆ ಈ ಮರಗಳನ್ನು ಈಚರ್‌ ವಾಹನದಲ್ಲಿ ಬೈಹುಲ್ಲು ಹಾಕಿ ಸಾಗಾಟ ನಡೆಸುತ್ತಿದ್ದಾಗ ಅರಣ್ಯ ಸಂಚಾರ ದಳದ ಅರಣ್ಯಾಧಿಕಾರಿ ಶ್ರೀಧರ ಪಿ. ನೇತೃತ್ವದ ತಂಡ ಲಾರಿಯನ್ನು ವಶಪಡಿಸಿಕೊಂಡು ತಪಾಸಣೆ ನಡೆಸಿದಾಗ ರಕ್ತ ಚಂದನದ ಅಕ್ರಮ ಸಾಗಾಟ ಪ್ರಕರಣ ಬಯಲಾಗಿತ್ತು.

ಪ್ರಕರಣದಲ್ಲಿ ಎಂಟು ಜನ ಅಂತಾರಾಜ್ಯ ಆರೋಪಿಗಳ ಪೈಕಿ ಏಳು ಮಂದಿಯನ್ನು ಬಂಧಿಸಿದ್ದು ಓರ್ವ ಆರೋಪಿ ಚೇತನ್‌ ಪರಾರಿಯಾಗಿದ್ದ.

ಆಂಧ್ರಪ್ರದೇಶದ ನೆಲ್ಲೂರಿನ ಅಲಾಡಿ ರಾಜೇಶ ರೆಡ್ಡಿ, ಕೇರಳ ಪಾಲಕ್ಕಾಡ್‌ನ‌ ಸುಭಾಸ್‌, ತಿರುವಲ್ಲೂರಿನ ಪಾಲರಾಜ್‌, ಪಾಲಕ್ಕಾಡ್‌ನ‌ ಶಾಮೀರ್‌ ಎಸ್‌., ಪಾಲಕ್ಕಾಡ್‌ನ‌ ಕುಂಞಿ ಮಹಮ್ಮದ್‌, ಕೊಯಮತ್ತೂರಿನ ಅನಿಲ್‌ ಕುಮಾರ್‌, ತಿರುವೆಳ್ಳೂರ್‌ನ ದಿನೇಶ್‌ ಕುಮಾರ್‌ ಕೆ. ಪ್ರಕರಣದಲ್ಲಿ ಬಂಧಿತರಾದವರು.

ಮಲೇಶ್ಯ, ಸಿಂಗಾಪುರ, ದುಬಾೖ ಮೊದಲಾದ ದೇಶಗಳಲ್ಲಿ ಮನೆ ಅಲಂಕರಣ, ಔಷಧ ಮೊದಲಾದ ಉದ್ದೇಶಗಳಿಗಾಗಿ ರಕ್ತಚಂದನಕ್ಕೆ ಭಾರೀ ಬೇಡಿಕೆ ಇದ್ದು ಮಂಗಳೂರು ಬಂದರು ಮೂಲಕ ಬಹುಕೋಟಿ ರೂ. ಮೌಲ್ಯದ ರಕ್ತಚಂದನ ಸಾಗಿಸಲು ಸಿದ್ಧತೆ ನಡೆದಿತ್ತೆನ್ನಲಾಗಿದೆ.

Advertisement

ಆರೋಪಿಗಳು ಜಾಮೀನು ಕೋರಿ ಮೂಡುಬಿದಿರೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಈ ಕುರಿತ ವಾದ ವಿವಾದವನ್ನು ಆಲಿಸಿದ ಮೂಡುಬಿದಿರೆ ಸಿವಿಲ್‌ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಮಾಲಾ ಸಿ. ಜಾಮೀನು ಅರ್ಜಿಯನ್ನು ರದ್ದು ಪಡಿಸಿ ಹೆಚ್ಚುವರಿ ಕಲಂಗಳನ್ನು ಅಳವಡಿಸಲು ತನಿಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಶೋಭಾ ಎಸ್‌. ವಾದ ಮಂಡಿಸಿದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next