ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ತನ್ನ ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಗಂಡನ ಪ್ರಿಯತಮೆಯ ಕೊಲೆಗೆ ಸುಪಾರಿ ನೀಡಿದ್ದ ಮಹಿಳೆ ಸೇರಿ ಒಟ್ಟು 6 ಮಂದಿ ಆರೋಪಿಗಳನ್ನು ಜಿಲ್ಲೆಯ ಶಿಡ್ಲ ಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಪಹರಣಕಾರರಲ್ಲಿ ಸತ್ತಂತೆ ನಟಿಸಿ ಸುಪಾರಿ ಕೊಲೆಯಿಂದ ಪಾರಾದ ಮಹಿಳೆಯನ್ನು ಬೆಂಗಳೂರಿನ ಕೆಂಪೇಗೌಡ ಮುಖ್ಯ ರಸ್ತೆಯ ನಿವಾಸಿ ಅರ್ಚನಾ ಕೋಂ ವಿಶ್ವನಾಥ (34) ಎಂದು ಗುರುತಿಸಲಾಗಿದ್ದು, ಅ.24 ರಂದು ನಡೆದಿರುವ ಇದೀಗ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?: ಯೋಗ ಶಿಕ್ಷಕಿಯಾಗಿರುವ ಅರ್ಚನಾಗೆ ದೇವನಹಳ್ಳಿ ತಾಲೂಕಿನ ಎಲೆಯೂರು ಗ್ರಾಮದ ನಿವಾಸಿ ವಿಶ್ವನಾಥ ಬಿನ್ ಅಂಜಿನಪ್ಪ ಅವರೊಂದಿಗೆ 13 ವರ್ಷಗಳ ಹಿಂದೆ ವಿವಾಹ ಆಗಿದೆ. ಆದರೆ, ಎರಡು ವರ್ಷದಿಂದ ಪ್ರತ್ಯೇಕವಾಗಿ ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಳು. 2021ರಲ್ಲಿ ಪತಿಗೆ ಅಪಘಾತವಾದಾಗ ಗಂಡನ ಸ್ನೇಹಿತ ಸಂತೋಷ್ಕುಮಾರ್ ಎಂಬಾತ ಪರಿಚಯವಾಗಿದ್ದ. ಅರ್ಚನಾ ಜೊತೆ ಸಲುಗೆಯಿಂದ ಮಾತನಾಡುತ್ತಿದ್ದ.
ಇದನ್ನು ಗಮನಿಸಿದ ಸಂತೋಷ್ ಕುಮಾರ್ ಪತ್ನಿ ಬಿಂದು, ಅರ್ಚನಾಳನ್ನು ಕೊಲೆ ಮಾಡುವ ಸಲುವಾಗಿ ಅರ್ಚನಾರ ಬಳಿ ಯೋಗ ತರಬೇತಿ ಪಡೆಯಲು ಹೋಗುತ್ತಿದ್ದ ಆಂಧ್ರದ ಮಡಕಶಿರ ಮೂಲದ ಸತೀಶ್ ರೆಡ್ಡಿಗೆ ಕೊಲೆ ಸುಪಾರಿ ನೀಡಿದ್ದಳು. ತಾನು ಗನ್ ತರಬೇತಿ ಕೊಡುತ್ತೇನೆ ಒಮ್ಮೆ ನೋಡು ಬಾ.. ಎಂದು ಸತೀಶ್ ರೆಡ್ಡಿ ಕರೆದಿದ್ದು ಅದಕ್ಕೆ ಸೈ ಎಂದ ಅರ್ಚನಾ ಮಕ್ಕಳನ್ನು ಅಮ್ಮನ ಮನೆಗೆ ಕಳುಹಿಸಿ ಆತನ ಕಾರಿ ನಲ್ಲಿ ಹೋಗಿದ್ದಾಳೆ.
ಬಳಿಕ ರೆಡ್ಡಿ ಮತ್ತು ಆತನ ಸ್ನೇಹಿತರು ಶಿಡ್ಲ ಘಟ್ಟ ತಾಲೂಕಿಗೆ ಕರೆ ತಂದು ಆಕೆಯ ಮೇಲೆ ಬಲವಂತವಾಗಿ ಲೈಗಿಂಕ ದೌರ್ಜನ್ಯ ಮಾಡಿದ್ದು ಚಿನ್ನಾಭರಣ ಕಸಿದುಕೊಂಡಿದ್ದಾರೆ. ದಿನ್ನಮಿಟ್ಟೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಮೇಲೆ ಹಲ್ಲೆ ನಡೆಸಿದ್ದಾರೆ. ಅರ್ಚನಾ ಸತ್ತಂತೆ ನಟಿಸಿದ್ದಾಳೆ. ಆಗ ಸತೀಶ್ ರೆಡ್ಡಿ, ಆತನ ಸ್ನೇಹಿತರು, ಗುಂಡಿ ಅಗೆದು ಅರೆಬರೆಯಾಗಿ ಮಣ್ಣು ಮುಚ್ಚಿ ಪರಾರಿ ಆಗಿದ್ದರು. ಸ್ವಲ್ಪ ಸಮಯದ ನಂತರ ಅರ್ಚನಾ ಎದ್ದು ಬಂದು ಸ್ಥಳೀಯರ ಆಶ್ರಯದಿಂದ ದಿಬ್ಬೂರ ಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣದ ಬೆನ್ನತ್ತಿದ್ದಾಗ ಕೊಲೆ ಸುಪಾರಿ ರಹಸ್ಯ ಬೆಳಕಿಗೆ ಬಂದಿದೆ.