ಹುಬ್ಬಳ್ಳಿ: ಕೋವಿಡ್ 19 ಲಾಕ್‌ಡೌನ್‌ನಿಂದ ಕ್ರಿಕೆಟಿಗರು ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು, ಪಂದ್ಯಗಳನ್ನಾಡಲು ಸಾಧ್ಯವಾಗುತ್ತಿಲ್ಲ. ಆದರೆ ಈ ಸಂದರ್ಭವನ್ನು ಉದಯೋನ್ಮುಖ ಕ್ರಿಕೆಟಿಗರು ಕ್ರಿಕೆಟ್‌ನ ಮೂಲ ಸಂಗತಿಗಳನ್ನು ಅಭಿವೃದ್ಧಿಪಡಿಸಿಕೊಳ್ಳುವಲ್ಲಿ, ಕೌಶಲಗಳನ್ನು ಸಿದ್ಧಿಸಿಕೊಳ್ಳುವ ದಿಸೆಯಲ್ಲಿ ಹಾಗೂ ಮೆಂಟರ್‌ಗಳಿಂದ ಕಲಿತ ಪಾಠಗಳನ್ನು ಸ್ವ ಅನುಷ್ಠಾನಗೊಳಿಸುವಲ್ಲಿ ಕ್ರಿಯಾಶೀಲರಾಗಿದ್ದಾರೆ.
ಕ್ರಿಕೆಟ್ ಋತುವಿನಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿಗೆ ಮಹತ್ವದ ಸ್ಥಾನವಿದೆ. ಅಭ್ಯಾಸ, ಪಂದ್ಯಗಳನ್ನು ಹೆಚ್ಚಾಗಿ ಇದೇ ಅವಧಿಯಲ್ಲಿ ಸಂಘಟಿಸಲಾಗುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲೇ ಕ್ರಿಕೆಟ್ ಶಿಬಿರಗಳು ನಡೆಯುತ್ತಿದ್ದವು. ಆದರೆ ಕೋವಿಡ್ 19 ಕಾರಣದಿಂದಾಗಿ ಬೇಸಿಗೆ ಶಿಬಿರಗಳು ರದ್ದಾಗಿವೆ. ಆಸಕ್ತ ಕ್ರಿಕೆಟಿಗರು ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದು, ಆಟದಲ್ಲಿನ ತಮ್ಮ ದೌರ್ಬಲ್ಯಗಳನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿದ್ದಾರೆ.
ಸ್ವ ಅವಲೋಕನ: ಕೆಲ ಉದಯೋನ್ಮುಖ ಕ್ರಿಕೆಟಿಗರು ತಮ್ಮ ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡಿಂಗ್ ಅಭ್ಯಾಸದ ವಿಡಿಯೋಗಳನ್ನು ತಮ್ಮ ಮೆಂಟರ್‌ಗಳಿಗೆ ಕಳುಹಿಸುತ್ತಿದ್ದಾರೆ. ಮೆಂಟರ್‌ಗಳಿಂದ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲ ಅಕಾಡೆಮಿಗಳು ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿವೆ. ಕ್ರಿಕೆಟನ್ನು ಆನ್‌ಲೈನ್ ಮೂಲಕ ಕಲಿಸುವುದು ಕಷ್ಟವಾದರೂ ಈ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಉದಯೋನ್ಮುಖ ಆಟಗಾರರನ್ನು ಹುರಿದುಂಬಿಸುವುದು, ಕ್ರಿಯಾಶೀಲವಾಗಿಸುವುದಕ್ಕೆ ಹಲವು ಅಕಾಡೆಮಿಗಳು ಆದ್ಯತೆ ನೀಡುತ್ತಿವೆ. ಯುಟ್ಯೂಬ್ ನೆರವಿನಿಂದ ಕೂಡ ಮಕ್ಕಳು ಫಿಟ್‌ನೆಸ್ ಡ್ರಿಲ್‌ಗಳನ್ನು ಮಾಡುತ್ತಿದ್ದಾರೆ. ವಾರದ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅಭ್ಯಾಸ ಮಾಡುತ್ತಿರುವುದು ವಿಶೇಷ.
ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮೊದಲಾದ ಪ್ರಸಿದ್ಧ ಕ್ರಿಕೆಟಿಗರು ಆಡಿದ ಒಳ್ಳೆ ಇನಿಂಗ್ಸ್‌ನ ವಿಡಿಯೋಗಳನ್ನು ವೀಕ್ಷಿಸುವಂತೆ ಮೆಂಟರ್‌ಗಳೇ ಮಕ್ಕಳಿಗೆ ತಿಳಿಸುತ್ತಾರೆ, ಇಲ್ಲವೇ ವಿಡಿಯೋ ಕಳಿಸುತ್ತಾರೆ. ಕ್ರಿಕೆಟಿಗರು ಬಳಕೆ ಮಾಡಿದ ಟೆಕ್ನಿಕ್‌ಗಳು, ಇನಿಂಗ್ಸ್ ಕಟ್ಟಿದ ಕುರಿತು ವಿವರಿಸಲಾಗುತ್ತದೆ.
ನಾವು ಅಕಾಡೆಮಿಯಲ್ಲಿ ಮಕ್ಕಳಿಗೆ ಕಲಿಸಿದ ವಿಷಯಗಳ ಆಧಾರದಲ್ಲಿ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲಿ ಅವರು ಅಭ್ಯಾಸ ನಡೆಸಿದ ವಿಡಿಯೋಗಳನ್ನು ಕಳಿಸುತ್ತಿದ್ದಾರೆ. ಇದರ ಮೂಲಕ ಮಕ್ಕಳ ತಪ್ಪುಗಳನ್ನು ತಿದ್ದಲಾಗುವುದು ಹಾಗೂ ಅವರ ಸಂದೇಹಗಳನ್ನು ಸರಿಪಡಿಸಲಾಗುವುದು. ಕೇವಲ ಪಂದ್ಯದ ಹೈಲೈಟ್ಸ್ ನೋಡಿದರೆ ಸಾಲದು. ಪ್ರತಿಯೊಂದು ಎಸೆತವನ್ನೂ, ಬ್ಯಾಟಿಂಗ್ ಶೈಲಿಯನ್ನು ತಾಳ್ಮೆಯಿಂದ ನೋಡುವುದು ಅವಶ್ಯಕವಾಗಿದೆ.
ಸೋಮಶೇಖರ ಶಿರಗುಪ್ಪಿ, ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಮೆಂಟರ್
ಕೋವಿಡ್ 19 ಕಾರಣದಿಂದಾಗಿ ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಹುಡುಗರು ಮನೆಯಲ್ಲಿಯೇ ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ. ಹ್ಯಾಂಗಿಂಗ್ ಬಾಲ್ ಸೇರಿದಂತೆ ವಿವಿಧ ಡ್ರಿಲ್‌ಗಳ ಮೂಲಕ ಹುಡುಗರು
ಅಭ್ಯಾಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಅವಧಿ ಯನ್ನು ಕ್ರಿಕೆಟ್ ಕಲಿಕೆಗೆ ಪೂರಕವಾಗಿಸಿಕೊಳ್ಳಬೇಕು. ದೌರ್ಬಲ್ಯ ತಿದ್ದಿಕೊಂಡು ಪರಿಪೂರ್ಣವಾಗುವ ದಿಸೆಯಲ್ಲಿ ಲಾಕ್‌ಡೌನ್ ಅವ ಧಿಯನ್ನು ಬಳಕೆ ಮಾಡಿಕೊಳ್ಳುವುದು ಸೂಕ್ತ.
– ಶಿವಾನಂದ ಗುಂಜಾಳ, ಬಿಡಿಕೆ ನ್ಪೋರ್ಟ್ಸ್ ಫೌಂಡೇಶನ್
–ವಿಶ್ವನಾಥ ಕೋಟಿ