Advertisement

ಕ್ರಿಕೆಟ್‌ ಪ್ರೇಮಿ ತೇಜಿಂದರ್‌ಗೆ ಶಾಟ್‌ಪುಟ್‌ ಚಿನ್ನ

03:56 PM Aug 26, 2018 | Harsha Rao |

ಜಕಾರ್ತಾ: ಬಾಲ್ಯದಲ್ಲಿ ಕ್ರಿಕೆಟ್‌ ಹುಚ್ಚು ಹತ್ತಿಸಿಕೊಂಡಿದ್ದ ತೇಜಿಂದರ್‌ ಪಾಲ್‌ ಸಿಂಗ್‌ ಟೂರ್‌ ಎಂಬ ಪಂಜಾಬಿನ ಈ ಯುವಕ ಈಗ ಭಾರತದಲ್ಲಿ ಮನೆಮಾತಾಗಿದ್ದಾರೆ. ಕಾರಣ ಕ್ರಿಕೆಟ್‌ ಅಲ್ಲ, ಶಾಟ್‌ಪುಟ್‌. ಏಶ್ಯನ್‌ ಗೇಮ್ಸ್‌ನಲ್ಲಿ ಶನಿವಾರದಿಂದ ಆರಂಭವಾಗಿರುವ ಆ್ಯತ್ಲೆÉಟಿಕ್ಸ್‌ನ ಶಾಟ್‌ಪುಟ್‌ನಲ್ಲಿ ಸರಿಸಾಟಿಯಿಲ್ಲದ ಪ್ರದರ್ಶನ ನೀಡಿದ ತೇಜಿಂದರ್‌ ಸಿಂಗ್‌ ಏಶ್ಯನ್‌ ಗೇಮ್ಸ್‌ ಮತ್ತು ರಾಷ್ಟ್ರೀಯ ದಾಖಲೆ ನಿರ್ಮಿಸಿ ಚಿನ್ನವನ್ನೇ ಗೆದ್ದಿದ್ದಾರೆ. ಇದರೊಂದಿಗೆ ಶನಿವಾರ ದಿನ ಒಂದು ಚಿನ್ನ ಬರಲಿಲ್ಲವಲ್ಲ ಭಾರತೀಯರ ಕೊರಗಿಗೂ ಸಂಜೆ ಹೊತ್ತಿಗೆ ಉತ್ತರ ಸಿಕ್ಕಿತು.

Advertisement

ಪಂಜಾಬ್‌ನ ಖೋಸಾ ಪಾಂಡೊ ಎಂಬ ಊರಿನವರಾದ ತೇಜಿಂದರ್‌ ಸಿಂಗ್‌ ನಿರ್ವಹಣೆಯ ಸಮೀಪಕ್ಕೂ ಉಳಿದವರು ಬರಲಿಲ್ಲ. ಒಟ್ಟು ಆರು ಬಾರಿ ಕಬ್ಬಿಣದ ಗುಂಡನ್ನು ಎಸೆದ ತೇಜಿಂದರ್‌ ಒಮ್ಮೆ ವಿಫ‌ಲರಾದರು. ಈ ಯತ್ನಗಳ ಪೈಕಿ 20.75 ಮೀ.ಗಳಷ್ಟು ದೂರವನ್ನು ತಮ್ಮ 5ನೇ ಯತ್ನದಲ್ಲಿ ಎಸೆದರು. ಇದು ಅವರಿಗೆ ದಾಖಲೆಯ ಚಿನ್ನವನ್ನೇ ತಂದೊಪ್ಪಿಸಿತು. ಚೀನದ ಲಿಯು ಯಾಂಗ್‌ 19.52 ಮೀ. ದೂರ ಎಸೆದು ಬೆಳ್ಳಿ ಗೆದ್ದರೆ, ಕಜಕಿಸ್ಥಾನದ ಇವಾನ್‌ ಇವಾನೊವ್‌ 19.40 ಮೀ. ಎಸೆದು ಕಂಚು ಗೆದ್ದರು.

ಕ್ರಿಕೆಟಿಗನಾಗಲು ಹೊರಟಿದ್ದರು
ಬಾಲ್ಯದಲ್ಲಿ ತೇಜಿಂದರ್‌ಗೆ ಎಲ್ಲ ಭಾರತೀಯ ಬಾಲಕರಂತೆ ಕ್ರಿಕೆಟ್‌ ಹುಚ್ಚಿತ್ತು. ಯಾವಾಗಲೂ ಕ್ರಿಕೆಟ್‌ನಲ್ಲೇ ಮುಳುಗಿರುತ್ತಿದ್ದರು. ಅವರ ತಂದೆ ಕ್ರಿಕೆಟ್‌ ಬೇಡ, ಶಾಟ್‌ಪುಟ್‌ನಲ್ಲಿ ಯತ್ನ ಮಾಡು ಎಂದರು. ಇದನ್ನು ಸ್ವೀಕರಿಸಿದ ತೇಜಿಂದರ್‌ 2006ರಿಂದ ಶಾಟ್‌ಪುಟ್‌ನಲ್ಲಿ ತರಬೇತಿ ಆರಂಭಿಸಿದರು.

ನೌಕಾದಳದಲ್ಲಿ ಕೆಲಸ
ತೇಜಿಂದರ್‌ ಸಿಂಗ್‌ ಕ್ರೀಡಾ ಮೀಸಲಾತಿ ಯಡಿ ಭಾರತೀಯ ನೌಕಾದಳದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅಲ್ಲಿ ಅವರಿಗೆ ನಿರಂತರ ತರಬೇತಿ ಜೊತೆಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲೂ ಅನುಕೂಲವಾಗಿದೆ.

135 ಕೆಜಿ ತೂಕ, 6.4 ಅಡಿ ಎತ್ತರ
ಶಾಟ್‌ಪುಟ್‌ ಎಸೆತಕ್ಕೆ ವಿಪರೀತ ದೈಹಿಕ ಸಾಮರ್ಥ್ಯ ಬೇಕು. ತೇಜಿಂದರ್‌ ಸಿಂಗ್‌ 135 ಕೆಜಿ ಅಂದರೆ ಒಂದೂವರೆ ಕ್ವಿಂಟಾಲ್‌ಗೆ ಸಮೀಪದ ದೇಹತೂಕ ಹೊಂದಿದ್ದಾರೆ. 6.4 ಅಡಿ ಎತ್ತರದೊಂದಿಗೆ ದೈತ್ಯ ದೇಹಗಾತ್ರ ಹೊಂದಿದ್ದಾರೆ.

Advertisement

ಹಿಮಾ ದಾಸ್‌ ಫೈನಲಿಗೆ
ರಾಷ್ಟ್ರೀಯ ದಾಖಲೆ ಹೊಂದಿರುವ ಮತ್ತು ಭರವಸೆಯ ತಾರೆಯಾಗಿ ಬೆಳಗುತ್ತಿರುವ ಹಿಮಾ ದಾಸ್‌ ವನಿತೆಯರ 400 ಮೀ.ನಲ್ಲಿ ಫೈನಲ್‌ ಹಂತಕ್ಕೇರಿದ್ದಾರೆ. ತನ್ನ ಹೀಟ್‌ದಲ್ಲಿ 51.00 ಸೆ.ನಲ್ಲಿ ಗುರಿ ತಲುಪಿದ್ದ ದಾಸ್‌ ಎರಡನೆಯವರಾಗಿ ಸ್ಪರ್ಧೆ ಮುಗಿಸಿದ್ದರು. 50.86 ಸೆ.ನಲ್ಲಿ ಗುರಿ ತಲುಪಿದ್ದ ಸಾಲ್ವಾ ನಾಸೆರ್‌ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.

ಅನಾಸ್‌, ಆರೋಕಿಯ ಫೈನಲಿಗೆ
ಪುರುಷರ 400 ಮೀ.ನಲ್ಲಿ ಭಾರತದ ಮೊಹಮ್ಮದ್‌ ಅನಾಸ್‌ ಮತ್ತು ರಾಜೀವ್‌ ಅರೋಕಿಯ ಅವರು ಫೈನಲ್‌ ಹಂತಕ್ಕೇರಿದ್ದಾರೆ. 

ಚಿನ್ನ, ಬೆಳ್ಳಿ, ಕಂಚಿಗೂ ಒಡೆಯ!
ಅಚ್ಚರಿಯ ಸಂಗತಿಯೆಂದರೆ ತೇಜಿಂದರ್‌ ಸಿಂಗ್‌ ಅವರ ಅಗ್ರ ನಾಲ್ಕು ಶ್ರೇಷ್ಠ ಎಸೆತಗಳು ಉಳಿದ ಮೂವರ ನಾಲ್ಕು ಶ್ರೇಷ್ಠ ಎಸೆತಗಳಿಗಿಂತ ಉತ್ತಮವಾಗಿವೆ. ಹೀಗೆ ನೋಡುವುದಾದರೆ ಚಿನ್ನ, ಬೆಳ್ಳಿ, ಕಂಚು ಹಾಗೂ 4ನೇ ಸ್ಥಾನ ಅಷ್ಟನ್ನೂ ತೇಜಿಂದರ್‌ಗೆ ನೀಡಬೇಕು! ತೇಜಿಂದರ್‌ ಅವರ ಅಗ್ರ ಎಸೆತ 20.75 ಮೀ., 2ನೇ ಶ್ರೇಷ್ಠ ಎಸೆತ 20 ಮೀ., 3ನೇ ಶ್ರೇಷ್ಠ ಎಸೆತ 19.96 ಮೀ., 4ನೇ ಶ್ರೇಷ್ಠ ಎಸೆತ 19.96 ಮೀ. ದೂರ ಸಾಗಿತ್ತು. ಇದು ಉಳಿದ ನಾಲ್ವರ ಅಗ್ರ ನಾಲ್ಕು ಎಸೆತಗಳನ್ನು ಪ್ರತೀ ಬಾರಿ ಮೀರಿ ನಿಂತಿದೆ.

ಕನ್ನಡಿಗ ಚೇತನ್‌ ಫೈನಲ್‌ಗೆ
ಕನ್ನಡಿಗರಿಗೊಂದು ಸಂತೋಷದ ಸುದ್ದಿ. ಬೆಂಗಳೂರು ಸಮೀಪದ ಹೊಸಕೋಟೆಯ ಚೇತನ್‌ ಬಾಲಸುಬ್ರಹ್ಮಣ್ಯ ಏಶ್ಯಾಡ್‌ ಗೇಮ್ಸ್‌ನ ಎತ್ತರ ಜಿಗಿತದಲ್ಲಿ ಫೈನಲ್‌ ತಲುಪಿದ್ದಾರೆ. ಅರ್ಹತಾ ಸುತ್ತಿನಲ್ಲಿ ಬಿ ಗುಂಪಿನಲ್ಲಿದ್ದ ಅವರು 2.15 ಮೀ. ಎತ್ತರ ಹಾರಿ 5ನೇ ಸ್ಥಾನಿಯಾಗಿ ಫೈನಲ್‌ಗೇರಿದರು.

Advertisement

Udayavani is now on Telegram. Click here to join our channel and stay updated with the latest news.

Next