Advertisement

ರುದ್ರಭೂಮಿಗೆ ನುಗ್ಗಿ ದ ಕೆ.ಸಿ. ವ್ಯಾಲಿ ನೀರು

06:04 PM Oct 07, 2021 | Team Udayavani |

ಕೋಲಾರ: ನಗರದ ಅಮಾನಿಕೆರೆಯ ಬಳಿ ಇರುವ ಹಾಲುಮತ ರುದ್ರಭೂಮಿಗೆ ಕೆ.ಸಿ. ವ್ಯಾಲಿ ನೀರು ನುಗ್ಗಿ ಸಮಾಧಿಗಳು ಸಂಪೂರ್ಣ ಜಲಾವೃತವಾಗಿದ್ದು, ಮೃತರ ಸಂಬಂಧಿಕರು ಪಿತೃ ಪಕ್ಷದ ಸಮಾಧಿ ಪೂಜೆ ನಡೆಸಲು ಪರದಾಡಿದರು. ಪಿತೃಪಕ್ಷದ ಸಂಪ್ರದಾಯ ಪಾಲಿಸುವ ಸಲುವಾಗಿ ಸಾರ್ವಜನಿಕರು ಮುಳುಗಿದ ಸಮಾಧಿಗಳಿಗೆ ನೀರಲ್ಲೇ ನಿಂತು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂದಿತು. ನಗರಸಭೆಗೆ ಸೇರಿದ ಸ್ಮಶಾನಕ್ಕೆ ನುಗ್ಗಿದ ಕೆ.ಸಿ. ವ್ಯಾಲಿ ನೀರಿನಲ್ಲಿ ಸಮಾಧಿಗಳು ಮುಳುಗಿ ಹೋಗಿದ್ದು, ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Advertisement

ಇದನ್ನೂ ಓದಿ:- ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ನೀಡಿದ ಮಾಜಿ C.M ಕೃಷ್

ತಡೆಗೋಡಿ ದುರಸ್ತಿ ಮಾಡಿ: ಕೆರೆಯಲ್ಲಿ ಮರಳು ಹಾಗೂ ಮಣ್ಣು ತೆಗೆಯುವವರು ಸ್ಮಶಾನದ ತಡೆ ಗೊಡೆಯನ್ನು ಒಡೆದಿರುವುದರಿಂದ ಕೋಲಾರಮ್ಮನಕೆರೆ ತುಂಬಿ ನೀರು ಸ್ಮಶಾನಕ್ಕೆ ನುಗ್ಗಿ ಸಮಾಧಿಗಳು

ನೀರಿನಿಂದ ಮುಳುಗಿದ್ದು, ಮಹಾಲಯ ಅಮಾವಾಸ್ಯೆ ಇರುವ ಕಾರಣ ಸಮಾಧಿಗಳ ಪೂಜೆ ಮಾಡುವುದಕ್ಕೆ ಅಡ್ಡಿಯಾಗಿದ್ದು, ಕೂಡಲೇ ನಗರಸಭೆ ಅಧಿಕಾರಿಗಳು ಕ್ರಮವಹಿಸಿ ನೀರನ್ನು ತೆರವುಗೊಳಿಸಿ ಸ್ಮಶಾನ ತಡೆಗೋಡೆ ದುರಸ್ತಿ ಮಾಡುವಂತೆ ಆಗ್ರಹಿಸಿದರು.

ಇಲ್ಲವಾದಲ್ಲಿ ನಗರಸಭೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಶವ ತೇಲಿ ಬರುವ ಆತಂಕ: ಕೋಲಾರದಲ್ಲಿ ಕೊರೊನಾ ಸೋಂಕಿನಿಂದ ಸತ್ತವರನ್ನು ಇದೇ ಸ್ಮಶಾನದಲ್ಲಿ ಕೇವಲ ನಾಲ್ಕು ಐದು ಅಡಿ ಅಗೆದು ಸಮಾಧಿ ಮಾಡಿದ್ದು, ಅ ಕೊರೊನಾ ಸಮಾಧಿಗಳು ಸಂಪೂರ್ಣವಾಗಿ ಮುಳುಗಿವೆ. ಶವಗಳು ನೀರಿನಲ್ಲಿ ತೇಲಿಬರುವ ಆಂತಂಕದಲ್ಲಿ ಜನರಿದ್ದಾರೆ. ಒಂದು ವಾರದ ಹಿಂದೆ ಮಾಜಿ ಸಚಿವ ಆರ್‌. ವರ್ತೂರು ಪ್ರಕಾಶ್‌ ಭೇಟಿ ನೀಡಿ ಪರಿಶೀಲಿಸಿ ಸ್ಥಳಕ್ಕೆ ಕೋಲಾರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ಮಂಜುನಾಥ್‌ ಹಾಗೂ ಆಯುಕ್ತ ಪ್ರಸಾದ್‌ ಅವರನ್ನು ಕರೆಸಿಕೊಂಡು ನೀರು ಸ್ಮಶಾನವನ್ನು ಆವರಿಸುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

Advertisement

ಸೂಕ್ತ ಕ್ರಮದ ಭರವಸೆ: ಕೇವಲ ಮರಳು ಮೂಟೆಗಳನ್ನು ಹಾಕಿ ನಗರಸಭೆ ಸಿಬ್ಬಂದಿ ಕೈತೊಳೆದು ಕೊಂಡಿದ್ದು, ಮೊನ್ನೆ ಸುರಿದ ಭಾರೀ ಮಳೆಗೆ ಕೆ.ಸಿ. ವ್ಯಾಲಿ ನೀರು ಜೊತೆಯಾಗಿ ಸ್ಮಶಾನ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇತ್ತೀಚಿಗೆ ಸಾರ್ವಜನಿಕರು ಸ್ಮಶಾನದಲ್ಲಿ ಧರಣಿ ಮಾಡಲು ಮುಂದಾದಾಗ ಸ್ಥಳಕ್ಕೆಬಂದ ನಗರಸಭೆ ಆಯುಕ್ತ ಪ್ರಸಾದ್‌, ಅಧಿಕಾರಿಗಳ ತಂಡ ಹಾಲುಮತ ರುದ್ರಭೂಮಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಧರಣಿ ಎಚ್ಚರಿಕೆ: ಸಾರ್ವಜನಿಕರು ಹಾಗೂ ಹಾಲು ಮತ ಸಮುದಾಯದ ಮುಖಂಡರು ಕೂಡಲೇ ಕ್ರಮವಹಿಸುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಯಾರಾದರು ಸತ್ತಾಗ ಅವರನ್ನು ಉಳಲು ಜಾಗವಿಲ್ಲವಾದರಿಂದ ನಗರಸಭೆ ಮುಂದೆ ಶವವಿಟ್ಟು ಧರಣಿ ಮಾಡುವ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪ್ರಸಾದ್‌ ಬಾಬು , ಯುವ ಮುಖಂಡ ಪ್ರಜ್ವಲ್‌ ದೀಪು , ಸತೀಶ್‌, ಲೋಕೇಶ್‌ , ನಾಗರಾಜ್‌ ಮತ್ತಿತರರಿದ್ದರು. ವಿವಿಧ ಸಮಾಧಿಗಳಲ್ಲಿ ಪಿತೃಪಕ್ಷ ಪೂಜೆ: ನಗರದ ವಿವಿಧ ಸ್ಮಶಾನಗಳಲ್ಲಿ ಸಾರ್ವಜನಿಕರು ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸುವ ಮೂಲಕ ಪಿತೃ ಪಕ್ಷಗಳ ಪೂಜೆ ನೆರವೇರಿಸಿ, ತಮ್ಮನ್ನು ಅಗಲಿದವ ಸ್ಮರಣಾರ್ಥ ಅವರ ಇಷ್ಟಾರ್ಥ ತಿಂಡಿ ತಿನಿಸುಗಳನ್ನು ಪೂಜೆಗೆ ಇಟ್ಟು ಸದ್ಗತಿಗಾಗಿ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next