ಗ್ರಾಹಕ ಕ್ರೆಡಿಟ್ ಕಾರ್ಡ್ ಬಳಸಿ ಯಾವುದೇ ವಸ್ತು ಖರೀದಿಸಿದಾಗ, ಆ ವಸ್ತುವಿನ ಪೂರ್ತಿ ಬೆಲೆಯನ್ನು ತೆತ್ತಿರುತ್ತಾನೆ. ಆ ಹಣವನ್ನು ಕಂತುಗಳ ಲೆಕ್ಕದಲ್ಲಿ ಮರಳಿಸಬೇಕಾಗುತ್ತದೆ. ಒಂದು ವೇಳೆ ಗ್ರಾಹಕನಿಗೆ ತಾನು ಕೊಂಡ ಆ ವಸ್ತು ಇಷ್ಟವಾಗದೇ ಮರಳಿಸಿದರೆ, ಕ್ರೆಡಿಟ್ ಕಾರ್ಡ್ ಪಾವತಿಯ ಗತಿ ಏನಾಗುತ್ತದೆ? ಗ್ರಾಹಕ ಮರಳಿಸಿದ ವಸ್ತು, ಸ್ಟೋರನ್ನು ತಲುಪಿದ ಕೂಡಲೆ ರೀಫಂಡ್ ಪ್ರಕ್ರಿಯೆಗಳು ಶುರುವಾಗುತ್ತವೆ. ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುವುದು ಬ್ಯಾಂಕ್‌ಗಳಲ್ಲಿ.
ಗ್ರಾಹಕ ಕ್ರೆಡಿಟ್ ಕಾರ್ಡ್ ಮೂಲಕ ಯಾವುದೇ ವಸ್ತುವನ್ನು ಖರೀದಿಸಿದಾಗ, ಕ್ರೆಡಿಟ್ ಕಾರ್ಡ್ ನೀಡಿದ ಬ್ಯಾಂಕು, ಆ ವಸ್ತುವಿನ ಮೊತ್ತವನ್ನು ಬ್ರೇಕ್ ಮಾಡಿ ಕಂತುಗಳನ್ನಾಗಿ (ಇಎಂಐ) ಪರಿವರ್ತಿಸಲು ಕೆಲ ಸಮಯವನ್ನು ತೆಗೆದುಕೊಂಡಿರುತ್ತದೆ. ರೀಫಂಡ್ ಪ್ರಕ್ರಿಯೆಯನ್ನು ಎರಡು ಬಗೆಯಾಗಿ ವಿಂಗಡಿ ಸಬಹುದು. ಮೊದಲನೆಯದು- ಇಎಂಐ ಫಿಕ್ಸ್ ಆಗುವ ಮೊದಲೇ ಗ್ರಾಹಕ ವಸ್ತುವನ್ನು ಮರಳಿಸುವುದು ಮತ್ತು ಎರಡನೆಯದು, ಇಎಂಐ ಫಿಕ್ಸ್ ಆದ ನಂತರ ವಸ್ತುವನ್ನು ಮರಳಿಸುವುದು.
ಇಎಂಐ ಫಿಕ್ಸ್ ಆಗುವುದಕ್ಕೆ ಮುನ್ನವೇ, ಗ್ರಾಹಕ ತಾನು ಕೊಂಡ ವಸ್ತುವನ್ನು ಮರಳಿಸಿದರೆ ಕ್ರೆಡಿಟ್ ಕಾರ್ಡ್ ಖಾತೆಗೆ ಅಷ್ಟೂ ಮೊತ್ತ ರೀಫಂಡ್ ಆಗುತ್ತದೆ. ಇಎಂಐ ಫಿಕ್ಸ್ ಆಗುವುದಕ್ಕೆ ಮುನ್ನವೇ ಅಂದರೆ, ಖರೀದಿ ನಡೆದ ಸ್ವಲ್ಪ ಸಮಯದಲ್ಲೇ ವಸ್ತುವನ್ನು ಮರಳಿಸಬೇಕಾ ಗುತ್ತದೆ. ಆ ಸಂದರ್ಭದಲ್ಲಿ ಡೌನ್ ಪೇಮೆಂಟ್ ಸಹಿತ ಬ್ಯಾಂಕ್‌ಗೆ ಹಣ ವರ್ಗಾವಣೆ ಯಾಗುತ್ತದೆ. ಇಎಂಐ ಫಿಕ್ಸ್ ಆದ ನಂತರ ನಡೆಯುವ ರೀಫಂಡ್ ಪ್ರಕ್ರಿಯೆಯಲ್ಲಿ ಪೂರ್ತಿ ಹಣ ಮರಳುತ್ತದೆಯಾ ದರೂ, ಅದಕ್ಕೆ ಇಂತಿಷ್ಟು ಎಂದು ಶುಲ್ಕವನ್ನು ವಿಧಿಸಬಹುದು.
ಈ ಮೊತ್ತ ಸಾಮಾನ್ಯವಾಗಿ ವಸ್ತುವಿನ ಮೌಲ್ಯದ ಶೇ.3 ಇರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಬಡ್ಡಿ ಮತ್ತು ತೆರಿಗೆ ಹಣವನ್ನು ಮರಳಿಸದೇ ಹೋಗಬಹುದು. ಇನ್ನು ಕೆಲ ಬ್ಯಾಂಕುಗಳು ವಸ್ತು ಖರೀದಿಯಾದ 15 ದಿನಗಳಲ್ಲಿ ಕ್ಯಾನ್ಸಲ್ ಆದರೆ, ಯಾವುದೇ ಶುಲ್ಕ ವಿಧಿಸದೆ ಪೂರ್ತಿ ಹಣವನ್ನು ಮರಳಿಸುತ್ತವೆ. ಇದು ಆಯಾ ಬ್ಯಾಂಕಿನ ಷರತ್ತುಗಳ ಮೇಲೆ ನಿರ್ಧರಿತವಾಗುತ್ತದೆ.