Advertisement

ಕ್ರೆಡಿಟ್‌ ಕಾರ್ಡ್‌ ಬಡ್ಡಿ, ಬ್ಯಾಂಕ್‌ ಶುಲ್ಕ ಕಡಿತ?

03:45 AM Feb 05, 2017 | |

ನವದೆಹಲಿ: ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿ ಆಗಿಲ್ಲ. ಅದಕ್ಕೆ ಹೆಚ್ಚು ಬಡ್ಡಿ ಬರುತ್ತದೆ ಎಂಬ ಚಿಂತೆ ಬೇಡ. ಇನ್ನು ಮುಂದೆ ಅದೂ ಕಡಿಮೆಯಾಗಲಿದೆ. ಎಟಿಎಂ ಕಾರ್ಡುಗಳನ್ನು ಬಳಸಿ ವಹಿವಾಟು ಮಾಡಿದರೆ ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆಂಬ ಆತಂಕವನ್ನೂ ದೂರ ಮಾಡಿ. 

Advertisement

ದೇಶಾದ್ಯಂತ ನಗದು ರಹಿತ ವಹಿವಾಟಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ  ವಹಿವಾಟು ಶುಲ್ಕ ಮತ್ತು ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲಿನ ಬಡ್ಡಿ ದರ ತಗ್ಗಿಸುವ ಬಗ್ಗೆ ಆರ್‌ಬಿಐ ಪ್ರಸ್ತಾಪ ಸಲ್ಲಿಸಿದೆ ಎಂದು ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಸಂತೋಷ್‌ ಗಂಗ್ವಾರ್‌ ತಿಳಿಸಿದ್ದಾರೆ. ಕಾಲಕಾಲಕ್ಕೆ ಆರ್‌ಬಿಐ ನೀಡುವ ಸಲಹೆ ಸೂಚನೆಗಳಿಗೆ ಅನುಸಾರವಾಗಿ ಆಯಾ ಬ್ಯಾಂಕ್‌ಗಳು ವಹಿವಾಟು ಶುಲ್ಕ ಪ್ರಮಾಣ ನಿರ್ಧರಿಸಲಿವೆ.

ಆಧಾರ್‌ ಆಧಾರಿತ ಪಾವತಿಗೆ ಶೇ.0.5ರಷ್ಟು ಪ್ರೋತ್ಸಾಹ ನೀಡುವುದಾಗಿ ನಬಾರ್ಡ್‌ ಈಗಾಗಲೇ ಘೋಷಿಸಿದೆ. ಇದರ ಜತೆಗೆ ರಾಷ್ಟ್ರೀಯ ಪಾವತಿ ನಿಗಮ ನಿಯಮಿತ (ಎನ್‌ಸಿಪಿಐ) ರುಪೇ ಕಾರ್ಡ್‌ಗಳನ್ನು ಬಳಸಿ ಪಾಯಿಂಟ್‌ ಆಫ್ ಸೇಲ್ಸ್‌ ಮಷೀನ್‌ ಮತ್ತು ಇ-ಕಾಮರ್ಸ್‌ ಕ್ಷೇತ್ರದಲ್ಲಿ ಬಳಕೆ ಮಾಡುವುದಕ್ಕೆ ವಿಧಿಸುವ ಶುಲ್ಕ ಹಿಂಪಡೆದಿದೆ. ಡೆಬಿಟ್‌ ಕಾರ್ಡ್‌ ಮೂಲಕ ಪಾಯಿಂಟ್‌ ಆಫ್ ಸೇಲ್ಸ್‌ನಲ್ಲಿ ಮಾಡುವ  1ಸಾವಿರ ರೂ.ಗಿಂತ ಒಳಗಿನ ವಹಿವಾಟಿಗೆ ಶೇ.0.25 ಮತ್ತು 2 ಸಾವಿರಕ್ಕಿಂತ ಮೇಲ್ಪಟ್ಟ ವಹಿವಾಟಿಗೆ ಸೇ.0.5ರಷ್ಟು ಶುಲ್ಕ ವಿಧಿಸುವ ಬಗ್ಗೆ ಈಗಾಗಲೇ ಘೋಷಣೆ ಮಾಡಲಾಗಿದೆ. ಮಾ.31ರ ವರೆಗೆ ಈ ನಿಯಮ ಜಾರಿಯಲ್ಲಿರಲಿದೆ.

ಇದರ ಜತೆಗೆ ಐಎಂಪಿಎಸ್‌ ಮತ್ತು ಯುಪಿಐ ಮೂಲಕ ವಹಿವಾಟು ಮಾಡಿದರೆ ಶುಲ್ಕ ವಿಧಿಸುವಂತೆಯೇ ಇಲ್ಲವೆಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಈ ನಡುವೆ ಮಂಗಳವಾರ ಮುಂಬೈನಲ್ಲಿ ಆರ್‌ಬಿಐನ ತ್ತೈಮಾಸಿಕ ಸಾಲ ನೀತಿ ಪರಿಶೀಲನಾ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಬಡ್ಡಿ ದರಗಳಲ್ಲಿ ಇಳಿಕೆಯಾಗಬಹುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next