ಮುಂಬೈ: ಕೇವಲ ಒಂದೇ ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ಸಾಲದ ಬಾಕಿ ಮೊತ್ತ ಒಟ್ಟಾರೆ ಬ್ಯಾಂಕ್ ಸಾಲದ ಎರಡು ಪಟ್ಟು ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ, ಏಪ್ರಿಲ್ ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ಸಾಲದ ಬಾಕಿಯು 2 ಲಕ್ಷ ಕೋಟಿ ರೂ. ದಾಟಿದೆ ಎಂದು ಆರ್‌ಬಿಐ ಹೇಳಿದೆ. ಅಸುರಕ್ಷಿತ ಸಾಲದ ಪ್ರಮಾಣ ಹೆಚ್ಚಳದ ಕುರಿತು ಆರ್‌ಬಿಐ ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಆರ್‌ಬಿಐ ಮಾಹಿತಿ ಪ್ರಕಾರ, ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದರೂ ಮರುಪಾವತಿ ಮಾಡದೇ ಉಳಿಸಿರುವ ಬಾಕಿ ಮೊತ್ತ ಪ್ರಸಕ್ತ ವರ್ಷದ ಏಪ್ರಿಲ್ ವೇಳೆಗೆ 2,00,258 ಕೋಟಿ ರೂ. ಆಗಿದೆ. ಅಂದರೆ 2022ರ ಏಪ್ರಿಲ್‌ಗೆ ಹೋಲಿಸಿದರೆ ಶೇ.29.7ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ, ಬ್ಯಾಂಕುಗಳು ನೀಡುವ ಸಾಮಾನ್ಯ ಸಾಲದ ಬಾಕಿ ಮೊತ್ತ 138.6 ಲಕ್ಷ ಕೋಟಿ ರೂ. ಆಗಿತ್ತು. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ.16ರಷ್ಟು ಏರಿಕೆ ಕಂಡಿದೆ.
ಕ್ರೆಡಿಟ್ ಕಾರ್ಡ್ ಬಾಕಿ ಹೆಚ್ಚಳವಾಗಲು ಸಾಲ ಮಾಡುವವವರ ಸಂಖ್ಯೆ ಏರಿಕೆಯಾಗಿರುವುದು ಮಾತ್ರ ಕಾರಣವಲ್ಲ, ಹಣದುಬ್ಬರ ಮತ್ತು ಪಾವತಿಗಾಗಿ ಹೆಚ್ಚು ಮೊತ್ತ ಬಳಕೆಯಾಗುತ್ತಿರುವುದು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಶೇ.5ಕ್ಕಿಂತಲೂ ಕಡಿಮೆ:
ಏಪ್ರಿಲ್‌ನಲ್ಲಿ ಒಟ್ಟಾರೆ 1.3 ಲಕ್ಷ ಕೋಟಿ ರೂ. ಮೊತ್ತಗಳಿಗಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೆ„ಪ್ ಮಾಡಲಾಗಿದೆ ಅಥವಾ ಆನ್‌ಲೈನ್‌ನಲ್ಲಿ ಬಳಸಲಾಗಿದೆ. ಇನ್ನು, ಭಾರತದ ಮಟ್ಟಿಗೆ ನೋಡುವುದಾದರೆ ದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರ ಪ್ರಮಾಣ ಶೇ.5ಕ್ಕಿಂತಲೂ ಕಡಿಮೆ. ಅಭಿವೃದ್ಧಿ ಹೊಂದುತ್ತಿರುವ ಅನೇಕ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲೇ ಕ್ರೆಡಿಟ್ ಕಾರ್ಡ್ ಬಳಕೆದಾರರು ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.