Advertisement
ನನ್ನ ಸ್ನಾತಕೋತ್ತರ ವಿಷಯ “ಉತ್ಪನ್ನ ವಿನ್ಯಾಸ’ವೇ ಆಗಿದ್ದರಿಂದ ಹೆಚ್ಚಿನ ಕಾಲ ಉತ್ಪನ್ನ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಸೃಜನಶೀಲತೆ ಎನ್ನುವ ವಿಷಯದ ಬಗ್ಗೆ ಕ್ಲಾಸಿನಲ್ಲಿ ಕಲಿಕೆ, ಪ್ರೊಫೆಸರ್‌ರೊಡನೆ ಚರ್ಚೆಯೂ ಸಹಜವೇ. ಒಂದು ಹೊಸ ಪ್ರಾಡಕ್ಟಿನ ವಿನ್ಯಾಸದ ಸಂದರ್ಭದಲ್ಲಿ ಉದಾಹರಣೆಗೆ ಒಂದು ವಾಷಿಂಗ್ ಮೆಷಿನ್ ತಯಾರಿಕೆ ಕಂಪೆನಿ ಒಂದು ಹೊಸ ವಾಷಿಂಗ್ ಮೆಷಿನ್ ವಿನ್ಯಾಸಿಸಿ, ತಯಾರಿಸಿ ಮಾರುಕಟ್ಟೆಗೆ ಬಿಡಬೇಕು ಎಂದು ನಿರ್ಧರಿಸಿದೆ ಎಂದು ಅಂದುಕೊಳ್ಳೋಣ. ಆ ಕಂಪೆನಿಯು ಮೊದಲು ಆ ಕ್ಷೇತ್ರಕ್ಕೆ ಸಂಬಂಧಪಟ್ಟು ಮಾರುಕಟ್ಟೆ ಸಮೀಕ್ಷೆ ನಡೆಸಿ, ಪ್ರಸ್ತುತ ಪ್ರಾಡಕ್ಟಿನ ತೊಂದರೆಗಳೇನೆಂದು ತಿಳಿದು ಜನರ ಆವಶ್ಯಕತೆಯ ಪಟ್ಟಿ ಮಾಡಬೇಕು. ಪಟ್ಟಿ ತಯಾರಾದ ಮೇಲೆ ಒಬ್ಬನೋ ಅಥವಾ ಸಾಮೂಹಿಕವಾಗೋ ವಿಚಾರ ಮಂಥನ ನಡೆಸಿ, ಕೆಲವು ಸಮಯಗಳ ಕಾಲ ಅವರ ಉಪಪ್ರಜ್ಞೆೆಯಲ್ಲೂ ಸ್ರವಿಸಿ ಇನ್ನೂ ಯಾರೂ ಕಂಡರಿಯದ ಹೊಸದೊಂದು ಐಡಿಯಾ/ಗಳು (ಕಲ್ಪನೆ) ಬರಬೇಕು. ನಂತರ ಆ ಉಪಪ್ರಜ್ಞೆೆಯನ್ನು ಪ್ರಜ್ಞೆ ಹಿಡಿಯಬೇಕು. ಬಂದ ಎಲ್ಲ ಐಡಿಯಾ ಅಥವಾ ಹೊಸ ವಿಚಾರಗಳಲ್ಲಿ ಯಾವುದು ಹೆಚ್ಚು ಪ್ರಾಯೋಗಿಕವಾಗಿ ಸಾಧ್ಯ ಎನ್ನುವುದನ್ನು ಪರೀಕ್ಷೆಗೆ ಒಳಪಡಿಸಿ ನಂತರ ಒಂದು ವಿಚಾರವನ್ನು ಮುಂದುವರಿಸಿ, ಉತ್ಪಾದಿಸಿ ಮಾರುಕಟ್ಟೆಗೆ ಬಿಡಬೇಕು. ಹೀಗೆ ಪ್ರೊಫೆಸರ್‌ಗಳ ವಿಚಾರ ಮುಂದುವರಿಯುತ್ತಿದ್ದರೆ ಪೂರ್ತಿ ಮುಂದೆ ಕುಳಿತಿರದ ನಮ್ಮ ತುಂಟತಲೆಯಲ್ಲಿ ಮಾತ್ರ ಅದಕ್ಕೆ ಸಾದೃಶ್ಯ ಅಥವಾ ಸಾಮ್ಯವೊಂದು ಗೋಚರಿಸುತ್ತಿತ್ತು. ಅರೆ! ಪ್ರಾಡಕ್ಟಿನ ವಿನ್ಯಾಸಕ್ಕೂ ಕಳ್ಳತನಕ್ಕೂ ಒಂದು ಹತ್ತಿರದ ಹೋಲಿಕೆ ಸ್ಪಷ್ಟ ಇದೆಯಲ್ಲ! ಎಂದು. ವಿನ್ಯಾಸದಲ್ಲಿರುವಂತಹ ಮಾರುಕಟ್ಟೆಯ ಸಮೀಕ್ಷೆ, ಹೊಸ ಐಡಿಯಾ, ಸಾಧ್ಯ-ಅಸಾಧ್ಯಗಳ ವಿಚಾರ ಎಲ್ಲವೂ ಕಳ್ಳತನವೆಂಬ ಹೊಸ ಸೃಷ್ಟಿಯಲ್ಲಿ ಗೋಚರಿಸುತ್ತ ಹೋಯಿತು. ಕಳ್ಳನೂ ಆತನ ಆವಶ್ಯಕತೆಗೆ ಉತ್ತರವಾಗಿ ಒಂದು ಪ್ಲಾಟ್‌ನ್ನು ತಯಾರಿಸಬೇಕಾಗುತ್ತದೆ. ಯಾವುದನ್ನು, ಎಲ್ಲಿ ಕಳ್ಳತನ ಮಾಡಬೇಕೆಂದು ನಿರ್ಧರಿಸಿ ಹಿಂದೆ ಮಾಡಿದಾಗ ಸಿಕ್ಕಿಹಾಕಿಕೊಂಡ ವಿಧಾನವನ್ನು ಬಿಟ್ಟು ಹೊಸದೊಂದು ವಿಧಾನವನ್ನು ನಿರ್ಧರಿಸಿ, ಅದರ ಸಾಧಕ-ಬಾಧಕಗಳನ್ನು ಗಮನಿಸಿ, ಕಳ್ಳತನ ಮಾಡುವ ದಿನದ ಮೊದಲೇ ಕೆಲವು ಬಾರಿ ಆ ಜಾಗಕ್ಕೆ ಭೇಟಿಕೊಟ್ಟು ಪರೀಕ್ಷಿಸಿ ನಂತರ ಕಳ್ಳತನ ಮಾಡಬೇಕು. ತಲೆಯಲ್ಲಿ ಬಂದ ಈ ವಿಚಾರಗಳನ್ನು ಆಗ ಪ್ರೊಫೆಸರ್‌ಎದುರು ಹೇಳುವ ಧೈರ್ಯ ಬರಲಿಲ್ಲ. ಕೆಲವು ಬಾರಿ ಕಾಲೇಜಿನಲ್ಲಿ ವಿನ್ಯಾಸದ ಉದ್ಯಮದಲ್ಲಿರುವ ತಜ್ಞರನ್ನು ಕರೆಸಿ ಅವರಿಂದ ಕೆಲವು ಬಾರಿ ಅವರ ಅನುಭವವನ್ನು ಹಂಚಿಕೊಳ್ಳುವ ಕಾರ್ಯಕ್ರಮವಿರುತ್ತಿತ್ತು. ಅವರ ಪ್ರಸ್ತುತಿ ಬಹಳ ಸಾರಿ ಬೇಜಾರು ತರಿಸಿದ್ದೇ ಹೆಚ್ಚು. ಆಗಲೂ ನಮ್ಮ ಅತಿ “ತುಂಟತಲೆ “ಇವರನ್ನು ಕರೆಸುವ ಬದಲು ಬಿಹಾರ, ಉತ್ತರ ಪ್ರದೇಶ, ಬೆಂಗಳೂರು ಇತ್ಯಾದಿ ಕಡೆಯಿಂದ ಹೆಸರಾಂತ (ಕುಖ್ಯಾತ) ಕಳ್ಳರನ್ನು ಕರೆಸಿ ಅವರ ಅನುಭವ ಹಂಚಿಕೊಂಡರೆ ಅವರ ಸೃಜನಶೀಲತೆಯೇ ಹೆಚ್ಚಿರಬಹುದು ಎಂದು ಯೋಚಿಸುತ್ತಿತ್ತು!
ಅಮಂಗಲ ವಿಷಯ ತಿಳಿದುಕೊಳ್ಳಲು ಕುತೂಹಲ ಹೆಚ್ಚು ಎಂದು ಬೇರೆಯಾಗಿ ಹೇಳಬೇಕಿಲ್ಲ. ಕಳ್ಳರ ಹೆಜ್ಜೆಗಳನ್ನು ವಿನ್ಯಾಸ ಕಲೆಗೆ ಸಮೀಕರಿಸಿ ಕೆಲವು ಉದಾಹರಣೆಗಳನ್ನು ಗಮನಿಸೋಣ. ಮೊದಲನೆಯದು ಇದು ನಾನು ನನ್ನ ಅಣ್ಣನಿಂದ ಕೇಳಿದ ಘಟನೆ! ಸುಮಾರು ಇಸ್ವಿ 1950-60ರಲ್ಲಿರಬೇಕು. ಆಗ ಬಹಳಷ್ಟು ಮನೆಗಳಲ್ಲಿ ಹಳೆಯ ಬೆಳ್ಳಿ ನಾಣ್ಯವಿದ್ದ ಕಾಲ. ನಮ್ಮ ಊರಿನ ವ್ಯಾಪಾರಿಯೊಬ್ಬ ಒಂದು ದಿನ ಸಂಜೆ ಎಲ್ಲರ ಮನೆಗೆ ಹೋಗಿ, “ಪರವಾನಿಗೆ ಇಲ್ಲದೇ ಯಾರೂ ಮನೆಯಲ್ಲಿ ಬೆಳ್ಳಿ ನಾಣ್ಯಗಳನ್ನು ಇಟ್ಟುಕೊಳ್ಳುವ ಹಾಗಿಲ್ಲ. ಇನ್ನೆರಡು ದಿನದಲ್ಲಿ ಸರಕಾರಿ ಅಧಿಕಾರಿಗಳು ಎಲ್ಲರ ಮನೆಯ ಮುಂದೆ ತಮ್ಮಲ್ಲಿರುವ ಹೋಕ ಯಂತ್ರವನ್ನು ತಂದು ಮನೆಯ ಅಂಗಳದಲ್ಲಿ ನಿಲ್ಲಿಸುತ್ತಾರೆ. ಒಮ್ಮೆ ಮನೆಯಲ್ಲಿ ಬೆಳ್ಳಿ ನಾಣ್ಯಗಳಿದ್ದರೆ ಆ ಯಂತ್ರವು ಚೊಯ್ಯೋಚೊಯ್ಯೋ ಎಂದು ಹೊಡೆದುಕೊಳ್ಳುತ್ತದೆ. ಆಗ, ನಿಮಗೆ ಜೈಲು ಆಗಬಹುದು, ನೋಡಿ ನನ್ನ ಹತ್ತಿರ ಪರವಾನಿಗೆ ಇದೆ, ನೀವು ನಿಮ್ಮ ಬೆಳ್ಳಿ ನಾಣ್ಯಗಳನ್ನು ನನಗೆ ಕೊಟ್ಟುಬಿಡಿ, ನನ್ನ ಕೈಯಲ್ಲಾಗುವಷ್ಟು ಹಣಕೊಡುತ್ತೇನೆ’ ಎಂದು ಹೇಳಿ ಎಲ್ಲರ ಮನೆಯ ಬೆಳ್ಳಿ ನಾಣ್ಯಗಳನ್ನು ಆತ ತೆಗೆದುಕೊಂಡು ಹೋದ.
Related Articles
Advertisement
ಮೂರನೆಯ ಉದಾಹರಣೆಗೆ ಹೋಗೋಣ. ಇದು ಎರಡು-ಮೂರು ವರುಷ ಹಿಂದಿನದು ಮತ್ತು ಒಂದು ಹೆಸರಾಂತ ಪೊಲೀಸ್ ಅಧಿಕಾರಿಯ ಬಾಯಿಂದ ಕೇಳಿದ್ದು. ಮನೆಯನ್ನು ಪೂರ್ತಿ ಕಳ್ಳತನ ಮಾಡಿ ಸುಮಾರು ದಿನವಾದ ಮೇಲೆ ಕಳ್ಳ, ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಕಳ್ಳ ಸಿಕ್ಕ ಮೇಲೆ ಪೊಲೀಸರು ಆತನ ಬಾಯಿ ಬಿಡಿಸಿದ್ದಾರೆ. “ನಾನು ಯಾವ ತಿಂಡಿ ಮಾಡಿದ್ದೇನೆ, ಅಡುಗೆಗೆ ಯಾವುದನ್ನು ಮಾಡಲು ತಯಾರಿ ನಡೆಸಿದ್ದೇನೆ, ಈಗ ನಾಯಿಯನ್ನು ಸ್ನಾನಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ, ಇವತ್ಯಾಕೋ ನನ್ನ ಕಣ್ಣುಗುಡ್ಡೆ ಕೆಂಪಗಾಗಿದೆ’ ಇತ್ಯಾದಿಗಳನ್ನು ವಿವರವಾಗಿ ಫೆೇಸ್‌ಬುಕ್‌ನಲ್ಲಿ ಹಾಕುವ ಮನೆಯ ಒಡತಿ ಗೋವಾಗೆ ಹೋಗಿದ್ದಳು. “ನಾನು ನಾಳೆ ಹೊರಡುತ್ತೇನೆ, ದಾರಿಯಲ್ಲಿ ಇದ್ದೇವೆ, ದಾವಣಗೆರೆಯಲ್ಲಿ ದೋಸೆ, ಕಾರವಾರದಲ್ಲಿ ಮೀನೂಟ, ಈಗಷ್ಟೇ ಹೊಟೇಲ್ ತಲುಪಿದೆವು, ಮೊದಲನೆಯ ದಿನದ ಜ್ಯೂಸ್, ಎರಡನೆಯ ದಿನದ ಬೀಚ್, ಮೂರನೇ ದಿನದ ಬಾರ್ಬಿಕ್ಯು’ ಎಲ್ಲವೂ ಫೆೆ‚ೇಸ್ ಬುಕ್ಕಿನಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆ ಅದನ್ನು ಇಣುಕಿದ ಕಳ್ಳ ಮೊದಲ ದಿನ ಅವರ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಂಡಿದ್ದಾನೆ. ಗೀಜರ್ ಆನ್ ಮಾಡಿಕೊಂಡು ಚೆನ್ನಾಗಿ ಬಿಸಿ ನೀರು ಸ್ನಾನ ಮಾಡಿದ್ದಾನೆ. ಪಲ್ಲಂಗದಲ್ಲಿ ಚೆನ್ನಾಗಿ ನಿದ್ರಿಸಿ, ಫ‚ೇಸ್‌ಬುಕ್‌ನಲ್ಲಿ ಬರುವ ಮನೆಯ ಒಡತಿಯ ಅಪ್‌ಲೋಡೆಡ್ ಸಂದೇಶಗಳ ಅನುಸಾರವಾಗಿ ಇಲ್ಲಿ ಹಂತಹಂತವಾಗಿ ಮನೆಯ ಪ್ರತಿಯೊಂದು ಸಾಮಾನನ್ನು ಕಳ್ಳತನ ಮಾಡಿ ಮೂರೂ ದಿವಸ ಅವರು ಹೇಗೆ ಗೋವಾದಲ್ಲಿ ಸುಖಶಾಂತಿನೆಮ್ಮದಿಯಿಂದ ಕಾಲ ಕಳೆದರೋ ಹಾಗೆ ಕಳ್ಳನೂ ಮೂರು ದಿವಸ ಅವರ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಂಡು ಕಾರ್ಯ ಮುಗಿಸಿದ್ದಾನೆ.
ಮೇಲಿನ ಮೂರು ಉದಾಹರಣೆಗಳೂ ಒಂದು ವ್ಯಕ್ತಿಗೆ ಸಂಬಂಧಪಟ್ಟಿದ್ದು. ಇಲ್ಲಿಯ ಎಲ್ಲ ನಡೆಯಲ್ಲಿ ಒಂದು ವಸ್ತು ಅಥವಾ ಪ್ರಾಡಕ್ಟಿನ ವಿನ್ಯಾಸದ ಅಭಿವೃದ್ಧಿಯ ಪ್ರತಿ ಹಂತವನ್ನೂ ಗುರುತಿಸಬಹುದು. ಮೊದಲನೆಯ ಉದಾಹರಣೆಯನ್ನು ವಿನ್ಯಾಸದಲ್ಲಿ ಬರುವ ಕ್ರೋಢೀಕರಿಸಿದ ಅಮೂಲ್ಯ ಮಾಹಿತಿಯಿಂದ ಹೊಸದೊಂದು ದಾರಿ, ಉಪಾಯ ಕಂಡುಹಿಡಿಯುವುದಕ್ಕೆ ಹೋಲಿಸಬಹುದು, ಎರಡನೆಯ ಉದಾಹರಣೆಯಿಂದ ವಿನ್ಯಾಸಕ ಎಷ್ಟೇ ಸರಿಯಾಗಿ ಉಪಾಯ ಯೋಜನೆ ಹಾಕಿಕೊಂಡರೂ ಕಾರ್ಯಗತಗೊಳಿಸುವ ಸಂದರ್ಭದಲ್ಲೂ/ಪ್ರತೀ ಹಂತದಲ್ಲೂ ಹೊಸದೊಂದು ಕಷ್ಟ ಎದುರಾಗಬಹುದು, ಆಗಲೂ ವಿನ್ಯಾಸಕ ಚಾತುರ್ಯದಿಂದ ನಿಭಾಯಿಸಬೇಕಾಗುತ್ತದೆ ಎನ್ನುವುದನ್ನು ಮನಗಾಣಬಹುದು. ಎರಡನೆಯ ಉದಾಹರಣೆಯಲ್ಲಿ ಕಳ್ಳತನದ ಪ್ರಕ್ರಿಯೆಯ ಮಧ್ಯದಲ್ಲೇ ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಾಗಿದೆ. ತಪ್ಪಿಸಿಕೊಳ್ಳಲು ಕಳ್ಳ ನಿರಂತರವಾಗಿ ಯೋಚಿಸಬೇಕಾಗಿದೆ ಮತ್ತು ಪ್ರತೀ ಪ್ರತಿಕೂಲ ಪರಿಸ್ಥಿತಿಯನ್ನೂ ತನ್ನ ಅನುಕೂಲಕ್ಕೆ ಪರಿವರ್ತಿಸಿಕೊಳ್ಳಬೇಕಿದೆ. (ಇಲ್ಲಿ ಕಳ್ಳನನ್ನು ಹಿಡಿದವನ ಜಾಗೃತಿ, ಸಾಮಾನ್ಯಜ್ಞಾನವನ್ನೂ ಗಮನಿಸಬೇಕಾಗಿದೆ). ಒಂದು ವಸ್ತುವಿನ ಖರೀದಿ, ಉಪಯೋಗದಲ್ಲೂ ಬಳಕೆದಾರನ ಜ್ಞಾnನ ತಿಳುವಳಿಕೆ ಆತನನ್ನು ಪಸೆ ಬೀಳಿಸುವುದಿಲ್ಲ ಅಥವಾ ಕಡಿಮೆ ಪಸೆ ಬೀಳಿಸುತ್ತದೆ! ಮೂರನೆಯ ಫ‚ೇಸ್‌ಬುಕ್ ಉದಾಹರಣೆಯಲ್ಲಿ ಕಳ್ಳ ಹೊಸದೊಂದು ತಂತ್ರಜ್ಞಾnನದ ಸಾಧ್ಯತೆ ತಿಳಿದುಕೊಂಡು ಹೇಗೆ ಕಳ್ಳತನವನ್ನು ಸಾಧಿಸಿದ ಎಂಬುದನ್ನು ಗಮನಿಸಬಹುದು. ಇವನ್ನೆಲ್ಲ ವಸ್ತು ವಿನ್ಯಾಸದ ಅನ್‌ಟಾಪ್ಡ್ ಏರಿಯಾ ಅನ್ನಬೇಕೋ, ಅಪಾರ್ಚುನಿಟಿ ಅನಾಲಿಸ್‌ನಿಂದ ಬಂದ ಫ‚ಲಿತಾಂಶವೆನ್ನಬೇಕೋ, ಅಡಾಪ್ಟೆಬಲ್ ಟು ನ್ಯೂಟೆಕ್ನಾಲಜಿ ಅಥವಾ ಹೊಸ ತಂತ್ರಜ್ಞಾನಕ್ಕೆ ತನ್ನನ್ನು ಒಡ್ಡಿಕೊಳ್ಳುವ, ಬಳಸುವ, ಹೊಂದಿಕೊಳ್ಳುವ ಗುಣವೆನ್ನಬೇಕೋ- ತಿಳಿಯದು!
ಹೀಗೆ ನಿರಂತರವಾಗಿ ಇನ್ನೂ ಮುಂದಿನ ಸಾವಿರ ವರುಷ ನಮ್ಮನ್ನು ಹೊಸದೊಂದು ರೀತಿಯಲ್ಲಿ ಪಸೆ ಬೀಳಿಸುವ ಈ ಕಳ್ಳತನವೆಂಬ ವಿನ್ಯಾಸಕಲೆ ಮತ್ತು ಇದಕ್ಕೆ ಹೊಂದಿಕೊಂಡ ಕಳ್ಳ-ಪೊಲೀಸ್ ಆಟ ಮುಂದುವರಿಯುವುದಂತೂ ಖಾತ್ರಿ. ಹಾಗಾದರೆ ವಿನ್ಯಾಸಕ್ಕೂ ಕಳ್ಳತನಕ್ಕೂ ಇರುವ ಸಾಮ್ಯ-ಭೇದಗಳ್ಯಾವವು?ಪ್ರತಿಭೆ, ಜ್ಞಾನ ಮತ್ತು ಕೌಶಲ ಸೃಜನಶೀಲತೆಯ ಮೂಲಮಂತ್ರಗಳು. ಇವೇ ವಿನ್ಯಾಸಕ್ಕೆ ಬಳಕೆಯಾಗುವುದು.ಹಾಗೆ ನೋಡಿದರೆ ಇವು ಕಳ್ಳತನದ ಮೂಲ ಮಂತ್ರಗಳೂ ಹೌದು! ಭೇದವಿರುವುದು ಅದರ ನೈತಿಕತೆಯಲ್ಲಿ. ಒಂದು ಸಮಾಜದ ಒಳಿತಿಗೆ. ಇನ್ನೊಂದು ಕೆಡುಕಿಗೆ. ಸದುದ್ದೇಶದಿಂದ ತಯಾರಿಸಿದ ಪ್ರಾಡಕ್ಟನ್ನು ಕೆಟ್ಟ ಉದ್ದೇಶಕ್ಕೆ ಬಳಸಿದಾಗ ಪ್ರಾಡಕ್ಟಿನ ತಪ್ಪಿಲ್ಲ, ಅದನ್ನು ಬಳಸುವವನ, ಬಳಸಿದ ರೀತಿ ತಪ್ಪು ಎಂದು ನಾವು ಕೇಳಿರುತ್ತೇವೆ. ಇದು ಭಾಗಶಃ ಸತ್ಯ. ಆದರೆ, ಸಮಾಜದ ಕೆಡುಕಿಗೇ ತಯಾರಿಸಿದ ಪ್ರಾಡಕ್ಟಿನ ಸಂದರ್ಭದಲ್ಲಿ ವಿನ್ಯಾಸ ಎನ್ನುವ ಶಬ್ದ ಅಷ್ಟು ಸಮಂಜಸವಲ್ಲವಾದೀತು. ಕೆಟ್ಟ ಉದ್ದೇಶದಿಂದಲೇ ತಯಾರಿಸಿದ ಪ್ರಾಡಕ್ಟ್ ಗಳು/ವರ್ಚುವಲ್ ಪ್ರಾಡಕ್ಟ್ಗಳು ಇಂದು ಹೇರಳವಾಗಿವೆ. ಪ್ರಾರಂಭದಲ್ಲಿ ಒಬ್ಬ ಗ್ರಾಹಕ ಇದನ್ನು ಅರ್ಥಮಾಡಿಕೊಳ್ಳಲಾರ.ಅರ್ಥೈಸಿಕೊಳ್ಳುವವರೆಗೆ ಕಾಲ ಮೀರಿರುತ್ತದೆ. ಹಿಂದೆ ಹೇಳಿದಂತೇ ಇದನ್ನೇ ಪಸೆ ಎನ್ನುವುದು!| ಸಾಂಸ್ಥಿಕ ಕಳ್ಳತನ !
ಮೇಲೆ ಕೊಟ್ಟ ಮೂರೂ ಉದಾಹರಣೆಗಳು ಒಂದು ವ್ಯಕ್ತಿಗೆ ಸಂಬಂಧ ಪಟ್ಟಿದ್ದು ಎಂದು ಹೇಳಿದೆ. ಅದೇ ಒಂದು ಸಂಸ್ಥೆಯ ಮೂಲಕ ಈ ಹೊಸ ಕಳ್ಳತನವೆಂಬ ವಿನ್ಯಾಸಕಲೆಯನ್ನು ಗಮನಿಸಿದರೆ- ಇಂದಿನ ಸಂದರ್ಭದಲ್ಲಿ ಅತ್ಯಂತ ಬೆಲೆಬಾಳುವ ವಸ್ತುವೆಂದರೆ ಒಂದು ವ್ಯಕ್ತಿಯ ವೈಯಕ್ತಿಕ ಮಾಹಿತಿ. ಇದನ್ನು ನಾವು ಉಪಯೋಗಿಸುವ ಫೇಸ್‌ಬುಕ್ ತರಹದ ವೆಬ್‌ಸೈಟ್‌ಗಳಿಗೆ ಕೊಟ್ಟಿದ್ದೇವೆ. ಅದರಲ್ಲಿ ಕೆಲವರು ಕೇಂಬ್ರಿಡ್ಜ್ ಅನಲಿಟಿಕಾದಂತಹ ಸಂಸ್ಥೆಗೆ ಈ ಮಾಹಿತಿಯನ್ನು ಮಾರಿದ್ದಾರೆ ಕೂಡ. ನಮ್ಮ ಪ್ರತೀ ಹೆಜ್ಜೆಯೂ ದಾಖಲಾಗುತ್ತಿರುವ ಈ ಕಾಲದಲ್ಲಿ ಅವರು ನಮ್ಮ ಹಿಂದಿನ ಹೆಜ್ಜೆಯನ್ನು ಅಭ್ಯಸಿಸಿ ಮುಂದೆ ಯಾವ ಹೆಜ್ಜೆಯನ್ನು ಹೇಗೆ ಎಲ್ಲಿ ಇಡಬೇಕು ಎನ್ನುವವರೆಗೆ ನಿರ್ಧರಿಸುತ್ತಾರೆ. ಅದಕ್ಕೆ ಪೂರಕವಾಗಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ನಮ್ಮ ಡಿಜಿಟಲ್ ಸ್ಕ್ರೀನ್‌ಗಳಾದ ಮೊಬೈಲ್, ಟ್ಯಾಬ್, ಕಂಪ್ಯೂಟರ್‌ಗಳು ಶೃಂಗಾರಗೊಳ್ಳುತ್ತವೆ. ತಮಗೆ ಬೇಕಾದಂತೇ ಅವರು ನಮ್ಮನ್ನು ಆಡಿಸಬಲ್ಲರು. ಒಂದು ವ್ಯಕ್ತಿಯ ಆದ್ಯತೆಗಳನ್ನು ಬದಲಿಸುವುದರಿಂದ ಹಿಡಿದು ಒಂದು ದೇಶದ ಚುನಾವಣೆಯನ್ನೂ ಅವರ ಆದ್ಯತೆಗೆ ತಕ್ಕಂತೇ ವಾಲಿಸ ಬಲ್ಲರು. ಜಗತ್ತಿನಲ್ಲಿ ಯಾವುದೂ ಉಚಿತವಿಲ್ಲ! ಅವರು ಮೊದಲು ಉಚಿತವೆಂದಿದ್ದಕ್ಕೇ ನೀವು ನಿಮ್ಮ ಮಾಹಿತಿ ಕೊಟ್ಟಿರುತ್ತೀರಿ.ಕೊಡುವಾಗ ನೀವು ಇದು ಮುಖ್ಯವಲ್ಲವೆಂದು ತಿಳಿದುಕೊಟ್ಟಿದ್ದೀರಿ.ಅವರು ಮೊದಲೇ ನಿಮ್ಮ ಮಾಹಿತಿ ಬಹಳ ಬೆಲೆಬಾಳುತ್ತದೆ ಎಂದು ಮನಗಂಡಿದ್ದಾರೆ ಹಾಗೂ ಕೊಟ್ಟ ದಿನದಿಂದಲೇ ಅವರು ಅದನ್ನು ಬಳಸುತ್ತಿದ್ದಾರೆ ಮತ್ತು ಬೇರೆಯವರಿಗೆ ಮಾರಿದ್ದಾರೆ ಕೂಡ. ಆಗಲೂ ಅವರೂ ಬಹಳ ಹಣ ಮಾಡಿದ್ದಾರೆ. ಹಾಗಾದರೆ ನೀವೇ ಕೊಟ್ಟ ಮಾಹಿತಿಯನ್ನು ನೀವು ಭದ್ರವಾಗಿಡಬೇಕೇ? ಅದಕ್ಕೂ ಅವರು ಈಗ ಹಣಕೇಳುತ್ತಿದ್ದಾರೆ. ಯಾವುದಕ್ಕೂ ಜುಟ್ಟು ಅವರ ಕೈಯಲ್ಲೇ ಇದೆ.ಇದಕ್ಕೂ ಮತ್ತು ಪ್ರತೀವಾರ ಹಫ್ತಾ ವಸೂಲಿ ಮಾಡುವ ರೌಡಿ/ಡಾನ್‌ಗಳಿಗೆ ಅಂತಹ ವ್ಯತ್ಯಾಸವಿಲ್ಲ. ಆತನೂ ಹೇಳುತ್ತಾನೆ, “ನಾನು ನಿಮಗೆ ಪ್ರೊಟೆಕ್ಷನ್ ಕೊಡುತ್ತೇನೆ, ನನಗೆ ಪ್ರತಿವಾರ ಇಂತಿಷ್ಟು ಕೊಡಿ’ ಎಂದು.ಹಾಗಾದರೆ ಯಾರಿಂದ ಪ್ರೊಟೆಕ್ಷನ್? ಆತನಿಂದ ಮತ್ತು ಆತನಂತೇ ಇರುವ ಇನ್ನೊಬ್ಬನಿಂದ ಪ್ರೊಟೆಕ್ಷನ್. ಒಂದು ವಾರ ಕೊಡುವ ಹಫ್ತಾ ಕೊಡದೇ ಇದ್ದರೆ ಆತನೇ ತೊಂದರೆ ಕೊಡುತ್ತಾನೆ. ಇವೆಲ್ಲವುದಕ್ಕಿಂತ ಮುಖ್ಯವಾಗಿ ನನಗನಿಸುವುದು ಒಂದು ವ್ಯಕ್ತಿ ಕಳ್ಳತನ ಮಾಡುವಾಗ ಅವನಲ್ಲಿ ಸ್ವಲ್ಪವಾದರೂ ಪಾಪಪ್ರಜ್ಞೆ ಕಾಡಬಹುದು. ಆದರೆ, ಇಂತಹ ಕೆಲಸಗಳು ಯಾವಾಗ ಸಾಂಸ್ಥಿಕರಣಗೊಳ್ಳುವುದೋ ಅದು ಪಾಪಪ್ರಜ್ಞೆಯಿಂದ ಬಹಳ ದೂರ ಸರಿಯುತ್ತದೆ. ಸಾವಿರಾರು ಬುದ್ಧಿವಂತ ಒಳ್ಳೆಯವರೂ ಅಂತಹ ಸಂಸ್ಥೆಗಳಲ್ಲಿ ದಿನಗೂಲಿಗಳಾಗಿ ಪ್ರತೀದಿನವೂ ಈ ತರಹದ ಹೊಸದೊಂದು ಐಡಿಯಾ ಹುಟ್ಟುಹಾಕುತ್ತಾರೆ. ಅದನ್ನೇ ವಿನ್ಯಾಸ ಅವಿಷ್ಕಾರ ಎಂದೂ ಕರೆಯುತ್ತೇವೆ! ಮಾತು ಮುಗಿಸುವ ಮುನ್ನ ವಿನ್ಯಾಸವನ್ನು ಹೊರತುಪಡಿಸಿ ಕಳ್ಳತನದ ಬಗ್ಗೆ ಎರಡು ಮಾತನಾಡಬೇಕು. ಕಳ್ಳತನದ ಹತ್ತಿರದ ವ್ಯಾಖ್ಯಾನವು ತನ್ನಲ್ಲಿಲ್ಲದ್ದನ್ನು ಬೇರೆಯವರಿಂದ ಪಡೆಯುವುದು, ಆದರೆ ಅನುಮತಿ ಇಲ್ಲದೇ. ನಾನು ಚಿಕ್ಕವನಿದ್ದಾಗ ಊರಲ್ಲಿ ಹಾಗೂ ಹೀಗೂ ಕಳ್ಳತನವಾದಾಗ ನಮ್ಮ ಮನೆಯಲ್ಲಿ ಚರ್ಚೆಗಳಾಗುತ್ತಿದ್ದವು. ಕಳ್ಳರನ್ನು ಕಂಬಕ್ಕೆ ಕಟ್ಟಿ ಹಾಕಿಕೊಂಡು ಹೊಡೆಯಬೇಕು, ಜೈಲಿಗೆ ಹಾಕಬೇಕು ಎಂದೆಲ್ಲಾ ಹೇಳುತ್ತಿದ್ದೆವು. ಆಗ ನಮ್ಮ ಅಮ್ಮ ಹಾಗೆಲ್ಲ ಹೇಳುವಾಗ, “ಬಡತನ ಅವರನ್ನು ಹಾಗೆ ಮಾಡಸ್ತು’ ಎಂದು ಹೇಳುತ್ತಿದ್ದಳು. ಆಗ ನಾವು ನಗುತ್ತಾ, “ನಾಳೆ ಕೊಲೆ ಮಾಡಿದರೂ ನೀನು ಅವ ಪಾಪ ಎಂದೇ ಹೇಳ್ತಾ?’ ಎಂದು ಕೇಳುತ್ತಿದ್ದೆವು. ಆದರೆ, ಈಗ ಅವಳು ಹೇಳಿದ ವಾಕ್ಯವನ್ನು ನೆನೆದರೆ ಅಂದಿನಷ್ಟು ಸರಳವಾಗಿ ಕಾಣುತ್ತಿಲ್ಲ. ಸಚ್ಚಿದಾನಂದ ಹೆಗಡೆ