Advertisement

ಆರೋಗ್ಯ ಸಂಬಂಧಿ ಆ್ಯಪ್‌ ಗಳ ರಚನೆ: ಮುಂಜಾಗ್ರತೆ ಅಗತ್ಯ

11:36 PM Jun 19, 2022 | Team Udayavani |

ಎರಡೂವರೆ ವರ್ಷಗಳ ಹಿಂದೆ ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡಿದ ಕೊರೊನಾ ಸಾಂಕ್ರಾಮಿಕ ಇನ್ನೂ ನಮ್ಮಿಂದ ದೂರವಾಗಿಲ್ಲ. ಆದರೆ ಈ ಸಾಂಕ್ರಾಮಿಕದ ಮೊದಲೆರಡು ಅಲೆ ದೇಶಾದ್ಯಂತ ಸೃಷ್ಟಿಸಿದ ಭೀಕರ ಆರೋಗ್ಯ ಬಿಕ್ಕಟ್ಟು ದೇಶದ ಇಡೀ ಆರೋಗ್ಯ ವಲಯದಲ್ಲಿನ ಲೋಪದೋಷಗಳನ್ನು ಜಗಜ್ಜಾಹೀರುಗೊಳಿಸಿದ್ದಂತೂ ಸುಳ್ಳಲ್ಲ. ಆದರೆ ಈ ಎಲ್ಲ ಕೊರತೆಗಳ ಹೊರತಾಗಿಯೂ ಆ ಬಳಿಕದ ತಿಂಗಳುಗಳಲ್ಲಿ ದೇಶದಿಂದ ಕೊರೊನಾವನ್ನು ಹಿಮ್ಮೆಟ್ಟಿಸುವಲ್ಲಿ ತೋರಿದ ಸಾಹಸ ಇಡೀ ವಿಶ್ವದ ಶ್ಲಾಘನೆಗೆ ಪಾತ್ರವಾಗಿತ್ತು ಎಂಬುದು ಮಾತ್ರ ದೇಶದ ಪಾಲಿಗೆ ಹೆಮ್ಮೆಯ ವಿಚಾರವೇ.

Advertisement

ಈ ಎಲ್ಲ ಲೋಪದೋಷಗಳು ಮತ್ತು ಸಾಧನೆಗಳು ದೇಶದ ಆರೋಗ್ಯ ಕ್ಷೇತ್ರಕ್ಕೆ ಬೂಸ್ಟರ್‌ ಡೋಸ್‌ ನೀಡಿರುವುದಂತೂ ಸುಳ್ಳಲ್ಲ. ಆರೋಗ್ಯ ಕ್ಷೇತ್ರದ ಬಗೆಗಿನ ಸರಕಾರ ಮತ್ತು ಸಾರ್ವಜನಿಕರ ಮನೋಭಾವವನ್ನೇ ಕೊರೊನಾ ಸಾಂಕ್ರಾಮಿಕ ಬದಲಾಯಿಸಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಾಧನ, ಸಲಕರಣೆ, ಪರಿಕರ, ಔಷಧ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ದಾಪುಗಾಲಿಟ್ಟಿದೆ.

ಕೊರೊನಾ ನಿರೋಧಕ ಲಸಿಕೆ ನೀಡಿಕೆ ಪ್ರಕ್ರಿಯೆಗಾಗಿ ಕೇಂದ್ರ ಸರಕಾರ ಪರಿಚಯಿಸಿದ ಕೊವಿನ್‌ ಆ್ಯಪ್‌ ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಯಾವ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬಹುದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ. ಇದೀಗ ಇದೇ ಮಾದರಿಯನ್ನು ಆರೋಗ್ಯ ಕ್ಷೇತ್ರದ ಇನ್ನಿತರ ಕೆಲಸಕಾರ್ಯಗಳಿಗೂ ಬಳಸಿಕೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ.

ಮಕ್ಕಳಿಗೆ ಲಸಿಕೆ ಹಾಕಿಸಲು, ರಕ್ತದಾನ ಮತ್ತು ಅಂಗಾಂಗ ದಾನ ಮಾಡಲು ಪ್ರತ್ಯೇಕ ಮೂರು ಆ್ಯಪ್‌ಗಳನ್ನು ಸಿದ್ಧಪಡಿಸಿ ಅದನ್ನು ಬಳಕೆ ಮಾಡಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮುಂದಾಗಿದೆ. ವರ್ಷಾಂತ್ಯದಲ್ಲಿ ಈ ಆ್ಯಪ್‌ ಸಿದ್ಧವಾಗಿ ಮುಂದಿನ ವರ್ಷದ ಆದಿಯಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳುವ ಸಾಧ್ಯತೆ ಇದೆ. ಮಕ್ಕಳ ಲಸಿಕೀಕರಣಕ್ಕಾಗಿ ಪ್ರತ್ಯೇಕ ಆ್ಯಪ್‌ ಒಂದನ್ನು ಸಿದ್ಧಪಡಿಸಿ ಅದರಲ್ಲಿ ಮಕ್ಕಳ ಬಗೆಗಿನ ಎಲ್ಲ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಿದಲ್ಲಿ ಮುಂದಿನ ಲಸಿಕೆಯನ್ನು ಪಡೆದುಕೊಳ್ಳಬೇಕಾದ ದಿನಾಂಕ, ಲಸಿಕಾ ಕೇಂದ್ರ ಇವೆಲ್ಲದರ ಕುರಿತಂತೆ ಮಕ್ಕಳ ಪೋಷಕರು ನೇರವಾಗಿ ಆ್ಯಪ್‌ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದೇ ಮಾದರಿಯಲ್ಲಿ ರಕ್ತದಾನಿಗಳು ಮತ್ತು ಅಂಗಾಂಗ ದಾನಿಗಳಿಗೂ ಪ್ರತ್ಯೇಕ ಆ್ಯಪ್‌ಗಳನ್ನು ಬಿಡುಗಡೆ ಮಾಡಿ ರೋಗಿಗೆ ತಮ್ಮ ಸನಿಹದಲ್ಲಿರುವ ದಾನಿಗಳಿಂದ ರಕ್ತ ಅಥವಾ ಅಂಗಾಂಗ ದಾನದ ಸೌಲಭ್ಯವನ್ನು ಪಡೆಯಲು ನೆರವಾಗಲಿದೆ.
ಕೇಂದ್ರ ಸರಕಾರದ ಈ ಚಿಂತನೆ ಸ್ವಾಗತಾರ್ಹ.

ಆದರೆ ಕೊವಿನ್‌ ಆ್ಯಪ್‌ನ ಕೆಲವೊಂದು ಲೋಪದೋಷಗಳತ್ತ ಪ್ರಾಧಿಕಾರ ಹೊಸ ಆ್ಯಪ್‌ ರಚನೆ ಮತ್ತು ಮಾಹಿತಿ ದಾಖಲಿಸುವ ವೇಳೆ ಎಚ್ಚರ ವಹಿಸುವುದು ಅತ್ಯಗತ್ಯ. ಕೊವಿನ್‌ ಆ್ಯಪ್‌ಗೆ ಹೆಸರು, ಮೊಬೈಲ್‌ ಸಂಖ್ಯೆ ಮತ್ತಿತರ ವಿವರಗಳನ್ನು ಆ್ಯಪ್‌ಗೆ ಅಪ್‌ಲೋಡ್‌ ಮಾಡುವ ಸಂದರ್ಭದಲ್ಲಿ ಲೋಪವಾಗಿದ್ದರಿಂದ ಯಾರ್ಯಾರದೋ ಮೊಬೈಲ್‌ ಸಂಖ್ಯೆಗೆ ತಲುಪಬೇಕಾಗಿದ್ದ ಸಂದೇಶ ಇನ್ಯಾರಿಗೋ ರವಾನೆಯಾದಂಥ ಪ್ರಸಂಗಗಳು ಹೊಸ ಆ್ಯಪ್‌ ರಚನೆ ಮತ್ತು ಬಳಕೆಯ ಸಂದರ್ಭದಲ್ಲಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ. ಆರೋಗ್ಯ ಸಂಬಂಧಿ ವಿಚಾರಗಳು ಸೂಕ್ಷ್ಮ ವಿಚಾರ ಮತ್ತು ಮಾಹಿತಿಗಳಾಗಿರುವುದರಿಂದ ಮತ್ತು ಅತ್ಯಂತ ಕ್ಲಪ್ತ ಸಮಯದಲ್ಲಿ ಲಭಿಸಬೇಕಿರುವುದರಿಂದ ಹೆಚ್ಚಿನ ಜಾಗ್ರತೆ ವಹಿಸುವುದು ಅತ್ಯಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next