Advertisement

ತಂಬಾಕು ಮುಕ್ತ ವಾತಾವರಣ ನಿರ್ಮಿಸಿ

04:35 PM Sep 25, 2022 | Team Udayavani |

ಗದಗ: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವ ಹಾಗೂ ಗೈರು ಹಾಜರಾಗುವುದಕ್ಕೆ ತಂಬಾಕು ವ್ಯಸನ ಕಾರಣವಾಗಿದ್ದಲ್ಲಿ, ಆ ಕುರಿತು ಸೂಕ್ತ ಆಪ್ತ ಸಮಾಲೋಚನೆ ನಡೆಸುವುದರ ಮೂಲಕ ಕಾಳಜಿ ವಹಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮೀಕ್ಷೆ ಪ್ರಕಾರ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಗೆ ಪ್ರಚೋದಿತರಾಗಿ ಚಟಕ್ಕೆ ಬಲಿಯಾಗುತ್ತಿರುವುದು ಕಂಡುಬಂದ ಕಾರಣ ಕೋಟಾ³-2003 ಸೆಕ್ಷನ್‌ 6ಬಿ ಪ್ರಕಾರ ಶಾಲಾ-ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ಆವರಣದಿಂದ 100 ಗಜದವರೆಗೆ ತಂಬಾಕು ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸಬೇಕೆಂದು ಹೇಳಿದರು.

ಶಾಲಾ-ಕಾಲೇಜು ಸುತ್ತಮುತ್ತ ಬಾರ್‌ ಆಂಡ್‌ ರೆಸ್ಟೋರೆಂಟ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಸಂಬಂಧಪಟ್ಟ ಇಲಾಖೆಯವರು ಕ್ರಮ ವಹಿಸಬೇಕು. ಪೌರಾಡಳಿತ ಇಲಾಖೆಯ ಸ್ಥಳೀಯ ಸಂಸ್ಥೆಗಳು ಎಲ್ಲಾ ಅಂಗಡಿ, ಮುಂಗಟ್ಟುಗಳ ಮುಂದೆ ಧೂಮಪಾನ ನಿಷೇಧ ಹಾಗೂ 18 ವರ್ಷದೊಳಗಿನ ತಂಬಾಕು ನಿಷೇಧ ಕುರಿತ ನಾಮಫಲಕ ಬಿತ್ತರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಇತರೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಜಗಿದು ಉಗಿಯುವವರ ಹಾಗೂ ಧೂಮಪಾನ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಹಾಗೂ ಸೆಕ್ಷನ್‌ 5 ತಂಬಾಕು ಉತ್ಪನ್ನಗಳ ಕುರಿತು ನೇರ ಪರೋಕ್ಷ ಜಾಹಿರಾತು ಹಾಗೂ ತಂಬಾಕು ಉತ್ಪನ್ನಗಳ ಪ್ಯಾಕ್‌ ಮೇಲೆ ಶೇ. 85ರಷ್ಟು ಆರೋಗ್ಯ ಎಚ್ಚರಿಕೆ ಚಿಹ್ನೆ ಇಲ್ಲದಿರುವ ಕುರಿತು ಎಫ್‌ ಐಆರ್‌ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದರು.

Advertisement

ಜಿಲ್ಲಾ ಆರೊಗ್ಯ ಮತು ಕುಟುಂಬ ಕಲ್ಯಾಣಾಧಿಕಾರಿ ಡಾ| ಜಗದೀಶ ನುಚ್ಚಿನ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 39 ಕಾಲೇಜಿಗಳಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಹಾಗೂ ಕೋಟಾ³ ಕಾಯ್ದೆ ಕುರಿತು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಂಡು, ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚನೆ ಮಾಡಲಾಗಿದೆ ಎಂದರು.

ಕೋಟ್ಪಾ ದಾಳಿ ಹಮ್ಮಿಕೊಳ್ಳುವುದರ ಮೂಲಕ ವ್ಯಾಪಾರಸ್ಥರು, ತಂಬಾಕು ಬಳಕೆದಾರರು ಹಾಗೂ ಸಾರ್ವಜನಿಕರಲ್ಲಿ ಕೋಟ್ಪಾ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗಿದೆ. ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಂಡಿದ್ದು, ಈವರೆಗೆ 33 ಕೋಟ್ಪಾ ದಾಳಿ ನಡೆಸಿ 356 ಪ್ರಕರಣಗಳನ್ನು ದಾಖಲಿಸಿ, 45,600 ರೂ. ದಂಡ ಸಂಗ್ರಹಿಸಲಾಗಿದೆ. ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದ ಮೂಲಕ ಈ ವರ್ಷ ಒಟ್ಟು 883 ಮಂದಿಗೆ ಆಪ್ತ ಸಮಾಲೋಚನೆ ನಡೆಸಿ 221ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಸಮುದಾಯ ಮಟ್ಟದಲ್ಲಿ ಗುಂಪು ಚರ್ಚೆ ಮೂಲಕ ಒಟ್ಟು 22 ಎಫ್‌ಜಿಡಿ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.

ಜಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ|ರಾಜಶೇಖರ ಮ್ಯಾಗೇರಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಜಿಎಸ್‌. ಪಲ್ಲೇದ, ಡಿಎಚ್‌ಒ ಡಾ|ವೈ.ಕೆ. ಭಜಂತ್ರಿ, ಡಾ|ಎಸ್‌.ಎಸ್‌. ನೀಲಗುಂದ, ಡಾ|ಅರುಂಧತಿ ಕುಲಕರ್ಣಿ, ಡಾ|ಆರ್‌.ಸಿ. ಬಸರೀಗಿಡದ, ವಿಭಾಗೀಯ ಸಂಯೋಜಕ ಡಾ|ರಾಜೇಶ ಬೈಂದೂರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ, ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next