Advertisement

ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾದ ಪಠ್ಯ ರಚಿಸಿ

04:08 PM Jul 23, 2018 | |

ಚಿಕ್ಕಮಗಳೂರು: ಪರೀಕ್ಷೆಯಲ್ಲಿ ಪುಸ್ತಕ ನೋಡಿ ಉತ್ತರ ಬರೆಯುವ ಕ್ರಮದಿಂದ ವಿದ್ಯಾರ್ಥಿಗಳಿಲ್ಲಿರಬಹುದಾದ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಾಗುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಯಭಾರಿ ಹಿರೇಮಗಳೂರು ಕಣ್ಣನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ತಾಲೂಕಿನ ಆಲ್ದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಆಲ್ದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ ಸಂಯುಕ್ತವಾಗಿ ಏರ್ಪಡಿಸಿದ್ದ ದಿ.ಬಿ.ಡಿ.ಬೋಜೇಗೌಡ ದತ್ತಿ ಮತ್ತು ಸಾರಗೋಡು ಶ್ರೀ ವೆಂಕಟಪ್ಪಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ನುಡಿ ಸಂದೇಶ ನೀಡಿ, ಪರೀಕ್ಷೆಗಳಲ್ಲಿ ಪುಸ್ತಕವನ್ನು ನೋಡಿ ಉತ್ತರ ಬರೆಯುವುದರಿಂದ ವಿದ್ಯಾರ್ಥಿಗಳಲ್ಲಿರಬಹುದಾದ ಪ್ರತಿಭೆ ಹೇಗೆ ಹೊರಹೊಮ್ಮುತ್ತದೆ ಎಂದು ಪ್ರಶ್ನಿಸಿದರು.

ಯಾವ ದೃಷ್ಟಿಕೋನದಿಂದ ಶಿಕ್ಷಣ ಸಚಿವರು ಈ ಆಲೋಚನೆ ಮಾಡಿದ್ದಾರೋ ತಿಳಿಯದು. ಪುಸ್ತಕ ನೋಡಿ ಉತ್ತರ ಬರೆಯುವ ಆಲೋಚನೆಯನ್ನು ಸರ್ಕಾರ ಕೈ ಬಿಡಬೇಕು. ಅದರ ಬದಲಿಗೆ ವಿದ್ಯಾರ್ಥಿಗಳ ಮನೋ ವಿಕಾಸಕ್ಕೆ ಪೂರಕವಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ರೂಪಿಸುವತ್ತ ಗಮನಹರಿಸಬೇಕು ಎಂದರು.

ಬುದ್ಧಿ ವಿಕಾಸಕ್ಕಾಗಿ ಇಂಗ್ಲಿಷ್‌ ಕಲಿಯಬೇಕು ನಿಜ. ಆದರೆ, ತಾಯಿ ಭಾಷೆಯನ್ನು ಮರೆಯಬಾರದು ಎಂದ ಅವರು, ಪ್ರತಿಭೆಗೆ ಪರಿಶ್ರಮ ಅಗತ್ಯ. ಜಗತ್ತನ್ನೆ ಬೆರಗುಗೊಳಿಸುವ ಭಾಷೆ ಕನ್ನಡ. ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಗಾದೆ, ಒಗಟುಗಳು, ಕವಿಗಳ ಕುರಿತು ಇತರರೊಂದಿಗೆ ಸಂವಾದ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕುಂದೂರು ಅಶೋಕ್‌ ಮಾತನಾಡಿ, ಜಾತಿ, ಧರ್ಮದ ಗೋಡೆಗಳನ್ನು ಕಟ್ಟಿಕೊಂಡು ಮನುಷ್ಯ ತನ್ನ ಅಕ್ಕಪಕ್ಕ ಕುಳಿತವರನ್ನು ಮಾತನಾಡಿಸದಂತ ಸ್ಥಿತಿ ಕಂಡುಬರುತ್ತಿದೆ. ಅಂತಹ ಗೋಡೆ ಒಡೆಯುವ ಸಾಧನ ಸಾಹಿತ್ಯವಾಗಿದೆ. ಸಾಹಿತ್ಯ ಹಂಚಿ ತಿನ್ನುವ, ಕೂಡಿ ಬಾಳುವುದನ್ನು ಕಲಿಸುತ್ತದೆ ಎಂದರು.

Advertisement

ಸಾರಿಗೆ ಮತ್ತು ಸಾಹಿತ್ಯ ವಿಚಾರ ಕುರಿತು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಜಾವಗಲ್‌ ಪ್ರಸನ್ನಕುಮಾರ್‌, ಸಾರಿಗೆ ಮತ್ತು ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ. ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರು, ನಿರ್ವಾಹಕರು, ಅಧಿಕಾರಿಗಳು, ಸಿಬ್ಬಂದಿ ಸಾಹಿತ್ಯ ಸೇವೆಯನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು.

ಕನ್ನಡ ನಾಡು ನುಡಿ, ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವವರನ್ನು ಗುರುತಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಒಕ್ಕೂಟ 1.5 ಕೋಟಿ ರೂ.ಗಳ ದತ್ತಿಯನ್ನು ಬ್ಯಾಂಕ್‌ನಲ್ಲಿಟ್ಟಿದ್ದು, ಅದರಿಂದ ಬರುವ ಬಡ್ಡಿ ಹಣವನ್ನು ನಗದು ಪುರಸ್ಕಾರವಾಗಿ ನೃಪತುಂಗ ಮತ್ತು ಚೂಡಾಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ 7 ಲಕ್ಷದ ಒಂದು ರೂ. ನಗದನ್ನು ಪುರಸ್ಕತರಿಗೆ ನೀಡಿ ಗೌರವಿಸಲಾಗಿದೆ ಎಂದು ಸಾಹಿತ್ಯ ಚಟುವಟಿಕೆಗಳನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿದರು. ಶಾಲೆಗೆ ಅಂದಾಜು 15 ಸಾವಿರ ರೂ.ಗಳ ಬೆಲೆಯ ಸ್ಮಾರ್ಟ್‌ ಕ್ಲಾಸ್‌ ಬೋರ್ಡ್‌ಗಳನ್ನು ಕೊಡಿಗೆಯಾಗಿ ನೀಡಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿದ ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಬೋಗೇಶ್‌ ಅವರನ್ನು ಗೌರವಿಸಲಾಯಿತು.

ದತ್ತಿ ದಾನಿಗಳ ಪರಿಚಯ ಕಾರ್ಯಕ್ರಮವನ್ನು ಆಲ್ದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ವಿ.ಜೆ.ರಾಜೇಶ್‌ ನಡೆಸಿಕೊಟ್ಟರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್‌ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು. ಮುಖ್ಯೋಪಾಧ್ಯಯ ಸಿ.ಎಸ್‌.ಸುರೇಶ್‌ ಮಾತನಾಡಿದರು. ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂದೇಶ್‌, ತಾಲೂಕು ಕಸಾಪ ಖಜಾಂಚಿ ಎಚ್‌.ಎಸ್‌.ಜಗದೀಶ್‌, ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ರವಿಕುಮಾರ್‌ ಹಾಜರಿದ್ದರು. ಮೌನ ಆಚರಿಸುವ ಮೂಲಕ ಅಗಲಿದ ಕವಿ ಎಂ.ಎನ್‌.ವ್ಯಾಸರಾವ್‌ ಅವರಿಗೆ ಸಂತಾಪ ಸೂಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next