Advertisement

ಸಂಗೀತ-ಸಾಹಿತ್ಯ-ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರ ನಿರ್ಮಿಸಿ

04:15 PM Aug 18, 2022 | Team Udayavani |

ಧಾರವಾಡ: ಮೈಸೂರು ದಸರಾ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳು ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ, ಪರಿಸರ ಹಾಗೂ ಇತರೆ ಪರಂಪರೆಗಳನ್ನು ಬಿಂಬಿಸುವ ಮೂಲಕ ಜನರ ಗಮನ ಸೆಳೆಯುತ್ತವೆ. ಧಾರವಾಡ ಜಿಲ್ಲೆಯ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿ ಶ್ರೀಮಂತಿಕೆ ಬಿಂಬಿಸುವ ಸ್ತಬ್ಧ ಚಿತ್ರ ನಿರ್ಮಿಸಬೇಕು ಎಂದು ಜಿಪಂ ಸಿಇಒ ಡಾ|ಸುರೇಶ ಇಟ್ನಾಳ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮೈಸೂರು ದಸರಾ ಕಾರ್ಯಕ್ರಮದ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರ ಭಾಗವಹಿಸುವ ಮತ್ತು ವಸ್ತು ಪ್ರದರ್ಶನದಲ್ಲಿ ಮಳಿಗೆ ಸ್ಥಾಪಿಸುವ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕೈಗೊಂಡು ಅವರು ಮಾತನಾಡಿದರು.

ಮೈಸೂರು ದಸರಾ ಮಹೋತ್ಸವ ಸೆ.26ರಿಂದ ಅಕ್ಟೋಬರ್‌ 5ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ವಿಜಯ ದಶಮಿ ಜಂಬೂ ಸವಾರಿ ಮೆರವಣಿಗೆ ಅ.5ರಂದು ನಡೆಯಲಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಜಿಲ್ಲೆಯಿಂದ ಸ್ತಬ್ಧ ಚಿತ್ರ ಭಾಗವಹಿಸಲಿದೆ. ಈ ಮೆರವಣಿಗೆಯಲ್ಲಿ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ ಬಿಂಬಿಸುವ, ಪರಿಸರ, ಅರಣ್ಯೀಕರಣ, ಅಂತರ್ಜಲ, ಪರಿಸರ ಸ್ನೇಹಿ, ಪ್ರವಾಸೋದ್ಯಮ, ಸಂವಿಧಾನ, ಸಮಾನತೆ ಹಾಗೂ ಕೋಮು ಸಾಮರಸ್ಯ ಬಿಂಬಿಸುವ ಸ್ತಬ್ಧ ಚಿತ್ರಗಳನ್ನು ರೂಪಿಸಿ, ಪ್ರದರ್ಶಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕು ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಮಂಡಿಸಿದ ವಿಷಯಗಳ ಆಧಾರದ ಮೇಲೆ ಧಾರವಾಡ ಜಿಲ್ಲೆಯಿಂದ ಸ್ತಬ್ಧಚಿತ್ರ ನಿರ್ಮಿಸಲು ಸಂಗೀತ ದಿಗ್ಗಜರು, ಸಾಹಿತ್ಯ ದಿಗ್ಗಜರು ಮತ್ತು ಸಮಗ್ರ ಕೃಷಿ ಪದ್ಧತಿ ಕುರಿತು ಮೂರು ವಿಷಯಗಳನ್ನು ಆಯ್ಕೆ ಮಾಡಲಾಯಿತು. ಈ ವಿಷಯಗಳ ಕುರಿತು ಸ್ತಬ್ಧ ಚಿತ್ರ ಪೂರಕ ಮಾಹಿತಿ, ಮಾದರಿ ರೂಪಿಸಿ, ಮೂರು ದಿನದಲ್ಲಿ ಜಿಪಂ ಕಚೇರಿಗೆ ಸಲ್ಲಿಸುವಂತೆ ಜಿಪಂ ಸಿಇಒ ತಿಳಿಸಿದರು.

ಜಿಪಂ ಯೋಜನಾ ನಿರ್ದೇಶಕ ಬಿ.ಎಸ್‌. ಮುಗನೂರಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಸ್ತು ಪ್ರದರ್ಶನ ಮಳಿಗೆ ಸ್ಥಾಪನೆ ಹಾಗೂ ಸ್ತಬ್ಧ ಚಿತ್ರ ವಿಷಯಗಳ ಕುರಿತು ಸಭೆಯಲ್ಲಿ ವಿವರಿಸಿದರು.

Advertisement

ಜಿಪಂ ಉಪ ಕಾರ್ಯದರ್ಶಿ ರೇಖಾ ಡೊಳ್ಳಿನವರ, ಮುಖ್ಯ ಯೋಜನಾ ಅಧಿಕಾರಿ ದೀಪಕ ಮಡಿವಾಳರ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಬಿ.ಸಿ.ಕರಿಗೌಡರ ಸೇರಿದಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next