ಸುಳ್ಯ: ಅಜ್ಜಾವರ ಗ್ರಾಮದ ದೊಡ್ಡೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಗೋಡೆ ಬಿರುಕು ಬಿಟ್ಟಿದೆ. ಗೋಡೆ ಬೀಳ ದಂತೆ ಊರವರು ಮರದ ಕಂಬವನ್ನು ಆಧಾರವಾಗಿ ಜೋಡಿಸಿಟ್ಟಿದ್ದಾರೆ.
ಇಲ್ಲಿ 1ರಿಂದ 5ನೇ ವರೆಗೆ ತರಗತಿಗಳಿದ್ದು 13 ಮಕ್ಕಳು ಈ ವರ್ಷ ಕಲಿಯುತ್ತಿದ್ದಾರೆ. ಈ ಶಾಲೆ ಕಟ್ಟಡ ಹಳೆಯದಾಗಿದೆ. ಒಂದು ಕೊಠಡಿಯ ಗೋಡೆ ಬಿರುಕು ಬಿಟ್ಟಿದ್ದು, ಅಪಾಯದ ಸ್ಥಿತಿಯಲ್ಲಿದೆ. ಮಕ್ಕಳನ್ನು ಬಿರುಕು ಬಿಟ್ಟ ಕೊಠಡಿಯಿಂದ ಬೇರೆ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಆದರೂ ಕಟ್ಟಡ ಒಂದೇ ಆಗಿರುವುದರಿಂದ ಆತಂಕದ ಸ್ಥಿತಿ ಎದುರಾಗಿದೆ.
ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಗೋಡೆ ಬಿರುಕು ಬಿಟ್ಟಿರುವುದಕ್ಕಾಗಿ ಗೋಡೆ ಬೀಳದಂತೆ ವಿಪತ್ತು ನಿರ್ವಹಣ ಘಟಕದವರು ಶ್ರಮದಾನ ನಡೆಸಿ ಗೋಡೆಗೆ ಮರದ ಕೊಂಬೆಗಳನ್ನು ಆಧಾರವಾಗಿ ಇಟ್ಟಿದ್ದಾರೆ. ದುರಸ್ತಿ ಬಗ್ಗೆ ಊರವರು ಸಂಬಂಧಿಸಿದವರಿಗೆ ಮನವಿ ಮಾಡಿದ್ದಾರೆ.
Related Articles
ಮಕ್ಕಳ ಸಂಖ್ಯೆ ಹೆಚ್ಚಳ
ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ 6 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲರ ಶ್ರಮದಿಂದಾಗಿ ಈ ವರ್ಷ 13 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಶಾಲೆಗಳ ದುರಸ್ತಿಗೆ ಇಲಾಖೆ ಮನಸ್ಸು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅಗತ್ಯ ಕ್ರಮ
ಶಾಲೆ ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ಕ್ರಿಯಾ ಯೋಜನೆ ತಯಾರಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. – ಸತ್ಯವತಿ ಬಸವನಪಾದೆ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಜ್ಜಾವರ