ಮಡಿಕೇರಿ : ನಿರಂತರ ಮಳೆಯಿಂದ ದೇವರಕೊಲ್ಲಿ ಕೊಯನಾಡು ರಸ್ತೆಯಲ್ಲಿ ಬೃಹತ್ ಬಿರುಕುಗಳು ಕಾಣಿಸಿಕೊಂಡಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಮಹೇಶ್, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೀವ ಕೈಯಲ್ಲಿ ಹಿಡಿದು ರಾತ್ರಿ ಕಳೆದ ಸಂಪಾಜೆ, ಕಲ್ಲುಗುಂಡಿ ಜನ :
ಸಂಪಾಜೆ, ಕಲ್ಲುಗುಂಡಿ ಮತ್ತು ಕೊಯನಾಡು ಭಾಗದಲ್ಲಿ ಮಹಾ ಮಳೆ ಮುಂದುವರಿದಿದೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಯಿತು. ನದಿ ಭಾಗದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ರಾತ್ರೋರಾತ್ರಿ ಸುರಕ್ಷಿತ ಸ್ಥಳಗಳಿಗೆ ತೆರಳಿದರು. ಕೊಯನಾಡಿನಲ್ಲಿ ಕೂಡ ನಿರಂತರ ಮಳೆಯಿಂದ ಆತಂಕ ಸೃಷ್ಟಿಯಾಗಿದೆ.
ಕೊಯನಾಡು ಸೇತುವೆ ಬಳಿ ರಸ್ತೆ ಕುಸಿದಿದ್ದು ಹೆದ್ದಾರಿ ಸಂಚಾರ ಬಂದ್ ಆಗುವ ಸಾಧ್ಯತೆಗಳಿದೆ. ಸದ್ಯಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಆತಂಕದ ನಡುವೆ ವಾಹನ ಸಂಚಾರವಾಗುತ್ತಿದೆ. ಕೊಯನಾಡಿನ ಹಲವು ಕುಟುಂಬಗಳನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ : ಅಸ್ಸಾಂ : ನಿರ್ಮಾಣ ಹಂತದ ಮೇಲ್ಛಾವಣಿ ಕುಸಿದು 8 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ