Advertisement

ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಫೈನಲ್‌: ಟ್ರಿನ್‌ಬಾಗೊ-ಸೇಂಟ್‌ ಲೂಸಿಯಾ ಪ್ರಶಸ್ತಿ ಸಮರ

08:03 PM Sep 09, 2020 | Team Udayavani |

ಟರೂಬ (ಟ್ರಿನಿಡಾಡ್‌): ಕೋವಿಡ್‌ ಕಾಲದ ಮೊದಲ ಟಿ20 ಲೀಗ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದ “ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌’ ಈಗ ಅಂತಿಮ ಘಟ್ಟ ತಲುಪಿದೆ. ಟ್ರಿನ್‌ಬಾಗೊ ನೈಟ್‌ರೈಡರ್ (ಟಿಕೆಆರ್‌) ಮತ್ತು ಸೇಂಟ್‌ ಲೂಸಿಯಾ ಜೂಕ್ಸ್‌ ತಂಡಗಳು ಗುರುವಾರದ ಪ್ರಶಸ್ತಿ ಸಮರದಲ್ಲಿ ಸೆಣಸಲಿವೆ.

Advertisement

ಮಂಗಳವಾರದ ಎರಡೂ ಸೆಮಿಫೈನಲ್‌ ಪಂದ್ಯಗಳು ಏಕಪಕ್ಷೀಯವಾಗಿ ನಡೆದವು. ಅಜೇಯವಾಗಿ ಲೀಗ್‌ ಹಂತವನ್ನು ದಾಟಿ ಬಂದಿದ್ದ ಟ್ರಿನ್‌ಬಾಗೊ ನೈಟ್‌ರೈಡರ್ (ಟಿಕೆಆರ್‌) 9 ವಿಕೆಟ್‌ಗಳಿಂದ ಜಮೈಕಾ ತಲ್ಲವಾಸ್‌ ತಂಡವನ್ನು ಮಣಿಸಿತು. ದ್ವಿತೀಯ ಉಪಾಂತ್ಯದಲ್ಲಿ ಸೇಂಟ್‌ ಲೂಸಿಯಾ ಜೂಕ್ಸ್‌ 10 ವಿಕೆಟ್‌ಗಳಿಂದ ಗಯಾನಾ ಅಮೆಜಾನ್‌ ವಾರಿಯರ್ ಮೇಲೆ ಸವಾರಿ ಮಾಡಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಜಮೈಕಾ 7 ವಿಕೆಟಿಗೆ ಕೇವಲ 107 ರನ್‌ ಗಳಿಸಿದರೆ, ಟಿಕೆಆರ್‌ 11 ಓವರ್‌ಗಳಲ್ಲಿ ಒಂದು ವಿಕೆಟಿಗೆ 111 ರನ್‌ ಬಾರಿಸಿರು. ಟಿಕೆಆರ್‌ ಪರ ಅಖೀಲ್‌ ಹೊಸೀನ್‌ (4-1-14-3) ಮತ್ತು ಸುನೀಲ್‌ ನಾರಾಯಣ್‌ (4-1-13-1) ಪರಿಣಾಮಕಾರಿ ಬೌಲಿಂಗ್‌ ದಾಳಿ ಸಂಘಟಿಸಿದರು.

ಗಯಾನಾ 55 ಆಲೌಟ್‌!
ದ್ವಿತೀಯ ಸೆಮಿಫೈನಲ್‌ನಲ್ಲಿ ಗಯಾನಾ ಅಮೆಜಾನ್‌ ವಾರಿಯರ್ ತೀವ್ರ ಬ್ಯಾಟಿಂಗ್‌ ಬರಗಾಲಕ್ಕೆ ಸಿಲುಕಿ 13.4 ಓವರ್‌ಗಳಲ್ಲಿ 55 ರನ್ನಿಗೆ ಕುಸಿಯಿತು. ಡಿಯಾಕ್‌ ಒಂದಕ್ಕೆ 2, ಕ್ಯುಗೆಲೀನ್‌ 12ಕ್ಕೆ 2, ಜಹೀರ್‌ ಖಾನ್‌ 12ಕ್ಕೆ 2, ಚೇಸ್‌ 15ಕ್ಕೆ 2 ವಿಕೆಟ್‌ ಉರುಳಿಸಿ ಮಿಂಚಿದರು. ಜವಾಬಿತ್ತ ಸೇಂಟ್‌ ಲೂಸಿಯಾ ಜೂಕ್ಸ್‌ ಕೇವಲ 4.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 56 ರನ್‌ ಬಾರಿಸಿತು. ಆಗ ಇನ್ನೂ 93 ಎಸೆತ ಉಳಿದಿತ್ತು. ಸಿಪಿಎಲ್‌ ಇತಿಹಾಸದಲ್ಲಿ ಅತ್ಯಧಿಕ ಎಸೆತ ಬಾಕಿ ಇರುವಂತೆಯೆ ದಾಖಲಾದ ಗೆಲುವು ಇದಾಗಿದೆ.

ಗಯಾನಾ ತಂಡದ ಸ್ಕೋರ್‌ ಸಿಪಿಎಲ್‌ ಚರಿತ್ರೆಯ 2ನೇ ಕನಿಷ್ಠ ಮೊತ್ತವಾಗಿದೆ. 2013ರಲ್ಲಿ ರೆಡ್‌ ಸ್ಟೀಲ್‌ ತಂಡ ಟ್ರೈಡೆಂಡ್ಸ್‌ ವಿರುದ್ಧ 52ಕ್ಕೆ ಆಲೌಟ್‌ ಆದದ್ದು ದಾಖಲೆ.  ಫೈನಲ್‌ ಪಂದ್ಯ ಇದೇ ಅಂಗಳದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next