ದಾವಣಗೆರೆ: ನವದೆಹಲಿಯ ಸಿಪಿಐ(ಎಂ) ಕಚೇರಿಯಲ್ಲಿ ಪಕ್ಷದ ಕಾರ್ಯದರ್ಶಿ ಸಿತಾರಾಂ ಯೆಚೂರಿ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಸಿಪಿಐ(ಎಂ) ಗುರುವಾರ ಜಿಲ್ಲಾ ಘಟಕದಿಂದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಜಯದೇವ ವೃತ್ತದಲ್ಲಿ ಜಮಾಯಿಸಿ ಪಕ್ಷದ ಕಾರ್ಯಕರ್ತರು, ಹಿರಿಯ ನಾಯಕ ಯೆಚೂರಿ ಅವರ ಮೇಲೆ ದಾಳಿ ಮಾಡಿದ ಇಬ್ಬರು ಹಿಂದುಪರ ಸಂಘಟನೆ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಮುಖಂಡ ಕೆ. ಲಕ್ಷ್ಮಿನಾರಾಯಣ ಭಟ್, ಹಿಂದುಪರ ಸಂಘಟನೆ ಕಾರ್ಯಕರ್ತರು ಇದೀಗ ರಾಷ್ಟ್ರದ ರಾಜಧಾನಿಯಲ್ಲಿ ಪ್ರಮುಖ ಪಕ್ಷದ ನಾಯಕರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಬಂದು ನಿಂತಿದ್ದಾರೆ.
ಇದಕ್ಕೆಲ್ಲಾ ಕೇಂದ್ರ ಸರ್ಕಾರ ನೀಡುತ್ತಿರುವ ಕುಮ್ಮಕ್ಕೇ ಕಾರಣ. ದಾಳಿ ಮಾಡಿದ ಕಿಡಿಗೇಡಿಗಳು ಸಿಪಿಐ(ಎಂ) ಮುರದಾಬಾದ್ ಎಂಬ ಘೋಷಣೆ ಕೂಗಿದ್ದಾರೆ. ಇದರರ್ಥ ಅವರ ದಾಳಿ ಕೇವಲ ಯೆಚೂರಿ ಮೇಲಲ್ಲ. ನಮ್ಮ ಪಕ್ಷ, ಸಿದ್ಧಾಂತ, ತತ್ವದ ಮೇಲೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣಗಳಲ್ಲಿ ಜಾತ್ಯಾತೀತತೆ ಕುರಿತು ಮಾತನಾಡುತ್ತಾರೆ.
ಆದರೆ, ಇಂತಹ ದುಷ್ಕೃತ್ಯಗಳ ಕುರಿತು ಎಂದಿಗೂ ಚಕಾರ ಎತ್ತುವುದಿಲ್ಲ. ರಾಷ್ಟ್ರೀಯ ಪಕ್ಷವೊಂದರ ಕಚೇರಿಗೆ ನುಗ್ಗಿ ದಾಂಧಲೆ ಮಾಡುವ ಮಟ್ಟಕ್ಕೆ ಹಿಂದುಪರ ಸಂಘಟನೆ ಕಾರ್ಯಕರ್ತರು ಬಂದು ನಿಂತಿದ್ದಾರೆ ಅನ್ನುವುದಾದರೆ ದೇಶದ ಸಾಮಾನ್ಯ ನಾಗರಿಕರ ಸ್ಥಿತಿ ಏನಾಗಬಹುದು ಎಂಬುದನ್ನು ನಾವು ಊಹಿಸಿಕೊಳ್ಳಬೇಕಿದೆ ಎಂದರು. ಇಂತಹ ಪುಂಡಾಟಿಕೆ ಮೆರೆಯುವವರನ್ನು ಸುಮ್ಮನೆ ಬಿಡಬಾರದು.
ಹಿಂದು ಹೆಸರಿನಲ್ಲಿ ಈ ರೀತಿಯ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ದಾಳಿಗಳನ್ನು ಸಮರ್ಥವಾಗಿ ತಡೆಯಬೇಕು. ಇಲ್ಲವಾದಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥ ಇಲ್ಲದಂತಾಗುತ್ತದೆ ಎಂದು ಅವರು ತಿಳಿಸಿದರು. ಇ. ಶ್ರೀನಿವಾಸ್, ಲೋಕೇಶ್, ಟೆಲಿಕಾಂ ಈರಣ್ಣ, ಸಾಹಿತಿ ಸಿದ್ದರಾಮಣ್ಣ, ಉಮೇಶ್ ಕೈದಾಳೆ, ಶ್ರೀನಿವಾಸಾಚಾರ್, ಭರಮಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು.