Advertisement

`ಜಾತ್ಯತೀತ ಮೌಲ್ಯ ನಾಶವಾದರೆ ಪ್ರಜಾಪ್ರಭುತ್ವಕ್ಕೆ  ಧಕ್ಕೆ’

10:55 AM Dec 18, 2017 | |

ಮಹಾನಗರ: ಜಾತ್ಯತೀತ ಮೌಲ್ಯಗಳನ್ನು ಕಾಪಾಡಲು ಭಾರತದ ಜನತೆ ಎದ್ದು ನಿಲ್ಲಬೇಕಾಗಿದೆ. ಜನತೆಯನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸುವಲ್ಲಿ ಸಿಪಿಐ (ಎಂ) ಮತ್ತು ಎಡಪಕ್ಷಗಳಿಗೆ ವಿಶೇಷ ಪಾತ್ರವಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಕಾರ್ಯದರ್ಶಿ ಜಿ.ವಿ ಶ್ರೀರಾಮರೆಡ್ಡಿ ಹೇಳಿದರು. ಅವರು ಮಂಗಳೂರಿನ ಬೋಳಾರದ ಕಾ| ಪ್ರಸನ್ನ ಕುಮಾರ್‌ ನಗರದ, ಕಾ| ಪೂವಪ್ಪ ಸಾಲ್ಯಾನ್‌ ಸಭಾಂಗಣದ ಕಾ| ಅಬ್ರಹಾಂ ಕರ್ಕಡ ವೇದಿಕೆಯಲ್ಲಿ ರವಿವಾರ ನಡೆದ ಸಿಪಿಐ(ಎಂ) 22ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿದರು.

Advertisement

ಸಿಪಿಐ(ಎಂ) ಪಕ್ಷದ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ದೇಶ ಇಂದು ಯಾವ ರೀತಿಯ ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳನ್ನು ಎದುರಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದ ಅವರು ಕೋಮುವಾದ ಮತ್ತು ನವ ಉದಾರೀಕರಣ ನೀತಿಗಳು ಇಂದಿನ ನಮ್ಮ ದೇಶದ ಆಳ್ವಿಕೆಯ ಕೇಂದ್ರ ಕಲ್ಪನೆಯಾಗಿದ್ದು, ಅವು ಒಂದೆಡೆ ದೇಶದ ಕಲ್ಪನೆಯನ್ನೂ ಇನ್ನೊಂದೆಡೆ ಸಾರ್ವಭೌಮತೆಯನ್ನೂ ನಾಶ ಮಾಡಿವೆ ಎಂದು ಟೀಕಿಸಿದರು.

ಬೌದ್ಧ, ಜೈನ, ಸಿಖ್‌, ಹಿಂದೂ ಧರ್ಮಗಳು ನಮ್ಮ ದೇಶದಲ್ಲೇ ಹುಟ್ಟಿ ಬಂದ ಧರ್ಮಗಳು. 1200 ವರ್ಷಗಳಷ್ಟು ಹಿಂದೆಯೇ ಇಸ್ಲಾಂ ಧರ್ಮ ಭಾರತಕ್ಕೆ ಬಂದಿದೆ. ಕ್ರೈಸ್ತ ಧರ್ಮವೂ ಸಾವಿರ ವರ್ಷಗಳ ಹಿಂದೆಯೇ ಬಂದಿದೆ ಎಂದರು. ಜಿಲ್ಲೆಯ ಜನಜೀವನವನ್ನು ಹಿಂದುತ್ವ ಶಕ್ತಿಗಳು ಶಿಥಿಲಗೊಳಿಸಿವೆ. ಆಡಳಿತ ವ್ಯವಸ್ಥೆ ಮತ್ತು ಪೊಲೀಸ್‌ ಇಲಾಖೆ ಭೀತಿಕಾರಕ ಶಕ್ತಿಗಳನ್ನು ನಿಯಂತ್ರಣಕ್ಕೆ ತರುತ್ತಿಲ್ಲ. ರಾಜ್ಯದ ಕಾಂಗ್ರೆಸ್‌ ಸರಕಾರ ಕೂಡಾ ದುರ್ಬಲತೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ನಾಯಕ ಕೆ.ಆರ್‌. ಶ್ರೀಯಾನ್‌ ವಹಿಸಿ, ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಸಿಪಿಐ(ಎಂ) ಸಮ್ಮೇಳನಗಳು ನಡೆಯುವ ವೇಳೆ ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿ ಕಾರಕ್ಕೆ ಬಂದಿತ್ತು. ಬಿಜೆಪಿ ಅಧಿಕಾರಕ್ಕೆ ಬರಕೂಡದು ಎಂದು ಸಿಪಿಐ(ಎಂ) ಪಕ್ಷ ಅದಕ್ಕೂ ಮೊದಲು ಸತತ ಹೋರಾಟ ಮಾಡಿತ್ತು. ಈಗ ಅಧಿಕಾರಕ್ಕೆ ಬಂದಿರುವ ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕಾದ ನಿರ್ಣಾಯಕ ಹೋರಾಟ ನಮ್ಮ ಮುಂದಿದೆ ಎಂಬ ಸವಾಲನ್ನು ಪಕ್ಷದ ಕಳೆದ ಸಮ್ಮೇಳನ ಮುಂದಿಟ್ಟಿತ್ತು. ಅದನ್ನು ನಡೆಸಿಕೊಡಬೇಕಾದ ಸವಾಲು ಇಂದಿಗೂ ಇದೆ ಎಂದರು. 

ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಸ್ವಾಗತಿಸಿದರು. ಮಂಡಳಿ ಸದಸ್ಯ ಯಾದವ ಶೆಟ್ಟಿ ವಂದಿಸಿದರು. ಜೆ.ಬಾಲಕೃಷ್ಣ ಶೆಟ್ಟಿ, ಯು.ಬಿ.ಲೋಕಯ್ಯ, ಸುನೀಲ್‌ ಕುಮಾರ್‌ ಬಜಾಲ್‌, ಕೃಷ್ಣಪ್ಪ ಸಾಲ್ಯಾನ್‌, ಪದ್ಮಾವತಿ ಶೆಟ್ಟಿ ಉಪಸ್ಥಿತರಿದ್ದರು. ಪಕ್ಷದ ಧ್ವಜಾರೋಹಣವನ್ನು ಹಿರಿಯ ಮುಖಂಡ ಬಿ.ವಾಸು ಗಟ್ಟಿ ನೆರವೇರಿಸಿದರು.

Advertisement

ಆರ್ಥಿಕ ಅಸಮಾನತೆ 
ನವ ಉದಾರೀಕರಣದ ನೀತಿಗಳನ್ನು ಕೇಂದ್ರದಲ್ಲಿರುವ ಸರಕಾರ ಮುಂದುವರಿಸುತ್ತಿದ್ದು, ಇದರಿಂದಾಗಿ ಬಹು ಸಂಖ್ಯಾಕ ನಾಗರಿಕರ ಬದುಕು ನಾಶವಾಗಿ ಹೋಗಿದೆ. ಆರ್ಥಿಕ ಅಸಮಾನತೆ ವಿಪರೀತವಾಗಿದೆ. ಶೇ. 99 ರಷ್ಟು ದೇಶದ ಸಂಪತ್ತು ಕೇವಲ ಶೇ. 1ರಷ್ಟು ಜನರ ಕೈಯಲ್ಲಿದೆ. ಶೇ. 99 ಜನರಲ್ಲಿ ಕೇವಲ ಶೇ. 1 ಸಂಪತ್ತು ಇದೆ. ದಿನಕ್ಕೆ 20 ರೂ. ಆದಾಯ ಶೇ. 60 ರಷ್ಟು ಜನರದ್ದಾಗಿದೆ. ಇದಕ್ಕೆ ವಿರುದ್ಧವಾಗಿ ಅಂಬಾನಿ ಅಂಥವರ ಆದಾಯ ಕೋಟಿ ರೂ.ಗಳಲ್ಲಿದೆ. ದೇಶದಲ್ಲಿ 30 ಕೋಟಿ ಕುಟುಂಬಗಳಿಗೆ ವಾಸ ಮಾಡಲು ಯೋಗ್ಯವಾದ ಮನೆಗಳಿಲ್ಲ. ಆದರೆ ಮುಕೇಶ್‌ ಅಂಬಾನಿ ಒಬ್ಬರೇ 5,500 ಕೋಟಿ ರೂ. ಬೆಲೆಯ ಮನೆ ಹೊಂದಿದ್ದಾರೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next