Advertisement

ನೆರೆ ನೀರಿನಲ್ಲೇ ಜೀಪ್‌ ದಾಟಿಸಿದ ಸಿಪಿಐ!

10:19 AM Aug 13, 2018 | |

ಕಡಬ: ಹೊಸಮಠ ಸೇತುವೆಯ ಮೇಲೆ ನೆರೆ ನೀರು ಹರಿಯುತ್ತಿದ್ದ ವೇಳೆ ಕಾವಲಿಗಿದ್ದ ಗೃಹ ರಕ್ಷಕ ಸಿಬಂದಿಯನ್ನು ದಬಾಯಿಸಿ, ರಕ್ಷಣಾ ಗೇಟನ್ನು ತೆರೆಸಿ ಅಪಾಯಕಾರಿ ರೀತಿಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್‌ ವೃತ್ತ ನಿರೀಕ್ಷಕರು ತಮ್ಮ ಇಲಾಖಾ ವಾಹನವನ್ನು ದಾಟಿಸಿದ ಘಟನೆ ರವಿವಾರ ಸಂಜೆ 6.30ರ ಸುಮಾರಿಗೆ ಸಂಭವಿಸಿದೆ.

Advertisement

ರವಿವಾರ ಮಧ್ಯಾಹ್ನದಿಂದಲೇ ಸೇತುವೆಯ ಮೇಲೆ ನೆರೆ ನೀರು ಹರಿಯುತ್ತಿದ್ದ ಕಾರಣ ಎರಡೂ ಕಡೆ ಗೇಟುಗಳನ್ನು ಮುಚ್ಚಿ, ಸಂಚಾರ ಸ್ಥಗಿತಗೊಳಿಸಲಾಗಿತ್ತು. ಗೃಹರಕ್ಷಕ ಸಿಬಂದಿ ಹಾಗೂ ಸ್ಥಳೀಯರು ಎಚ್ಚರಿಸಿದರೂ ಸಿಪಿಐ ವಾಹನ ದಾಟಿಸಿದ್ದಾರೆ. ಈ ಕುರಿತು ಸಿಬಂದಿ ಪ್ರಶ್ನಿಸಿದಾಗ, ದಬಾಯಿಸಿ ಕಡಬದ ಕಡೆಗೆ ತೆರಳಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ
ಸಿಪಿಐ ಬಳಿಕ ಸ್ಥಳೀಯರೂ ತಮ್ಮ ವಾಹನಗಳನ್ನು ಸೇತುವೆಯ ಮೇಲೆ ದಾಟಿಸಲು ಮುಂದಾದರು. ಆದರೆ, ಗೃಹರಕ್ಷಕ ಸಿಬಂದಿ ಕೂಡಲೇ ಗೇಟುಗಳನ್ನು ಮುಚ್ಚಿ, ವಾಹನಗಳು ಸಂಚರಿಸದಂತೆ ತಡೆದರು. ಸಿಟ್ಟಾದ ಸಾರ್ವಜನಿಕರು ಹಾಗೂ ವಾಹನ ಚಾಲಕರು, ಪೊಲೀಸರಿಗೊಂದು ನ್ಯಾಯ, ನಮಗೊಂದು ನ್ಯಾಯವೇ ಎಂದು ತರಾಟೆಗೆ ತೆಗೆದುಕೊಂಡರು.

ತಿಂಗಳ ಹಿಂದೆಯೂ ಸೇತುವೆಯ ಮೇಲೆ ಪ್ರವಾಹವಿದ್ದಾಗ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದ ದೃಶ್ಯಾವಳಿಗಳು ಜಾಲತಾಣಗಳಲ್ಲಿ ವೈರಲ್‌ ಆಗಿ, ಪೊಲೀಸ್‌ ಇಲಾಖೆಗೆ ಮುಜುಗರ ಉಂಟುಮಾಡಿದ್ದವು. ಈಗ ಸಿಪಿಐ ಬಲವಂತವಾಗಿ ತಮ್ಮ ವಾಹನ ದಾಟಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಠ ಡಾ| ಮುರಳೀಮೋಹನ ಚೂಂತಾರು, ಇಂತಹ ಘಟನೆ ಗೃಹರಕ್ಷಕ ಸಿಬಂದಿಯ ಸ್ಥೈರ್ಯ  ಕುಂದಿಸುತ್ತದೆ. ಈ ಕುರಿತು ತನಿಖೆ ನಡೆಸಬೇಕೆಂದು ಡಿಸಿ ಹಾಗೂ ಎಸ್ಪಿಗೆ ದೂರು ನೀಡಿದ್ದಾರೆ.

ಪರಿಶೀಲಿಸುತ್ತೇನೆ: ಎಸ್ಪಿ
ಈ ಕುರಿತು “ಉದಯವಾಣಿ’ಗೆ ಪ್ರತಿ ಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಡಾ| ಬಿ.ಆರ್‌. ರವಿಕಾಂತೇ ಗೌಡ, ಈ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ ತರಿಸಿ ಕೊಂಡು ಪರಿಶೀಲಿಸುತ್ತೇನೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next