Advertisement

ಕಾಂಗ್ರೆಸ್‌ ತೊರೆದು ಪೊರಕೆ ಹಿಡಿದ ಡಿಕೆಶಿ ಭಾವ

10:27 AM Jan 31, 2023 | Team Udayavani |

ಚನ್ನಪಟ್ಟಣ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ – ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಅವರ ಸಹೋದರಿಯ ಪತಿ, ಕೆಪಿಸಿಸಿ ಕಾರ್ಯಕಾರಣಿ ಸಮಿತಿ ಸದಸ್ಯ, ತಾಲೂಕಿನ ವಿರುಪಾಕ್ಷಿಪುರ ತೋಟದ ಮನೆಯ ನಿವಾಸಿ ಸಿ.ಪಿ.ಶರತ್‌ ಚಂದ್ರ ಅವರು ಕಾಂಗ್ರೆಸ್‌ ತ್ಯಜಿಸಿ ಆಮ್‌ ಆದ್ಮಿ ಪಾರ್ಟಿ ಸೇರ್ಪಡೆ ಯಾಗಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಹರಿದಾಡುತ್ತಿದ್ದ ಹಲವಾರು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Advertisement

ಇದು ಒಂದು ರೀತಿಯಲ್ಲಿ ಅಚ್ಚರಿಯ ವಿಚಾರವಾದರೆ, ಮತ್ತೂಂದು ರೀತಿಯಲ್ಲಿ ಕುತೂಹಲದ ಬೆಳ ವಣಿಗೆಯಾಗಿದೆ ಎಂದು ತಾಲೂಕಿನಲ್ಲಿ ಚರ್ಚೆ ಶುರುವಾಗಿದೆ. ಬೆಂಗಳೂರಿನ ಆಮ್‌ ಆದ್ಮಿ ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಆಮ್‌ ಆದ್ಮಿ ಪಕ್ಷದ ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಭಾಸ್ಕರ್‌ರಾವ್‌ ಅವರ ಸಮ್ಮುಖದಲ್ಲಿ ಸಿ.ಪಿ.ಶರತ್‌ ಚಂದ್ರ ಸೇರ್ಪಡೆಯಾದರು.

ಮೆಚ್ಚುಗೆ: ಕಾಂಗ್ರೆಸ್‌ ನಾಯಕ ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಯಾಗಿದ್ದ ಕಾಂಗ್ರೆಸ್‌ನ ಸಿ.ಪಿ.ಶರತ್‌ ಚಂದ್ರ ಅವರು ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಆ ಭಾಗದಲ್ಲಿ ಪಕ್ಷದ ಸಂಘಟನೆಗೆ ಆನೆಬಲ ಸಿಕ್ಕಂತಾಗಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮುಂತಾದ ಸಾಂಪ್ರದಾಯಿಕ ಪಕ್ಷಗಳ ನಿಷ್ಕ್ರಿಯತೆ, ಭ್ರಷ್ಟಾಚಾರ ಹಾಗೂ ಜನವಿರೋಧಿ ನಿಲುವುಗಳಿಂದ ಪ್ರಾಮಾಣಿಕ ನಾಯಕರು ಎಎಪಿ ಸೇರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶರತ್‌ ಚಂದ್ರ ಅವರ ಹಿನ್ನೆಲೆ: ಕಾನೂನು ಪದವೀಧರರಾದ ಸಿ.ಪಿ.ಶರತ್‌ ಚಂದ್ರ ಅವರು ಉದ್ಯಮಿ ಹಾಗೂ ರೈತರೂ ಹೌದು. ವಿಜಯ ಬ್ಯಾಂಕ್‌ ಉದ್ಯೋಗಿಯಾಗಿದ್ದ ವೇಳೆ ಅಲ್ಲಿನ ಉದ್ಯೋಗಿಗಳ ಸಂಘದ ಉಪಾಧ್ಯಕ್ಷರಾಗಿ, ಬ್ಯಾಂಕ್‌ ನೌಕರರ ಸಮಸ್ಯೆ ಬಗೆಹರಿಸಲು ಶ್ರಮಿಸಿದ್ದರು. ಹೋರಾಟ: 2013-2014 ಮತ್ತು 2019ರ ಚುನಾ ವಣೆಗಳ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ದಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ ಅನುಭವ ಹೊಂದಿದ್ದಾರೆ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌, ನೋಟು ಅಮಾನ್ಯಿàಕರಣ ವಿರುದ್ಧದ ಹೋರಾಟ ಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೋವಿಡ್‌ ಸಮಯದಲ್ಲಿ ರೇಷನ್‌ ಕಿಟ್‌ ವಿತರಣೆ, ಔಷಧ ವಿತರಣೆ, ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. 2021-22ರ ಪ್ರವಾಹದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚನ್ನಪಟ್ಟಣದ ಜನರಿಗೆ ಆರ್ಥಿಕ ನೆರವು ನೀಡಿದ್ದರು.

ಸಮರ್ಥನೆ: ಎಎಪಿ ಆಡಳಿತ ದೇಶಕ್ಕೆ ಮಾದರಿ: ಆಪ್‌ ಪಕ್ಷ ಸೇರಿ ಮಾತನಾಡಿದ ಸಿ.ಪಿ.ಶರತ್‌ ಚಂದ್ರ, ಆಮ್‌ ಆದ್ಮಿ ಪಾರ್ಟಿ ದೆಹಲಿ ಹಾಗೂ ಪಂಜಾಬ್‌ನಲ್ಲಿ ನೀಡುತ್ತಿರುವ ಆಡಳಿತ ಅತ್ಯಂತ ಜನಪರ ಹಾಗೂ ದಕ್ಷವಾಗಿದೆ. ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಕರ್ಯಗಳಲ್ಲಿ ಎಎಪಿ ತಂದಿರುವ ಕ್ರಾಂತಿಕಾರಿ ಬದಲಾವಣೆ ಇಡೀ ದೇಶಕ್ಕೆ ಮಾದರಿಯಾಗಿವೆ. ಕರ್ನಾಟಕದಲ್ಲೂ ಪ್ರಾಮಾಣಿಕ, ದಕ್ಷ ಹಾಗೂ ಜನಪರ ಆಡಳಿತ ಬರಬೇಕೆಂಬ ಸದುದ್ದೇಶದಿಂದ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಸಮರ್ಥಿಸಿಕೊಂಡರು.

Advertisement

ಅಂತರ ಕಾಯ್ದುಕೊಂಡಿದ್ದರು: ಕಳೆದ ವರ್ಷ ಉದ್ಯಮಿ ಪ್ರಸನ್ನ ಪಿ.ಗೌಡ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಎಂದು ಸ್ವತಃ ತಮ್ಮ ಸಂಬಂಧಿಗಳಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಭರವಸೆ ನೀಡಿದ್ದರು. ಬಹಿರಂಗ ವಾಗಿ ಇದನ್ನು ವಿರೋಧಿಸಿ ತಾವೂ ಕಾಂಗ್ರೆಸ್‌ ಆಕಾಂಕ್ಷಿ ಎಂದು ಶರತ್‌ಚಂದ್ರ ಘೋಷಿಸಿಕೊಂಡಿ ದ್ದರು. ಹಲವಾರು ತಿಂಗಳಿಂದ ಕಾಂಗ್ರೆಸ್‌ ಸಂಘಟನೆ ಹಾಗೂ ಸ್ಥಳೀಯ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಇದೀಗ ಆಪ್‌ ಸೇರ್ಪಡೆ ಮೂಲಕ ರಾಜಕೀಯವಾಗಿ ಹೊಸ ಹಾದಿ ಹಿಡಿದಿದ್ದಾರೆ. ಶರತ್‌ ಚಂದ್ರ ಅವರಿಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಪಕ್ಷಾತೀತವಾಗಿ ಹಲವಾರು ಬೆಂಬಲಿಗರು ಇದ್ದು, ಮುಂದಿನ ದಿನಗಳಲ್ಲಿ ಇವರ ನಿಲುವು ಏನು ಎಂಬುದನ್ನು ಕಾದು ನೋಡಬೇಕಿದೆ.

ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಪ್‌ ಸರ್ಕಾರ ತಂದಿರುವ ಕ್ರಾಂತಿಕಾರಿ ಬದಲಾವಣೆ ಇಡೀ ದೇಶಕ್ಕೆ ಮಾದರಿಯಾಗಿವೆ. ಕರ್ನಾಟಕದಲ್ಲೂ ಪ್ರಾಮಾಣಿಕ, ದಕ್ಷ ಹಾಗೂ ಜನಪರ ಆಡ ಳಿತ ಬರಬೇಕೆಂಬ ಸದುದ್ದೇಶದಿಂದ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದೇನೆ. ಶರತ್‌ ಚಂದ್ರ, ಆಪ್‌ ಮುಖಂಡ, ಡಿ.ಕೆ.ಶಿವಕುಮಾರ್‌ ಸಂಬಂಧಿ

ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next