ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಗೋಹತ್ಯಾ ನಿಷೇಧ ಕಾಯ್ದೆ ವಾಪಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಗೊಂದಲಗಳು ಮುಂದುವರಿದಿದೆ. ಈ ಬಗ್ಗೆ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಗೋಹತ್ಯೆಗೆ ಸಂಬಂಧಪಟ್ಟಂತೆ ಪಶು ಸಂಗೋಪನ ಸಚಿವ ಕೆ.ವೆಂಕಟೇಶ್ ನೀಡಿದ ಹೇಳಿಕೆಯಿಂದ ಸೃಷ್ಟಿಯಾದ ವಿವಾದವನ್ನು ಎಚ್.ಕೆ.ಪಾಟೀಲ್ ನೀಡಿರುವ ಈ ಹೇಳಿಕೆ ತುಸು ತಣ್ಣಗಾಗಿಸಿದೆ.
ವಿಧಾನಸೌಧದಲ್ಲಿ ಅವರು ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಪಟ್ಟಂತೆ ಸರಕಾರದ ಮುಂದೆ ಇದುವರೆಗೆ ಯಾವುದೇ ಪ್ರಸ್ತಾವ ಇಲ್ಲ. ಪ್ರಸ್ತಾವವೇ ಇಲ್ಲದೆ ಅದರ ಬಗ್ಗೆ ಚರ್ಚೆ ಮಾಡುವುದು ಸೂಕ್ತ ಅಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಬಜೆಟ್ ಅಧಿವೇಶನ ದಿನಾಂಕ ನಿಗದಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಜತೆ ಚರ್ಚಿಸಲಾಗುವುದು. ಮುಂದಿನ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
Related Articles
ತಿದ್ದುಪಡಿ ವಿರೋಧಿಸಿ ಪ್ರತಿಭಟನೆ
ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಚಿಂತನೆ ಮಾಡಿರುವುದು ಹಾಗೂ ಗ್ಯಾರಂಟಿ ಘೋಷಣೆ ಪೂರ್ಣ ಪ್ರಮಾಣದ ಜಾರಿಯಾಗದೆ ಇರುವುದನ್ನು ವಿರೋಧಿಸಿ ಬಿಜೆಪಿ ಬೆಂಗಳೂರು ಮಹಾನಗರದ ಘಟಕದಿಂದ ಮಂಗಳವಾರ ಫ್ರೀಡಂ ಪಾರ್ಕ್‌ನ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು.
ಪಶುಸಂಗೋಪನೆ ಸಚಿವ ವೆಂಕಟೇಶ್ ಅವರು ಎಮ್ಮೆ, ಕೋಣೆಗಳನ್ನು ವಧಿಸುವುದಾದರೆ ವಯಸ್ಸಾದ ಹಸುಗಳನ್ನು ಏಕೆ ಕೊಲ್ಲಬಾರದು ಎಂಬ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಸಿದ್ದು ನೇತೃತ್ವದ ಕಾಂಗ್ರೆಸ್ ಸರಕಾರ ಬಿಜೆಪಿಅವಧಿಯಲ್ಲಿ ಜಾರಿಯಲ್ಲಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ದರ ಹೆಚ್ಚಳ ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕ್ಯಾಬಿನೆಟ್‌ನಲ್ಲಿ ಚರ್ಚೆ
ಗುಂಡ್ಲುಪೇಟೆ: ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪರಾಮರ್ಶಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗುವುದು ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ. ಕಾಯ್ದೆ ಬಗ್ಗೆಯೂ ಹೇಳಿದ್ದಾರೆ. ಅವರೇ ಪ್ರತಿಕ್ರಿಯೆ ಕೊಟ್ಟಿರುವುದರಿಂದ ನಾನೇನು ಮಾತನಾಡುವು ದಿಲ್ಲ ಎಂದು ತಿಳಿಸಿದರು.