Advertisement

ಗಗನಕ್ಕೇರಿದ ಘಟ್ಟದ ಹುಲ್ಲಿನ ಬೆಲೆ; ಹೈನುಗಾರರಿಗೆ ಸಂಕಷ್ಟ, ಕರಾವಳಿಯಲ್ಲಿ ಬೈಹುಲ್ಲು ಕೊರತೆ

11:21 AM Sep 24, 2022 | Team Udayavani |

ಕೋಟ : ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಬೈಹುಲ್ಲಿನ ಕೊರತೆ ಉಂಟಾಗಿದ್ದು, ದರ ಗಗನಕ್ಕೇರಿದೆ. ಕಳೆದ ಬಾರಿ ಕಟಾವು ಸಂದರ್ಭದಲ್ಲಿ ವ್ಯಾಪಕ ಮಳೆಯಾದ ಪರಿಣಾಮ ಮಲೆನಾಡು, ಕರಾವಳಿ ಸೇರಿದಂತೆ ಎಲ್ಲೆಡೆ ಭತ್ತದ ಬೆಳೆ ನಾಶವಾಗಿತ್ತು ಹಾಗೂ ಗದ್ದೆಯಲ್ಲೇ ಪೈರು ಕೊಳೆತಿತ್ತು. ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಶೇ. 50ಕ್ಕೂ ಹೆಚ್ಚು ಪ್ರಮಾಣದ ಕಟಾವು ಮಾಡಿದ ಬೈಹುಲ್ಲು ಗದ್ದೆಯಲ್ಲೇ ಕೊಳೆತು ಉಪಯೋಗರಾಹಿತ್ಯವಾಗಿತ್ತು. ಹೀಗಾಗಿ ಪ್ರಸ್ತುತ ಬೈಹುಲ್ಲಿನ ಕೊರತೆ ಎದುರಾಗಿದ್ದು ದರ ಗಗನಕ್ಕೇರಿದೆ.
ಉಡುಪಿ ಜಿಲ್ಲೆಗೆ ಪ್ರತೀ ವರ್ಷ ನೆರೆಯ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಿಂದ ಮಳೆಗಾಲದಲ್ಲಿ ಹೇರಳ ಪ್ರಮಾಣದಲ್ಲಿ ಬೈಹುಲ್ಲು ಸರಬರಾಜಾಗುತ್ತಿತ್ತು. ಹಿಂದೆಲ್ಲ ಆ ಹುಲ್ಲಿಗೆ ಹೆಚ್ಚೆಂದರೆ ಒಂದು ಕಂತೆಗೆ 40-50 ರೂ.ಗಳಿತ್ತು. ಈ ಬಾರಿ 70ರಿಂದ 80 ರೂ.ಗೇರಿದೆ. ಹಿಂದೆ ಲೋಡಿಗೆ 20-30 ಸಾವಿರ ರೂ. ಇದ್ದರೆ ಈ ಬಾರಿ ದುಪ್ಪಟ್ಟಾಗಿದೆ. ಈ ಪ್ರಮಾಣದಲ್ಲಿ ದುಬಾರಿಯಾಗಿರುವುದು ಇದೇ ಮೊದಲು.

Advertisement

ಹೈನುಗಾರರಿಗೆ ಸಮಸ್ಯೆ
ಎಷ್ಟೇ ಪ್ರಮಾಣದಲ್ಲಿ ಹಸಿ ಹುಲ್ಲು, ಇತರ ಮೇವು ಇದ್ದರೂ ಜಾನುವಾರುಗಳಿಗೆ ಬೈಹುಲ್ಲು ಅಗತ್ಯವಾಗಿ ಬೇಕಿದೆ. ಮೂರ್‍ನಾಲ್ಕು ದನಗಳಿದ್ದರೆ ದಿನ‌ಕ್ಕೆ ಕನಿಷ್ಠ ಆರೇಳು ಸೂಡಿ ಬೈಹುಲ್ಲು ಖರ್ಚಾಗುತ್ತದೆ. ಆದರೆ ಪ್ರಸ್ತುತ ದರದಲ್ಲಿ ಬೈಹುಲ್ಲು ಖರೀದಿಸುವುದು, ದನ ಸಾಕುವುದು ರೈತರಿಗೆ ಅಸಾಧ್ಯವಾಗಿದೆ. ಹಿಂದಿನ ಜಾನುವಾರು ಗಣತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 1.95 ಲಕ್ಷ ಹಾಗೂ ದ.ಕ. ಜಿಲ್ಲೆಯಲ್ಲಿ 2.34 ಲಕ್ಷ ಜಾನುವಾರುಗಳಿವೆ.

ಭತ್ತ ಕಟಾವಿಗೆ ಇನ್ನೂ ಎರಡು ಮೂರು ತಿಂಗಳು ಬಾಕಿ ಇದ್ದು ಇದೇ ರೀತಿ ಬೈಹುಲ್ಲಿನ ಕೊರತೆ ಮುಂದುವರಿದರೆ ದರ ಮತ್ತಷ್ಟು ಹೆಚ್ಚಾಗಿ ಹಾಲಿನಿಂದ ಬರುವ ಆದಾಯವನ್ನೆಲ್ಲ ಬೈಹುಲ್ಲಿಗೆ ವ್ಯಯಿಸಬೇಕಾದ ಸ್ಥಿತಿ ಎದುರಾಗಲಿದೆ ಎನ್ನುತ್ತಾರೆ ರೈತರು.

– ರಾಜೇಶ್‌ ಗಾಣಿಗ ಅಚ್ಲಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next