Advertisement

ಕೋವಿಡ್ ಗೆ ರಾಮಬಾಣ: ಮಂಡ್ಯ ಜಿಲ್ಲೆಗೆ ಬಂದಿಳಿದ ಕೋವಿಶೀಲ್ಡ್ ಲಸಿಕೆ

03:50 PM Jan 14, 2021 | Team Udayavani |

ಮಂಡ್ಯ: ಕಳೆದ 9 ತಿಂಗಳಿನಿಂದ ಕೊರೊನಾ ಸೋಂಕಿನಿಂದ ಸಂಕಷ್ಟ ಅನುಭವಿಸಿದ್ದ ಜಿಲ್ಲೆಯ ಜನರು ಯಾವಾಗ ಕೊರೊನಾಗೆ ಲಸಿಕೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಕೊನೆಗೂ ವರ್ಷದ ಮೊದಲ ಹಬ್ಬ ಸಂಕ್ರಾಂತಿ ದಿನವೇ ಕೋವಿಡ್-19 ಲಸಿಕೆ ಮಂಡ್ಯ ತಲುಪಿದೆ.

Advertisement

ಗುರುವಾರ ಮಧ್ಯಾಹ್ನ ಮೈಸೂರಿನಿಂದ ಆಗಮಿಸಿದ ಲಸಿಕೆ ಹೊತ್ತ ವಾಹನ ನಗರದ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿ ಕಚೇರಿ ಲಸಿಕೆ ಸಂಗ್ರಹ ಕೊಠಡಿ ಬಳಿ ಬಂದಾಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ನೇತೃತ್ವದ ಅಧಿಕಾರಿಗಳ ತಂಡ ಬರಮಾಡಿಕೊಂಡು ಲಸಿಕೆ ಇದ್ದ ಕೋಲ್ಡ್ ಬಾಕ್ಸ್ ಗಳಿಗೆ ಪೂಜೆ ಸಲ್ಲಿಸಿ, ನಂತರ ಕೊಠಡಿಗೆ ರವಾನಿಸಿದರು.

8 ಸಾವಿರ ಲಸಿಕೆ:
8 ಸಾವಿರ ಕೋವಿಶೀಲ್ಡ್ ಲಸಿಕೆ ನಾಲ್ಕು ಕೋಲ್ಡ್ ಬಾಕ್‌ನಲ್ಲಿ ಬಂದಿದ್ದು, ಡಿ ಫ್ರೀಜರ್ ಮಾಡಿ ಲಸಿಕೆಗಳನ್ನು ಸಂಗ್ರಹಿಡಲಾಯಿತು. ಶನಿವಾರದಿಂದ ತಾಲೂಕುಗಳಿಗೆ ಹಂಚಿಕೆ ಮಾಡಿ ರವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ನೀಡಲು ಅಗತ್ಯ ಸಿಬ್ಬಂದಿಗಳ ನೇತೃತ್ವದ ತಂಡಕ್ಕೆ ತರಬೇತಿ ನೀಡಲಿದ್ದು, ಕಾರ್ಯನಿರ್ವಹಿಸಲಿದ್ದಾರೆ.

15316 ಮಂದಿಗೆ ಲಸಿಕೆ:
ಮೊದಲ ಹಂತದಲ್ಲಿ 15316 ಮಂದಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ತಾಲೂಕುವಾರು ನೋಂದಣಿ ಮಾಡಿಸಿಕೊಂಡಿರುವ ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲು ಸಿದ್ಧತೆ ನಡೆದಿದೆ.

Advertisement

ಇದನ್ನೂ ಓದಿ:ಏಳು ಜನ್ಮ ಎತ್ತಿದರೂ ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲಾಗದು: ಡಿ ಕೆ ಶಿವಕುಮಾರ್ ಗುಡುಗು

ಸಫಾಯಿ ಕರ್ಮಚಾರಿ ನೌಕರರಿಗೆ ಮೊದಲ ಲಸಿಕೆ:
ಶನಿವಾರದಿಂದ ನಡೆಯುವ ಲಸಿಕೆ ಹಾಕುವ ಕಾರ್ಯ ನಡೆಯಲಿದ್ದು, ಮೊದಲ ಲಸಿಕೆ ಮಂಡ್ಯದ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸಫಾಯಿ ಕರ್ಮಚಾರಿ, ಡಿ ಗ್ರೂಪ್ ನೌಕರರು ಹಾಗೂ ಕೊರೊನಾ ಸೋಂಕಿತರೊಂದಿಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ನಂತರ 2ನೇ ಹಂತದಲ್ಲಿ ವೈದ್ಯರು, ಪೊಲೀಸರು, ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸೋಂಕಿತರು, ವಯಸ್ಸಾದವರಿಗೆ ನೀಡಲು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ.

ಒಂದು ವಯಲ್‌ನಿಂದ 10 ಮಂದಿಗೆ ಲಸಿಕೆ:
ಕೋವಿಶೀಲ್ಡ್ ಲಸಿಕೆಯ ಒಂದು ವಯಲ್(5 ಎಂಎಲ್‌ನ ಒಂದು ಬಾಟಲ್)ನಲ್ಲಿ 5 ಎಂಎಲ್ ಲಸಿಕೆ ಇದ್ದು, ಒಬ್ಬ ವ್ಯಕ್ತಿಗೆ 0.5 ಎಂಎಲ್‌ನoತೆ 10 ಮಂದಿಗೆ ನೀಡಲಾಗುವುದು. ಒಬ್ಬ ವ್ಯಕ್ತಿಗೆ ಮೊದಲ ಲಸಿಕೆ ನೀಡಿದ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುವುದು.

8 ಕೇಂದ್ರಗಳಲ್ಲಿ ಲಸಿಕೆ:
ಮೊದಲ ಹಂತದ ಲಸಿಕೆ ನೀಡಲು ಜಿಲ್ಲೆಯಾದ್ಯಂತ 8 ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶನಿವಾರದಿಂದ 6 ತಾಲೂಕು ಆಸ್ಪತ್ರೆಯ ಕೇಂದ್ರ, ಮಂಡ್ಯದ ಮಿಮ್ಸ್ ಹಾಗೂ ಕೊತ್ತತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗುವುದು. ನಂತರ ಕೇಂದ್ರಗಳನ್ನು ವಿಸ್ತರಿಸಲು ಕ್ರಮ ವಹಿಸಲಾಗಿದೆ.

ಪ್ರತಿ ದಿನ 800 ಮಂದಿಗೆ ಲಸಿಕೆ:
ಪ್ರತಿದಿನ 8 ಕೇಂದ್ರಗಳಲ್ಲಿ ತಲಾ 100 ಮಂದಿಯoತೆ 800 ಮಂದಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿಗೆ ಲಸಿಕೆ ನೀಡಿದ 30 ನಿಮಿಷಗಳ ಕಾಲ ನಿಗಾ ವಹಿಸಲಾಗುವುದು. ನಂತರ ಆತನ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದರೆ ತಕ್ಷಣ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲು ಎಲ್ಲ ರೀತಿಯ ವೈದ್ಯರು, ಸಿಬ್ಬಂದಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಕಂಡು ಬರದಿದ್ದರೆ ಆ ವ್ಯಕ್ತಿಯನ್ನು ಮನೆಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next