ಕೇರಳ : ಕೋವಿಡ್ ವಿರುದ್ಧದ ಹೋರಾಟ ಚುರುಕುಗೊಳಿಸಿರುವ ಕೇರಳ ಸರ್ಕಾರ 18 ವರ್ಷ ವಯಸ್ಸು ದಾಟಿದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಮುಂದಾಗಿದೆ.
ಇಂದು ವಿವಿಧ ರಾಜಕೀಯ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 18 ವರ್ಷ ವಯಸ್ಸಿನ ಮೇಲ್ಪಟ್ಟವರಿಗೆಲ್ಲರಿಗೂ ಸರ್ಕಾರದ ವತಿಯಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದರು.
ರಾಜ್ಯ ಸರ್ಕಾರಗಳಿಗೆ ಕೋವಿಡ್ ವ್ಯಾಕ್ಸಿನ್ ಖರೀದಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ, ಕೋವಿಡ್ ಪಿಡುಗಿನಿಂದಾಗಿ ಈಗಾಗಲೇ ರಾಜ್ಯ ಸರ್ಕಾರ ಆರ್ಥಿಕ ಹೊರೆ ಎದುರಿಸುತ್ತಿವೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕೆಂದು ಅವರು ಮನವಿ ಮಾಡಿದರು.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 22,414 ನೂತನ ಪ್ರಕರಣಗಳು ಪತ್ತೆಯಾಗಿವೆ. 22 ಜನರು ಸೋಂಕಿಗೆ ಬಲಿಯಾಗಿದ್ದಾರೆ. 5431 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಖಾಸಗಿ ಆಸ್ಪತ್ರೆಗಳ ಜೊತೆ ಸಭೆ :
ಇನ್ನು ಕೋವಿಡ್ ನಿಯಂತ್ರಣಕ್ಕೆ ಸಲಹೆ ಸೂಚನೆ ಪಡೆಯುವ ಉದ್ದೇಶದಿಂದ ಖಾಸಗಿ ಆಸ್ಪತ್ರೆಗಳ ಕೊತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.