ಬ್ರಹ್ಮಾವರ: ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಸಮಾಜದ ಭದ್ರತೆಗಾಗಿ, ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದ ಆರಕ್ಷಕರಿಗೆ ಈಗ ಸೋಂಕು ಸಂಕಷ್ಟ ಆರಂಭವಾಗಿದೆ. ಇದೀಗ ಉಡುಪಿ ಜಿಲ್ಲೆಯ ಬ್ರಹ್ಮಾವರದ ಪೊಲೀಸ್ ಸಿಬ್ಬಂದಿಯೋರ್ವರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ
ಈ ಪೊಲೀಸ್ ಸಿಬ್ಬಂದಿ ಲಾಕ್ ಡೌನ್ ಸಮಯದಲ್ಲಿ ಸಾಸ್ತಾನದ ಟೋಲ್ ಪ್ಲಾಜಾ ಸೇರಿ ಹಲವು ಕಡೆ ಕಾರ್ಯ ನಿರ್ವಹಿಸಿದ್ದರು. ಇಂದು ಅವರ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಸೋಂಕು ತಾಗಿರುವುದು ದೃಢವಾಗಿದೆ.
ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ತಾಗಿರುವ ಕಾರಣ ಬ್ರಹ್ಮಾವರ ಪೊಲೀಸ್ ಠಾಣೆಯನ್ನು ಎರಡು ದಿನಗಳ ಕಾಲ ಕ್ಲೋಸ್ ಡೌನ್ ಮಾಡಲು ಸಿದ್ದತೆ ನಡೆಸಲಾಗುತ್ತಿದೆ. ಠಾಣೆಯನ್ನು ಸಂಪೂರ್ಣ ಬಂದ್ ಮಾಡಿ ಸ್ಯಾನಿಟೈಜ್ ಮಾಡಿದ ನಂತರ ಮತ್ತೆ ತೆರೆಯಲಾಗುವುದು ಎನ್ನಲಾಗಿದೆ.
ಸೋಂಕಿತ ಪೊಲೀಸ್ ಕಾನ್ಸ್‌ಟೇಬಲ್ ಕೋಟ ಸಮೀಪದ ವಡ್ಡರ್ಸೆ ನಿವಾಸಿಯಾಗಿರುವುದರಿಂದ ಊರಿನ ಒಂದು ಕಿ.ಮೀ ಸುತ್ತ ಬಪರ್ ಝೋನ್ ಘೋಷಣೆ ಮಾಡಲಾಗಿದೆ.
ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಮತ್ತು ಅಜೆಕಾರು ಠಾಣೆಯ ಎಎಸ್ ಐ ಅವರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಹಾಗಾಗಿ ಎರಡೂ ಕಡೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.