ವುಹಾನ್: ವಿಶ್ವದ ಹಲವೆಡೆ ಸದ್ಯ ಶೈಕ್ಷಣಿಕ ವರ್ಷದ ಪುನರಾರಂಭದ ಪರ್ವ ಶುರುವಾಗಿದ್ದು, ಶಿಕ್ಷಣ ಸಂಸ್ಥೆಗಳ ಪುನರಾರಂಭಕ್ಕೆ ಅವಕಾಶ ನೀಡಲಾಗಿದೆ. ಆದರೆ ಶಾಲಾ -ಕಾಲೇಜು ತೆರೆಯುವಿಕೆಗೆ ಕೆಲವು ನಿಬಂಧನೆಗಳನ್ನು ಸೂಚಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಆದೇಶಿಸಿದೆ.
ಈಗಾಗಲ್ಲೇ ಶ್ರೀಲಂಕಾದಲ್ಲಿ ಶಾಲಾ- ಕಾಲೇಜು ಆರಂಭವಾಗಿದ್ದು, ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಹಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಲಾಕ್‌ಡೌನ್ ನಿಬಂಧನೆಗಳನ್ನು ಸಂಪೂರ್ಣವಾಗಿ ಸಡಿಲಿಕೆ ಮಾಡಲಾಗಿದೆ.
ಇದೀಗ ಕೋವಿಡ್ ತವರೂರು ಎಂದೇ ಕುಖ್ಯಾತಿ ಪಡೆದಿರುವ ಚೀನದ ವುಹಾನ್‌ನಲ್ಲಿ ಶಿಶುವಿಹಾರಗಳು ಸೇರಿ ಎಲ್ಲ ಶಾಲಾ-ಕಾಲೇಜುಗಳು ಮಂಗಳವಾರದಿಂದ ಪುನರಾರಂಭವಾಗಲಿವೆ. ನಗರದಲ್ಲಿರುವ 2,842 ಶಿಕ್ಷಣ ಸಂಸ್ಥೆಗಳು ಮತ್ತೆ ತೆರೆಯಲ್ಲಿದ್ದು, 14 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜುಗಳಮರಳಲಿದ್ದಾರೆ ಎಂದು ವುಹಾನ್ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ವುಹಾನ್ ವಿಶ್ವ ವಿದ್ಯಾಲಯ ಕೂಡ ಸೋಮವಾರ ಆರಂಭವಾಗಲಿದ್ದು, ಸಂಸ್ಥೆಗಳು ಸೋಂಕು ಹರಡುವಿಕೆ ತಡೆಯಲು ಅಗತ್ಯ ಕ್ರಮಗಳನ್ನು ಹೊಂದಿರಬೇಕು . ಹೊಸದಾಗಿ ಕೊರೊನಾ ಕಾಣಿಸಿಕೊಂಡರೆ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರೊಂದಿಗೆ ಅನಗತ್ಯವಾಗಿ ಗುಂಪು ಸೇರುವುದನ್ನು ತಡೆಯಬೇಕು ಹಾಗೂ ದಿನವೂ ಆರೋಗ್ಯ ಇಲಾಕೆಗೆ ವರದಿ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.
ಆದರೆ ವಿದೇಶಿ ವಿದ್ಯಾರ್ಥಿಗಳು ಹಾಗೂ ಬೋಧಕರು ಆಯಾ ಸಂಸ್ಥೆಗಳಿಂದ ಸೂಚನೆ ದೊರೆಯದಿದ್ದಲ್ಲಿ ಆಗಮಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇನ್ನು ಚೀನದಲ್ಲಿ ಇಲ್ಲಿಯವರೆಗೆ 85,031 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 4,634 ಮಂದಿ ಮೃತಪಟ್ಟಿದ್ದು, 80,153 ಸೋಂಕಿತರು ಗುಣಮುಖರಾಗಿದ್ದಾರೆ.