Advertisement

ಲಸಿಕೆಯ ಕೊರತೆ ಬಗೆಹರಿಯದೇ 18+ ಲಸಿಕೆ ಅನುಮಾನ

11:16 PM May 05, 2021 | Team Udayavani |

ಕೇಂದ್ರ ಸರಕಾರ ಮೇ 1ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವುದಾಗಿ ಘೋಷಣೆ ಮಾಡಿತ್ತು. ಆದರೆ ಆ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ವಹಿಸಿತ್ತು. ಆರಂಭದ ಹಂತಗಳಲ್ಲಿ ಲಸಿಕೆಯ ಬಗೆಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡದಿರುವುದು ಮತ್ತು ಲಸಿಕೆಯ ಕುರಿತಾಗಿನ ವದಂತಿಗಳಿಂದಾಗಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಆದರೆ ಕೋವಿಡ್‌ 2ನೇ ಅಲೆ ದೇಶವ್ಯಾಪಿಯಾಗಿ ಹರಡುತ್ತಿರುವಂತೆಯೇ ಜನರೂ ಸೋಂಕಿನ ತೀವ್ರತೆಯ ಬಗೆಗೆ ಭೀತರಾಗಿ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳತ್ತ ಮುಗಿ ಬೀಳುತ್ತಿದ್ದಾರೆ. ಆದರೆ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಎಲ್ಲ ರಾಜ್ಯಗಳಿಗೆ ಲಸಿಕೆ ಪೂರೈಸಲು ಕೇಂದ್ರ ಸರಕಾರ ಮತ್ತು ಲಸಿಕೆ ಉತ್ಪಾದಕ ಕಂಪೆನಿಗಳಿಗೆ ಸಾಧ್ಯವಾಗುತ್ತಿಲ್ಲ.

Advertisement

ಇದರ ಪರಿಣಾಮ ಲಸಿಕೆಯ ತೀವ್ರ ಕೊರತೆ ಎದುರಾಗಿದೆ. ಹೀಗಾಗಿ ಹಲವು ರಾಜ್ಯಗಳು 2-3 ವಾರಗಳ ಬಳಿಕ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತೀರ್ಮಾನಿಸಿವೆ. ಲಸಿಕೆ ಕೊರತೆಯನ್ನು ಹೋಗಲಾಡಿಸಲು ಕೇಂದ್ರ ಸರಕಾರ ಹರಸಾಹಸ ಪಡುತ್ತಿದೆ. ಕೇಂದ್ರ ಸರಕಾರ 160 ದಶಲಕ್ಷ ಡೋಸ್‌ ಕೊವಿಶೀಲ್ಡ್ ಮತ್ತು ಕೊವಾಕ್ಸಿನ್‌ಗೆ ಬೇಡಿಕೆ ಸಲ್ಲಿಸಿದೆ. ಇದು ಮೇ, ಜೂನ್‌ ಮತ್ತು ಜುಲೈ ತಿಂಗಳುಗಳಲ್ಲಿ ಪೂರೈಕೆಯಾಗಲಿದೆ. ಆದರೆ ಈ ಹಿಂದೆ ಸಲ್ಲಿಸಿದ್ದ ಬೇಡಿಕೆಯನ್ವಯ ಇನ್ನೂ 23 ಮಿಲಿಯನ್‌ ಡೋಸ್‌ಗಳು ಇನ್ನಷ್ಟೇ ಸರಕಾರದ ಕೈಸೇರಬೇಕಿದೆ.

ಕೆಲವು ರಾಜ್ಯಗಳು 18ರಿಂದ 44 ವರ್ಷದೊಳಗಿನ ಜನರು ಲಸಿಕೆ ಪಡೆಯಲು ಮೇ ಮೂರನೇ ವಾರದವರೆಗೆ ಕಾಯಬೇಕಾಗುತ್ತದೆ ಎಂದು ಹೇಳಿವೆ. ಸ್ಥಳೀಯ ಉತ್ಪಾದಕರಾದ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ಇಂಡಿಯಾ (ಎಸ್‌ಐಐ) ಮತ್ತು ಭಾರತ್‌ ಬಯೋಟೆಕ್‌ ಜತೆ ಆದೇಶಗಳನ್ನು ನೀಡಿದ್ದರೂ ಡೋಸೇಜ್‌ಗಳನ್ನು ತಲುಪಿಸುವಲ್ಲಿ ವಿಳಂಬವಾಗಲಿದೆ ಎಂದು ಕಂಪೆನಿಗಳು ತಿಳಿಸಿವೆ. ದೇಶದಲ್ಲಿ ಲಸಿಕೆ ಕೊರತೆಯ ಸ್ಪಷ್ಟ ಮಾಹಿತಿ ಇದ್ದರೂ ಕೋಟ್ಯಂತರ ಮಂದಿ ಈಗಾಗಲೇ ಕೋ-ವಿನ್‌ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕೊರೊನಾ ನಿರೋಧಕ ಲಸಿಕೆ ನೀಡಿಕೆ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ. ಕೆಲವು ರಾಜ್ಯಗಳಲ್ಲಿನ ಕೋವಿಡ್‌ ಲಸಿಕೆ ನೀಡಿಕೆ ಪ್ರಕ್ರಿಯೆಯ ಸದ್ಯದ ಸ್ಥಿತಿಗತಿಗಳ ಚಿತ್ರಣ ಇಲ್ಲಿದೆ.

ಆಮೆಗತಿಯಲ್ಲಿ ಲಸಿಕೆ ಪ್ರಕ್ರಿಯೆ :

ಮೂರನೇ ಹಂತದ ಲಸಿಕಾ ಅಭಿಯಾನ ಆರಂಭವಾಗಿ ವಾರ ಸಮೀಪಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ನೀಡಿಕೆ ಪ್ರಕ್ರಿಯೆ ವೇಗ ಪಡೆದುಕೊಂಡಿಲ್ಲ. ಇದೇ ವೇಳೆ ಸಾರ್ವತ್ರಿಕ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭಿಸಿದ್ದರಿಂದಾಗಿ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವಂತಾಗಿದೆ. ಬಹುತೇಕ ಕಡೆ ಈ ವಯೋಮಿತಿಯ ಮಂದಿ ಲಸಿಕೆಯ ಒಂದನೇ ಡೋಸ್‌ ಪಡೆಯಲು ಸರದಿಯಲ್ಲಿದ್ದರೆ ಇನ್ನು ಕೆಲವೆಡೆ ಈಗಾಗಲೇ ಒಂದು ಡೋಸ್‌ ಪಡೆದು ಎರಡನೇ ಡೋಸ್‌ ಪಡೆಯಲು ಕಾಯುತ್ತಿದ್ದಾರೆ. ಆದರೆ ಲಸಿಕೆಯ ಕೊರತೆ ಯಿಂದಾಗಿ ಇಡೀ ಪ್ರಕ್ರಿಯೆಗೆ ತೊಡಕಾಗಿ ಪರಿಣಮಿಸಿದೆ.

Advertisement

ಕರ್ನಾಟಕ :

ರಾಜ್ಯದಲ್ಲಿ 18+ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಳ್ಳಲು ಕೆಲವು ವಾರಗಳಷ್ಟು ಸಮಯ ತಗಲುವ ಸಾಧ್ಯತೆ ಇದೆ. ರಾಜ್ಯ ಸರಕಾರ ಕೂಡ ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ಗೆ ಒಂದು ಕೋಟಿಗೂ ಹೆಚ್ಚು ಲಸಿಕೆ ಪೂರೈಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಸೀರಮ್‌ ಇನ್‌ಸ್ಟಿಟ್ಯೂಟ್‌ ಒಂದು ತಿಂಗಳಲ್ಲಿ 5ರಿಂದ 6 ಕೋಟಿ ಡೋಸ್‌ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ 1ರಿಂದ 1.5 ಕೋಟಿ ಡೋಸ್‌ ಉತ್ಪಾದಿಸಬಹುದು.

ಮಹಾರಾಷ್ಟ್ರ :

ರಾಜ್ಯ ಸರಕಾರ ಮುಂದಿನ ಆರು ತಿಂಗಳುಗಳಲ್ಲಿ ತನ್ನ ನಾಗರಿಕರಿಗೆ ಲಸಿಕೆ ನೀಡಲು ಯೋಜಿಸಿದೆ. ಅಲ್ಲಿನ ಸರಕಾರ ಈಗ 18-44 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇದರಲ್ಲಿ 18-25, 25-35 ಮತ್ತು 35-44 ವರ್ಷದವರು..ಹೀಗೆ ಮೂರು ವರ್ಗಗಳಲ್ಲಿ ವಿಂಗಡಿಸಿ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಹಂತಹಂತವಾಗಿ ನಡೆ ಸಲು ಸರಕಾರ ರಚಿಸಿರುವ ಉನ್ನತಮ ಟ್ಟದ ಸಮಿತಿ ಗಂಭೀರ ಚಿಂತನೆ ನಡೆಸಿದೆ.

ಹೊಸದಿಲ್ಲಿ :

ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ಕೊವಿಶೀಲ್ಡ… ಮತ್ತು ಕೊವಾಕ್ಸಿನ್‌ನ ತಲಾ 67 ಲಕ್ಷ ಡೋಸ್‌ಗಳಿಗೆ ಆದೇಶ ನೀಡಿದ್ದಾರೆ. ಕಂಪೆನಿಗಳು ಸಾಕಷ್ಟು ಪ್ರಮಾಣದ ಲಸಿಕೆಗಳನ್ನು ಪೂರೈಸಿದರೆ ಮುಂದಿನ 3 ತಿಂಗಳು ಗಳಲ್ಲಿ ಎಲ್ಲರಿಗೂ ಲಸಿಕೆ ಹಾಕುವ ಗುರಿಯನ್ನು ಸರಕಾರ ಹೊಂದಿದೆ.

ಗುಜರಾತ್‌ :

ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಕನಿಷ್ಠ ಮೇ 15ರ ವರೆಗೆ ಕಾಯಬೇಕಾಗುತ್ತದೆ. ಫಾರ್ಮಾ ಕಂಪೆನಿಗಳಿಂದ ಸಾಕಷ್ಟು ಪ್ರಮಾಣದ ಲಸಿಕೆಗಳನ್ನು ಪಡೆದ ಬಳಿಕ ಇವರಿಗೆ ಲಸಿಕೆ ಪ್ರಾರಂಭವಾಗುತ್ತದೆ. ರಾಜ್ಯವು 2.5 ಕೋಟಿ ಡೋಸ್‌ಗಳನ್ನು ಆದೇಶಿಸಿದೆ.  ಅದರಲ್ಲಿ 2 ಕೋಟಿ ಕೊವಿಶೀಲ್ಡ್ ಮತ್ತು 50  ಲಕ್ಷ ಕೊವಾಕ್ಸಿನ್‌ ಡೋಸ್‌ಗಳಾಗಿವೆ.

ರಾಜಸ್ಥಾನ :

ರಾಜ್ಯದಲ್ಲಿ ಮೇ 15ರಂದು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಪ್ರಾರಂಭಿಸುವ ನಿರೀಕ್ಷೆ ಇದೆ. 18 ವರ್ಷ ಮೇಲ್ಪಟ್ಟ 3.25 ಕೋಟಿ ಜನರಿದ್ದಾರೆ¬ 3.75 ಕೋಟಿ ಡೋಸ್‌ಗಳಷ್ಟು ಕೊವಿಶೀಲ್ಡ… ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ.

ಆಂಧ್ರಪ್ರದೇಶ :

ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ರಾಜ್ಯದಲ್ಲಿ ಲಸಿಕೆಯ ಕೊರತೆಯನ್ನು ಒಪ್ಪಿಕೊಂಡಿದ್ದು, 18ರಿಂದ 44 ವರ್ಷದೊಳಗಿನವರು ಲಸಿಕೆ ಪಡೆಯಲು ಸೆಪ್ಟಂಬರ್‌ ವರೆಗೆ ಕಾಯಬೇಕಾಗುತ್ತದೆ ಎಂದಿದ್ದಾರೆ. ರಾಜ್ಯದಲ್ಲಿ 18-45 ವಯಸ್ಸಿನ 60 ಕೋಟಿ ಜನರಿದ್ದು, ಅವರಿಗೆ 120 ಕೋಟಿ ಡೋಸ್‌ಗಳ ಅಗತ್ಯವಿದೆ.

ಗೋವಾ :

ರಾಜ್ಯದ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಾದ ಬಳಿಕವಷ್ಟೇ 18-45 ವರ್ಷದೊಳಗಿನವರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ. ಸದ್ಯಕ್ಕೆ 45ವರ್ಷ ಮೇಲ್ಪಟ್ಟವರಿಗೆ ಎರಡು ಡೋಸ್‌ಗಳಲ್ಲಿ ಲಸಿಕೆ ನೀಡಲು ಅಗತ್ಯವಿರುವಷ್ಟು ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಿಲ್ಲ. ಆದ್ದರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆಯ ಆರಂಭ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಉತ್ಪಾದನ ಸಾಮರ್ಥ್ಯ ಹೆಚ್ಚಳ :

ಪೂರೈಕೆಯನ್ನು ಹೆಚ್ಚಿಸಲು ಈಗಾಗಲೇ ಲಸಿಕೆ ತಯಾರಕರು ಉತ್ಪಾದನ ಸಾಮ ರ್ಥ್ಯವನ್ನು ಹೆಚ್ಚಿಸುತ್ತಿದ್ದಾರೆ. ಆದರೆ ಇದು ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ ಇರುವ 60-70 ದಶಲಕ್ಷದಿಂದ ಜುಲೈ ವೇಳೆಗೆ ಕೊವಿಶೀಲ್ಡ್ ಉತ್ಪಾದನೆಯನ್ನು ತಿಂಗಳಿಗೆ 100 ಮಿಲಿಯನ್‌ ಡೋಸ್‌ಗಳಿಗೆ ಹೆಚ್ಚಿಸಲು ಸೀರಮ್‌ ಸಂಸ್ಥೆ ಯೋಚಿಸುತ್ತಿದೆ. ಇನ್ನು ಭಾರತ್‌ ಬಯೋಟೆಕ್‌ ತನ್ನ ಸಾಮರ್ಥ್ಯವನ್ನು ತಿಂಗಳಿಗೆ 10 ಮಿಲಿಯನ್‌ ಡೋಸ್‌ಗಳಿಂದ ಜೂನ್‌ ವೇಳೆಗೆ ಸುಮಾರು 20 ಮಿಲಿಯನ್‌ಗೆ, ಆಗಸ್ಟ್‌ ವೇಳೆಗೆ 60-70 ಮಿಲಿಯನ್‌ಗೆ ಮತ್ತು ಸೆಪ್ಟಂಬರ್‌ ವೇಳೆಗೆ 100 ಮಿಲಿಯನ್‌ಗೆ ಹೆಚ್ಚಿಸಲು ಯೋಜಿಸುತ್ತಿದೆ. ಸರಕಾರಿ ಸ್ವಾಮ್ಯದ ಮೂರು ಕಂಪೆನಿಗಳಾದ ಇಂಡಿಯನ್‌ ಇಮ್ಯುನೊಲಾಜಿಕಲ್ಸ್‌ ಲಿ., ಭಾರತ್‌ ಇಮ್ಯುನೊಲಾಜಿಕಲ್ಸ್ ಮತ್ತು ಬಯೋಲಾಜಿಕಲ್ಸ್ ಕಾರ್ಪ್‌ ಲಿ. ಮತ್ತು ಹ್ಯಾಫ್ಕಿನ್‌ ಬಯೋಫಾರ್ಮಾಸ್ಫುಟಿಕಲ್ಸ್ ಲಿ. ನ ಸಹಭಾಗಿತ್ವದಲ್ಲಿ ಉತ್ಪಾದನ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಲಾಗಿದೆ.

7.8 ಮಿಲಿಯನ್‌ ದಾಸ್ತಾನು : ಆರೋಗ್ಯ ಸಚಿವಾಲ ಯವು ಪ್ರಸ್ತುತ 7.8 ದಶಲಕ್ಷಕ್ಕೂ ಹೆಚ್ಚಿನ ಲಸಿಕೆಯನ್ನು ತಮ್ಮ ದಾಸ್ತಾನುಗಳಲ್ಲಿ ಇರಿಸಿದೆ. ಮುಂದಿನ ದಿನಗಳಲ್ಲಿ 5.6 ದಶಲಕ್ಷಕ್ಕೂ ಹೆಚ್ಚಿನ ಲಸಿಕೆಗಳು ಬಳಕೆಯಾಗಲಿವೆ.

ಸ್ವಯಂ ಜಾಗ್ರತೆ  ಅವಶ್ಯ : ದೇಶದ ಬಹುತೇಕ ಎಲ್ಲೆಡೆ ಕೋವಿಡ್‌ ಲಸಿಕಾ ಕೇಂದ್ರಗಳಲ್ಲಿ ಜನಜಂಗುಳಿಯೇ ಕಂಡುಬರುತ್ತಿದೆ. ಜನರು ಬೆಳ್ಳಂಬೆಳಗ್ಗೆಯೇ ಲಸಿಕಾ ಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಆದರೆ ಲಸಿಕೆ ಕೊರತೆಯ ಪರಿಣಾಮ ಬಹುತೇಕ ಮಂದಿಗೆ ಲಸಿಕೆ ನೀಡಲು ಕೇಂದ್ರಗಳ ಸಿಬಂದಿಗೆ ಸಾಧ್ಯವಾಗುತ್ತಿಲ್ಲ. ಲಸಿಕಾ ಕೇಂದ್ರಗಳ ಸುತ್ತಮುತ್ತ ಕೊರೊನಾ ಮಾರ್ಗಸೂಚಿಗಳನ್ನು ಜನರು ಪಾಲಿಸದೇ ಇರುವುದು ಕಂಡುಬರುತ್ತಿದ್ದು ಇದು ತೀರಾ ಗಂಭೀರ ಮತ್ತು ಅಪಾಯಕಾರಿ ವಿಷಯವಾಗಿದೆ. ನೈರ್ಮಲ್ಯ, ಸಾಮಾಜಿಕ ಅಂತರ..ಇವೆಲ್ಲವೂ ಲಸಿಕಾ ಕೇಂದ್ರಗಳ ಸುತ್ತಮುತ್ತಲಿನ ಪರಿಸರದಲ್ಲಿ ಮಾಯವಾಗಿದೆ. ಇಂತಹುದೇ ದೃಶ್ಯ ಕೋವಿಡ್‌ ಪರೀಕ್ಷಾ ಕೇಂದ್ರಗಳ ಪರಿಸರದಲ್ಲೂ ಕಂಡುಬರುತ್ತಿದೆ. ಇದು ಅಪಾಯವನ್ನು ಸ್ವತಃ ಮೈಮೇಲೆ ಎಳೆದುಕೊಂಡಂತೆ. ಜನರು ಈ ಬಗ್ಗೆ ಸ್ವಯಂ ಜಾಗ್ರತರಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next