Advertisement

ಹನ್ನೆರಡು ವಾರ ಪೂರ್ಣಗೊಂಡರೆ ಮಾತ್ರ ಎರಡನೇ ಡೋಸ್: ಇಂದಿನಿಂದ ಯಾರಿಗೆ ಕೋವಿಶೀಲ್ಡ್‌ ಲಸಿಕೆ?

08:56 AM May 15, 2021 | Team Udayavani |

ಬೆಂಗಳೂರು: ಶನಿವಾರದಿಂದ ರಾಜ್ಯದಲ್ಲಿ ಯಾರಿಗೆ ಕೋವಿಶೀಲ್ಡ್‌ ಲಸಿಕೆ ನೀಡಲಾಗುತ್ತದೆ ಪ್ರಶ್ನೆ ಎದುರಾಗಿದೆ. ರಾಜ್ಯದಲ್ಲಿ ಶೇ. 93ರಷ್ಟು ಕೋವಿಶೀಲ್ಡ್‌ ಲಸಿಕೆಯನ್ನೇ ಬಳಸಲಾಗಿದೆ. ಕೋವಿಶೀಲ್ಡ್‌ ಮೊದಲ  ಡೋಸ್‌ ಪಡೆದು 12 ವಾರ ಪೂರ್ಣಗೊಂಡವರು ಮಾತ್ರ ಕೊರೊನಾ ಲಸಿಕಾ ಕೇಂದ್ರಕ್ಕೆ ಬನ್ನಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಆದರೆ, ಕೊರೊನಾ ಲಸಿಕೆ ಸಾರ್ವಜನಿಕರಿಗೆ ನೀಡಲು ಆರಂಭಿಸಿಯೇ 10 ವಾರಗಳಷ್ಟೇ ಆಗಿವೆ. ಇನ್ನೊಂದೆಡೆ  18 ರಿಂದ 44 ವರ್ಷದವರ ಲಸಿಕೆ ಅಭಿಯಾನ ಬಂದ್‌ ಮಾಡಿದ್ದು, 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್‌ ಇಲ್ಲ ಎಂದು ಸರ್ಕಾರ ಹೇಳಿದೆ. ಹಾಗಾದರೆ ಇಂದಿನಿಂದ ರಾಜ್ಯದಲ್ಲಿ ಯಾರಿಗೆ ಕೋವಿಶೀಲ್ಡ್‌ ಲಸಿಕೆ  ನೀಡುತ್ತಾರೆಂಬ ಪ್ರಶ್ನೆ ಮೂಡಿದೆ.

ಮಾರ್ಚ್‌ 1 ರಿಂದ 60 ವರ್ಷ ಮೇಲ್ಪಟ್ಟವರ ಮತ್ತು 45 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆ ಹೊಂದಿರುವವರ, ಏ.1ರಿಂದ 45 ವರ್ಷ ಮೇಲ್ಪಟ್ಟವರ ಲಸಿಕೆ  ಅಭಿಯಾನ ಆರಂಭವಾಗಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಲಸಿಕೆ ಪಡೆದಿದ್ದ ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಮುಂಚೂಣಿ ಕಾರ್ಯಕರ್ತರು ಈಗಾಗಲೇ ಎರಡನೇ ಡೋಸ್‌ ಪಡೆದಿದ್ದಾರೆ.  ಅಲ್ಲದೆ, ಮಾರ್ಚ್‌ ಮೊದಲೆರಡು  ವಾರ ಲಸಿಕೆ ಪಡೆದ ಬಹುತೇಕರು  ಈಗಾಗಲೇ ಎರಡನೇ ಡೋಸ್‌ ಪಡೆದಿದ್ದಾರೆ.

ಸದ್ಯ ಮಾರ್ಚ್‌ ಎರಡನೇ ವಾರದಿಂದ ಲಸಿಕೆ ಪಡೆವರಿಗೆ ಮಾತ್ರ 2ನೇ ಡೋಸ್‌ ಬಾಕಿ ಇದ್ದು, ಹೊಸ  ಮಾರ್ಗಸೂಚಿಯಂತೆ ಅವರಿಗೆ 12 ವಾರ ಪೂರ್ಣವಾಗುವುದಕ್ಕೆ ಜೂ.10 ಆಗಲಿದೆ. ಈ ಮೂಲಕ  ನಾಳೆಯಿಂದ ಲಸಿಕಾ ಕೇಂದ್ರಗಳು ಬಹುತೇಕ ಖಾಲಿ ಖಾಲಿಯಾಗಿರುವ ಸಾಧ್ಯತೆಗಳಿವೆ. ಕೆಲವೆಡೆ ಕೊವ್ಯಾಕ್ಸಿನ್‌ ದಾಸ್ತಾನು ಬಂದಿದ್ದು,  ಅವರು ಮಾತ್ರ ಬಂದು ಎರಡನೇ ಡೋಸ್‌ ಪಡೆಯಬಹುದಾಗಿದೆ.

ಮಾರ್ಗಸೂಚಿ ಬದಲು ಸರ್ಕಾರಕ್ಕೆ ವರ: ಸದ್ಯ ಕೋವಿಶೀಲ್ಡ್‌ ಲಸಿಕೆ ಎರಡನೇ ಡೋಸ್‌ ಕಾಲಾವಧಿ  ಹೆಚ್ಚಳವಾಗಿರುವುದು ಲಸಿಕೆ  ದಾಸ್ತಾನು ಕೊರತೆ ಎದುರಿಸುತ್ತಿದ್ದ  ರಾಜ್ಯ ಸರ್ಕಾರಕ್ಕೆ ವರವಾಗಿ ಪರಿಣಮಿಸಿದೆ. ಆರೋಗ್ಯ ಇಲಾಖೆ ಮಾಹಿತಿ  ಪ್ರಕಾರ, ರಾಜ್ಯದಲ್ಲಿ ಶೇ.92ರಷ್ಟು  ಕೋವಿಶೀಲ್ಡ್‌ ಲಸಿಕೆಯನ್ನು ವಿತರಿಸಲಾಗಿದೆ. ಈ ಹಿಂದೆ ಕೋವಿಶೀಲ್ಡ್‌  ಮೊದಲ ಡೋಸ್‌ ಪಡೆದವರು 6 ವಾರಗಳ ನಂತರ ಎರಡನೇ ಡೋಸ್‌ ಹಾಕಿಸಿಕೊಳ್ಳಬೇಕು. ಮಾರ್ಚ್‌ ಮತ್ತು ಏಪ್ರಿಲ್‌ 15ರವರೆಗೆ ಪಡೆದವರು ಈ ತಿಂಗಳಲ್ಲಿಯೇ ಎರಡನೇ ಡೋಸ್‌ ಲಸಿಕೆ ಪಡೆಯಬೇಕಿತ್ತು. 25 ಲಕ್ಷ ಹಿರಿಯರು, 15 ಲಕ್ಷ 45-59 ವರ್ಷದವರು ಸೇರಿ 40 ಲಕ್ಷಕ್ಕೂ  ಅಧಿಕ ಮಂದಿ ಎರಡನೇ ಡೋಸ್‌ ಪಡೆಯಬೇಕಿತ್ತು.

Advertisement

ಆದರೆ, ಮೇ 10ರ ನಂತರವೇ ಎರಡನೇ ಡೋಸ್‌ನವರಿಗೆ ಲಸಿಕೆ ಕೊರತೆ ಎದುರಾಗಿತ್ತು. ಶನಿವಾರದ ಅಂತ್ಯಕ್ಕೆ 45 ವರ್ಷ ಮೇಲ್ಪಟ್ಟವರ ಪಾಲಿನ ಲಸಿಕೆ 50  ಸಾವಿರ ಡೋಸ್‌ಗಿಂತಲೂ ಕಡಿಮೆ ಇತ್ತು. ಈ ಹಿನ್ನೆಲೆ ವಯಸ್ಕರ ಪಾಲಿನ ಲಸಿಕೆ ಅಭಿಯಾನ ಬಂದ್‌ ಮಾಡಲಾಗಿತ್ತು. ವಯಸ್ಕರ ಪಾಲಿನಲ್ಲಿ ಬಾಕಿ ಉಳಿದಿದ್ದ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರ ಎರಡನೇ ಡೋಸ್‌ಗೆ ಬಳಸಲಾಗುತ್ತಿದೆ. ಇನ್ನು ನಾಲ್ಕು ದಿನಗಳಲ್ಲಿ ಈ ಲಸಿಕೆಯೂ ಖಾಲಿಯಾಗುವ ಸಾಧ್ಯತೆ ಇತ್ತು. ಈ ಬೆನ್ನಲ್ಲೆ ಕೇಂದ್ರ ಸರ್ಕಾರವು ಕೋವಿಶೀಲ್ಡ್‌ ಎರಡನೇ ಡೋಸ್‌ ಪಡೆಯವ ಅಂತರವನ್ನು 6 ರಿಂದ 8 ವಾರದ ಬದಲು 12 ರಿಂದ 16 ವಾರಕ್ಕೆ ಹೆಚ್ಚಿಸಿದೆ.

ಮಾರ್ಗಸೂಚಿ ಬದಲಾವಣೆ ಸಾಧ್ಯತೆ?: ಸದ್ಯ ದೇಶದ ಬಹುತೇಕ ರಾಜ್ಯಗಳಲ್ಲಿ ಶೇ .90ರಷ್ಟು ಕೋವಿಶೀಲ್ಡ್‌ ನೀಡಲಾಗಿದೆ. ಈಗ ಮಾರ್ಗಸೂಚಿ  ಬದಲಾವಣೆಯಾದ ಹಿನ್ನೆಲೆ ಸಾರ್ವಜನಿಕರು ಎರಡನೇ ಡೋಸ್‌ಗೆ ಅರ್ಹರಾಗಿರುವುದಿಲ್ಲ. ಹೀಗಾಗಿ, ಕೋವಿಶೀಲ್ಡ್‌ ಲಸಿಕೆ ಎರಡನೇ ಡೋಸ್‌ ಪಡೆಯುವ ಗರಿಷ್ಠ ಕಾಲಾವಧಿಯನ್ನು 16 ವಾರಕ್ಕೆ ನಿಗದಿ ಪಡಿಸಿ, ಕನಿಷ್ಠ ಕಾಲಾವಧಿಯನ್ನು ಆರು ವಾರಕ್ಕೆ ಇಳಿಸುವ ಕುರಿತು ಚರ್ಚೆಗಳು ನಡೆದಿವೆ ಎಂದು ರಾಜ್ಯ ಸರ್ಕಾರದ ಕೊರೊನಾ ನಿಯಂತ್ರಣ ತಾಂತ್ರಿಕ  ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಹುತೇಕ ಕೋವಿಶೀಲ್ಡ್‌ ವಿತರಿಸಲಾಗುತ್ತಿದೆ. ಅದರ ಎರಡನೇ ಡೋಸ್‌ ಮಾರ್ಗಸೂಚಿ ಕುರಿತು ಶನಿವಾರರಾಜ್ಯ ತಾಂತ್ರಿಕ ಸಮಿತಿ ಸಭೆ ನಡೆಯಲಿದ್ದು, ಈ ವಿಚಾರ ಚರ್ಚೆಯಾಗಲಿದೆ. ಸದ್ಯ ಕೊವ್ಯಾಕ್ಸಿನ್‌ ಎರಡನೇ ಡೋಸ್‌ ಇದ್ದವರು ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದು.

– ಡಾ.ತ್ರಿಲೋಕ್‌ ಚಂದ್ರ, ಆರೋಗ್ಯ ಇಲಾಖೆ ಆಯುಕ್ತರು

 

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next