Advertisement

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

11:09 PM Oct 21, 2021 | Team Udayavani |

ಕಳೆದೆರಡು ವರ್ಷಗಳಿಂದೀಚೆಗೆ ಇಡೀ ವಿಶ್ವವನ್ನು ಕಾಡಿದ ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಭಾರತವು ಕೊರೊನಾ ಪ್ರತಿಬಂಧಕ ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ಚರಿತ್ರಾರ್ಹ ಸಾಧನೆಯನ್ನು ಮಾಡಿದೆ. ಸದ್ಯ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು ಲಸಿಕೆ ಪ್ರಕ್ರಿಯೆ ಆರಂಭವಾದ 9 ತಿಂಗಳುಗಳ ಅವಧಿಯಲ್ಲಿ 100 ಕೋಟಿ ಡೋಸ್‌  ಲಸಿಕೆ ನೀಡುವ ಮೂಲಕ ದಾಖಲೆ ನಿರ್ಮಿಸಿದೆ.

Advertisement

2020ರ ಮಾರ್ಚ್‌ನಲ್ಲಿ ದೇಶಕ್ಕೆ ಕಾಲಿರಿಸಿದ ಕೊರೊನಾ ಸಾಂಕ್ರಾಮಿಕದ ಪ್ರಥಮ ಅಲೆ ದೇಶದಲ್ಲಿ ಭಾರೀ ಆತಂಕವನ್ನು ಸೃಷ್ಟಿಸಿತ್ತು. ಹತ್ತು ಹಲವು ಕೊರತೆ, ಸಂಕಷ್ಟಗಳ ಹೊರತಾಗಿಯೂ ಸರಕಾರದ ಕಠಿನ ಕ್ರಮದಿಂದಾಗಿ ನಿಯಂತ್ರಣಕ್ಕೆ ಬಂದಿತು. ಇದರ ನಡುವೆಯೇ ದೇಶದಲ್ಲಿನ ಔಷಧ ಉತ್ಪಾದಕ ಕಂಪೆನಿಗಳು ನಿರಂತರವಾಗಿ ಕೊರೊನಾ ನಿರೋಧಕ ಲಸಿಕೆ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಮೂಲಕ ಮಹತ್ತರ ಯಶಸ್ಸನ್ನು ಸಾಧಿಸಿದವು. ಪ್ರಸಕ್ತ ವರ್ಷದ ಜ. 16ರಂದು ಲಸಿಕೆ ನೀಡಿಕೆ ಆರಂಭ ಗೊಂಡಿತ್ತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, 2ನೇ ಹಂತದಲ್ಲಿ ಫೆ. 2ರಿಂದ ಮುಂಚೂಣಿ ಕಾರ್ಯಕರ್ತರು, ಮೂರನೇ ಹಂತದಲ್ಲಿ ಮಾರ್ಚ್‌ ತಿಂಗಳ ಆರಂಭದಿಂದ 60 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ಕಾಯಿಲೆ ಪೀಡಿತ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಯಿತು.

ಈ ವೇಳೆ ಕೊರೊನಾ ಒಂದಿಷ್ಟು ನಿಯಂತ್ರಣಕ್ಕೆ ಬಂದಿದ್ದರಿಂದ ಮತ್ತು ಲಸಿಕೆಯ ಬಗೆಗೆ ಕೆಲವೊಂದು ಗೊಂದಲಗಳಿದ್ದುದರಿಂದ ಆರಂಭದ ಕೆಲವು ವಾರಗಳ ಕಾಲ ಲಸಿಕೆ ಪಡೆದುಕೊಳ್ಳಲು ಜನರು ಹಿಂದೇಟು ಹಾಕಿದರು. ಎ.1ರಿಂದ 45ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆ ನೀಡಲು ಆರಂಭಿಸಲಾಯಿತು. ಈ ಹಂತದಲ್ಲಿ ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಿಸಿ ಭಾರೀ ಸಂಕಷ್ಟವನ್ನು ತಂದೊಡ್ಡಿತ್ತಲ್ಲದೆ ಅಪಾರ ಪ್ರಾಣಹಾನಿಗೂ ಕಾರಣವಾಯಿತು.

ಈ ವೇಳೆ ಎಚ್ಚೆತ್ತುಕೊಂಡ ಜನತೆ ಲಸಿಕೆ ಪಡೆಯಲು ಆಸಕ್ತಿ ತೋರಿದರು. ಮೇ ಮೊದಲ ವಾರದಿಂದ 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ನೀಡುವುದಾಗಿ ಸರಕಾರ ಘೋಷಿಸಿತು. ಆರಂಭದಲ್ಲಿ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಯಿತಾದರೂ ದಿನ ಕಳೆಯುತ್ತಿದ್ದಂತೆಯೇ ಪರಿಸ್ಥಿತಿ ಸುಧಾರಿಸಿತು. ಈಗ 100 ಕೋಟಿ ಡೋಸ್‌ ಲಸಿಕೆಗಳನ್ನು ನೀಡುವ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ತರ ಮೈಲಿಗಲ್ಲು ಸ್ಥಾಪಿಸಿದೆ. ದೇಶದ ಈ ಸಾಧನೆಗೆ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಶ್ಲಾಘನೆ ವ್ಯಕ್ತಪಡಿಸಿವೆ.

ದೇಶದ 130 ಕೋಟಿ ಜನಸಂಖ್ಯೆಯನ್ನು ಪರಿಗಣಿಸಿದಾಗ ಇದು ಗಮನಾರ್ಹ ಸಾಧನೆಯೇ ಸರಿ. ಇದರ ಹೊರತಾಗಿಯೂ ದೇಶದಲ್ಲಿನ್ನೂ ವಯಸ್ಕರಲ್ಲಿ ಶೇ. 25ರಷ್ಟು ಜನರು ಕನಿಷ್ಠ ಒಂದು ಡೋಸ್‌ ಲಸಿಕೆಯನ್ನೂ ಪಡೆದಿಲ್ಲವಾದರೆ ಶೇ. 69ರಷ್ಟು ಜನರು ಎರಡನೇ ಡೋಸ್‌ ಲಸಿಕೆಯನ್ನು ಪಡೆಯಬೇಕಾಗಿದೆ. ಅಷ್ಟು ಮಾತ್ರವಲ್ಲದೆ 18 ವರ್ಷಕ್ಕಿಂತ ಕೆಳಗಿನವರಿಗೆ ಇನ್ನೂ ಲಸಿಕೆ ನೀಡಿಕೆ ಆರಂಭಗೊಂಡಿಲ್ಲ. ಲಸಿಕೆ ನೀಡಿಕೆಯಲ್ಲಿ ಶತ ಪ್ರತಿಶತ ಸಾಧನೆ ಮಾಡಿದ ಬಳಿಕವಷ್ಟೇ ಕೊರೊನಾ ವಿರುದ್ಧದ ದೇಶದ ಹೋರಾಟ ಒಂದು ತಾರ್ಕಿಕ ಅಂತ್ಯ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಲಸಿಕೆ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತವಾಗಿ ಪೂರ್ಣಗೊಳಿಸಲು ಸರಕಾರ ಕಟಿಬದ್ಧವಾಗಬೇಕಿದೆ. ಇನ್ನೂ ಲಸಿಕೆ ಪಡೆಯದವರು ಶೀಘ್ರವೇ ಲಸಿಕೆಯನ್ನು ಪಡೆದುಕೊಂಡು ಇದನ್ನು ಸಾಕಾರಗೊಳಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next