Advertisement

ನಿಮ್ಮ ಬಳಿಗೇ ಬರಲಿದೆ ಲಸಿಕೆ ಟ್ರಕ್‌: ರಾಜ್ಯಕ್ಕೆ 30 ಲಕ್ಷ ಲಸಿಕೆ ಲಭ್ಯ ಸಾಧ್ಯತೆ

12:46 AM Dec 25, 2020 | sudhir |

ಬೆಂಗಳೂರು: ಕೊರೊನಾ ಎರಡನೇ ಅಲೆ ಮತ್ತು ಬ್ರಿಟನ್‌ ರೂಪಾಂತರ ವೈರಸ್‌ ಸದ್ದು ಮಾಡುತ್ತಿರುವ ನಡುವೆಯೇ ಕೋವಿಡ್‌ ಲಸಿಕೆ ವಿತರಣೆಗೆ ದಿನಗಣನೆಯೂ ಆರಂಭವಾಗಿದ್ದು, ಪ್ರಧಾನಿ ಘೋಷಣೆ ಬೆನ್ನಲ್ಲೇ ತುರ್ತು ಆದ್ಯತಾ ವಲಯಕ್ಕೆ ಲಸಿಕೆ ಹಂಚಲು ರಾಜ್ಯ ಸರಕಾರ ಸನ್ನದ್ಧವಾಗಿದೆ.

Advertisement

ಇದಕ್ಕಾಗಿಯೇ ಶೀತಲೀಕರಣ/ ಚುಚ್ಚುಮದ್ದು ಕೋಣೆಯನ್ನು ಒಳಗೊಂಡ ಅತ್ಯಾಧುನಿಕ ಫೀಲ್ಡ್‌ ವ್ಯಾಕ್ಸಿನೇಷನ್‌ ವೆಹಿಕಲ್‌(ಟ್ರಕ್‌)ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ.

ಜನವರಿ 3ನೇ ವಾರ ದೇಶಾದ್ಯಂತ ಮೊದಲ ಹಂತದ ಲಸಿಕೆ ವಿತರಣೆಗೆ ಚಾಲನೆ ನೀಡುವ ಸಾಧ್ಯತೆ ಇದೆ. ಆ ವೇಳೆ ವಿತರಣೆಗೆ ಉದ್ದೇಶಿಸಿರುವ 30 ಕೋಟಿ ಲಸಿಕೆಗಳಲ್ಲಿ ಕರ್ನಾಟಕಕ್ಕೆ 30 ಲಕ್ಷ ಲಭ್ಯವಾಗಲಿವೆ. ಸದ್ಯ ಅವುಗಳ ಸಂಗ್ರಹಕ್ಕೆ ಬೆಂಗಳೂರು, ಕಲಬುರಗಿಯಲ್ಲಿ ಲಸಿಕೆ ಸಂಗ್ರಹಣ  ಕೇಂದ್ರ ಘಟಕ ಮತ್ತು ಐದು ಕಡೆ ವಿಭಾಗೀಯ ಘಟಕಗಳನ್ನು ಗುರುತಿಸಲಾಗಿದೆ. ಇಲ್ಲಿಂದ ಲಸಿಕೆ ಯನ್ನು ವೈದ್ಯಕೀಯ ಸಿಬಂದಿ ಇರುವ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ವಿತರಿಸಲೆಂದು ಖಾಸಗಿ ಶೀತಲೀಕರಣ ಕಂಪೆನಿಯೊಂದಿಗೆ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಫೀಲ್ಡ್‌ ವ್ಯಾಕ್ಸಿನೇಷನ್‌ ವೆಹಿಕಲ್‌ಗ‌ಳನ್ನು ಬಳಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಹಿರಿಯರಿಗೆ ಮೊದಲು 
ಆದ್ಯತಾ ವಲಯದ ಫ‌ಲಾನುಭವಿಗಳ ಪಟ್ಟಿಯಲ್ಲಿ ಹಿರಿಯ ವೈದ್ಯರಿಗೆ ಮೊದಲ ಸ್ಥಾನ. ಬಳಿಕ ಕಿರಿಯ ವೈದ್ಯರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ನರ್ಸ್‌ಗಳು ಸೇರಿದಂತೆ ಇತರ ಸಿಬಂದಿಗೆ ನೀಡಲಾಗುತ್ತದೆ. ಬಳಿಕ ಪೊಲೀಸ್‌, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಇರುತ್ತಾರೆ. ಎಲ್ಲ ಕಡೆಯೂ ಹಿರಿಯರಿಗೆ ಮೊದಲ ಪ್ರಾಶಸ್ತ್ಯ.

ಬೆಂಗಳೂರಿಗರಿಗೆ ಮೊದಲು ಲಸಿಕೆ
ಸೋಂಕು ಹೆಚ್ಚಿರುವ ನಗರದಲ್ಲಿಯೇ ತುರ್ತು ಲಸಿಕೆ ವಿತರಣೆಗೆ ಉದ್ದೇಶಿಸಲಾಗಿದೆ. ಈ ಪೈಕಿ ಮೊದಲು ಬೆಂಗಳೂರಿನ ವೈದ್ಯರು ಮತ್ತು ಆರೋಗ್ಯ ಸಿಬಂದಿ ಲಸಿಕೆ ಪಡೆಯಲಿದ್ದಾರೆ. ಅನಂತರ ಸೋಂಕು ಹೆಚ್ಚಿರುವ ಪ್ರದೇಶಗಳಾದ ಮೈಸೂರು, ದಕ್ಷಿಣ ಕನ್ನಡ, ತುಮಕೂರು… ಹೀಗೆ ಸೋಂಕಿನ ತೀವ್ರತೆ ಆಧರಿಸಿ ವಿತರಿಸಲು ಉದ್ದೇಶಿಸಲಾಗಿದೆ.

Advertisement

ಡಿ. 23ರ ಅಂತ್ಯಕ್ಕೆ ರಾಜ್ಯದಲ್ಲಿ ಸರಕಾರಿ ಆರೋಗ್ಯ ಕೇಂದ್ರಗಳ 2,55,331 ಸಿಬಂದಿ, 2,65,129 ಖಾಸಗಿ ಆರೋಗ್ಯ ಕೇಂದ್ರಗಳ ಸಿಬಂದಿ ಸೇರಿದಂತೆ ಒಟ್ಟು 5,20,460 ಆರೋಗ್ಯ ಕಾರ್ಯಕರ್ತರ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿದೆ. ಇದರಲ್ಲಿ ದ.ಕ. ಜಿಲ್ಲೆಯ 39 ಸಾವಿರ, ಉಡುಪಿಯ 18.5 ಸಾವಿರ ಮಂದಿ ಸೇರಿದ್ದಾರೆ.

– ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next