ಹೊಸದಿಲ್ಲಿ: ಇದೇ ಆಗಸ್ಟ್‌ನಿಂದ ಡಿಸೆಂಬರ್ ಅವಧಿಯಲ್ಲಿ ಒಟ್ಟು 135 ಕೋಟಿ ಡೋಸ್ ಲಸಿಕೆಗಳು ಭಾರತದಲ್ಲಿ ಲಭ್ಯವಿರಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ವರ್ಷಾಂತ್ಯದಲ್ಲಿ ದೇಶದ ಎಲ್ಲ ಅರ್ಹ ಜನಸಂಖ್ಯೆಗೂ ಪೂರ್ಣ ಪ್ರಮಾಣದಲ್ಲಿ ಲಸಿಕೆ ಒದಗಿಸಿದಂತಾಗಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಹೇಳಿದೆ.
ಕೇಂದ್ರದ ಲಸಿಕೆ ನೀತಿ ಕುರಿತ ವಿಸ್ತೃತ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದ ಹಿನ್ನೆಲೆಯಲ್ಲಿ ಸರಕಾರ ಅಫಿಡವಿಟ್ ಸಲ್ಲಿಸಿ ಈ ವಿಚಾರಗಳನ್ನು ತಿಳಿಸಿದೆ.
18 ವರ್ಷ ಮೇಲ್ಪಟ್ಟವರು ಎಂದರೆ ಸುಮಾರು 93-94 ಕೋಟಿ ಮಂದಿಗೆ ಲಸಿಕೆ ನೀಡಬೇಕಾಗುತ್ತದೆ. ಎಲ್ಲರಿಗೂ ಎರಡು ಡೋಸ್ ಲಸಿಕೆ ನೀಡಲು ಸುಮಾರು 186.6 ಕೋಟಿ ಡೋಸ್ ಲಸಿಕೆ ಬೇಕಾಗುತ್ತದೆ. ಜುಲೈ 31ರವರೆಗೆ 51.6 ಕೋಟಿ ಡೋಸ್ ಗಳ ನೀಡಿಕೆ ಪೂರ್ಣಗೊಳ್ಳಲಿದ್ದು, ಉಳಿದ 135 ಕೋಟಿ ಡೋಸ್ ಗಳನ್ನು ಆಗಸ್ಟ್‌ನಿಂದ ಡಿಸೆಂಬರ್ ಅವಧಿಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಡೋಸ್ ಅಂತರ ಇಳಿಕೆ: ಇದೇ ವೇಳೆ, ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಭಾರತದ ಅತ್ಲೀಟ್ ಗಳು, ಕ್ರೀಡಾಳುಗಳು ಮತ್ತು ಸಂಬಂಧಪಟ್ಟ ಸಿಬಂದಿಗೆ, ವಿದೇಶಗಳಿಗೆ ಉದ್ಯೋಗ ನಿಮಿತ್ತ ತೆರಳುವವರು, ವ್ಯಾಸಂಗಕ್ಕೆಂದು ಹೋಗುವ ವಿದ್ಯಾರ್ಥಿಗಳಿಗೆ ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರವನ್ನು ತಗ್ಗಿಸಲಾಗಿದೆ. ಅಂಥವರು ಮೊದಲ ಡೋಸ್ ಪಡೆದ 28 ದಿನಗಳಲ್ಲೇ(ಗರಿಷ್ಠ 84 ದಿನಗಳು) ಎರಡನೇ ಡೋಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದೂ ಸರಕಾರ ಮಾಹಿತಿ ನೀಡಿದೆ. ಜತೆಗೆ, ಲಸಿಕಾ ಕೇಂದ್ರಗಳಿಗೇ ನೇರವಾಗಿ ತೆರಳಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವ ಕಾರಣ, ಡಿಜಿಟಲ್ ತಂತ್ರಜ್ಞಾನದ ಅರಿವಿಲ್ಲದವರಿಗೂ ಅನುಕೂಲ ಕಲ್ಪಿಸಿದ್ದೇವೆ ಎಂದೂ ಹೇಳಿದೆ.
ದಾಸ್ತಾನು ಸಾಮರ್ಥ್ಯವಿದೆ: ಮೈನಸ್ 15ರಿಂದ 20ಡಿ.ಸೆ.ನಷ್ಟು ಕಡಿಮೆ ತಾಪಮಾನವನ್ನು ಬಯಸುವಂಥ ಲಸಿಕೆಗಳನ್ನು ದಾಸ್ತಾನಿಡುವ ಸಾಮರ್ಥ್ಯವೂ ಭಾರತಕ್ಕಿದೆ. ದೇಶಾದ್ಯಂತ ಇದಕ್ಕೆಂದೇ 29 ಸಾವಿರ ಶೈತ್ಯಾಗಾರಗಳೂ ಇವೆ ಎಂದೂ ಸರಕಾರ ಹೇಳಿದೆ. ಸಾರ್ವತ್ರಿಕ ಲಸಿಕೆ ಯೋಜನೆ ಮತ್ತು ಕೊರೊನಾ ಲಸಿಕೆ ಯೋಜನೆಯ ಅಗತ್ಯತೆಗೆ ಅನುಗುಣವಾಗಿ, ಕೇಂದ್ರ ಸರಕಾರವೇ ಶೈತ್ಯಾಗಾರದ ಸಲಕರಣೆಗಳನ್ನು ಖರೀದಿಸಿ, ರಾಜ್ಯಗಳಿಗೆ ಪೂರೈಸಿವೆ ಎಂದೂ 375 ಪುಟಗಳ ಅಫಿಡವಿಟ್ ನಲ್ಲಿ ಉಲ್ಲೇಖೀಸಲಾಗಿದೆ.
10 ಕೋಟಿ ಡೋಸ್: ಜೂನ್ ತಿಂಗಳಲ್ಲಿ ಸೀರಂ ಇನ್ ಸ್ಟಿಟ್ಯೂಟ್ ಕಂಪೆನಿಯು ಸುಮಾರು 10 ಕೋಟಿ ಡೋಸ್ ಲಸಿಕೆಗಳನ್ನು ಉತ್ಪಾದಿಸಿದೆ ಎಂದು ಕಂಪನಿ ತಿಳಿಸಿದೆ. ಇದೇ ವೇಳೆ, ಶನಿವಾರದಿಂದ ಭಾನುವಾರಕ್ಕೆ 24 ಗಂಟೆಗಳಲ್ಲಿ ದೇಶಾದ್ಯಂತ 50,040 ಹೊಸ ಪ್ರಕರಣ ಪತ್ತೆಯಾಗಿದ್ದು, 1,258 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಗುಣಮುಖ ಪ್ರಮಾಣ ಶೇ.96.75ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಡೆಲ್ಟಾ ಪ್ಲಸ್ ಹೆಚ್ಚು ಶಕ್ತಿಶಾಲಿ
ಈವರೆಗಿನ ಕೊರೊನಾ ರೂಪಾಂತರಿಗಳಿಗೆ ಹೋಲಿಸಿದರೆ ಹೊಸ ರೂಪಾಂತರಿ ಡೆಲ್ಟಾ ಪ್ಲಸ್‌ನಲ್ಲಿ, ಮನುಷ್ಯನ ಶ್ವಾಸ ಕೋಶಗಳನ್ನು ಪ್ರವೇಶಿಸುವ ಛಾತಿ, ಗಣನೀಯವಾಗಿ ಹೆಚ್ಚಾಗಿರುತ್ತದೆ ಎಂದು ರೋಗ ನಿರೋಧಕತೆಯ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಮುಖ್ಯಸ್ಥ ಡಾ. ಎನ್.ಕೆ. ಅರೋರಾ ಹೇಳಿದ್ದಾರೆ. ಡೆಲ್ಟಾ ಪ್ಲಸ್ ಬಗ್ಗೆ ಹೆಚ್ಚಿನ ವಿವರಣೆ ನೀಡಿದ ಅರೋರಾ, ಮನುಷ್ಯನ ಶ್ವಾಸಕೋಶಗಳನ್ನು ಪ್ರವೇಶಿಸುವ ವಿಚಾರದಲ್ಲಿ ಹೆಚ್ಚು ಶಕ್ತಿಶಾಲಿಯಾಗಿದ್ದರೂ ಇವು ತೀವ್ರ ಸ್ವರೂಪದ ಕಾಯಿಲೆಯನ್ನು ಸೃಷ್ಟಿಸುವುದಿಲ್ಲ. ಅಲ್ಲದೆ, ಇವು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬುದು ಸಾಬೀತಾಗಿಲ್ಲ ಎಂದು ತಿಳಿಸಿದ್ದಾರೆ. ಡೆಲ್ಟಾ ಪ್ಲಸ್ ಮಾದರಿಯ ವೈರಾಣುಗಳು, ಮ್ಯುಕೋಸ್ ದ್ರವ್ಯ ಸೂಸುವ ಶ್ವಾಸಕೋಶದ ಹೊರಪದರದ ಮೇಲೆ ದಾಳಿ ಮಾಡುತ್ತವೆ. ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದವರ ಮೇಲೆ ಇವುಗಳ ದುಷ್ಪರಿಣಾಮ ಗಂಭೀರವಾಗಿರುವುದಿಲ್ಲ ಎಂದು ಹೇಳಬಹುದು. ಆದರೂ, ಜನರು ಈ ರೂಪಾಂತರಿ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.