Advertisement

24×7ಲಸಿಕೆ ವಿತರಣೆಗೆ ಸಲಹೆ

11:48 PM Jun 10, 2021 | Team Udayavani |

ನವದೆಹಲಿ: ದೇಶದ ಆರ್ಥಿಕ ಪ್ರಗತಿ ಏರುಮುಖದಲ್ಲಿ ಸಾಗಬೇಕೆಂದರೆ, ಸೆಪ್ಟಂಬರ್‌ ವೇಳೆಗೆ 70 ಕೋಟಿ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಗಬೇಕಿದೆ. ಹೀಗೆಂದು ಕೇಂದ್ರ ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ದೇಶದ ಶೇ.80ರಷ್ಟು ಮಂದಿಯ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾದರೆ ಮಾತ್ರವೇ ಸಾಮೂಹಿಕ ರೋಗನಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ಉತ್ಪತ್ತಿಯಾಗಲು ಸಾಧ್ಯ. ಎಷ್ಟು ಬೇಗ ನಾವು ಈ ಸಾಮೂಹಿಕ ರೋಗನಿರೋಧಕ ಶಕ್ತಿಯನ್ನು ಗಳಿಸುತ್ತೇವೊ ಅಷ್ಟು ಬೇಗ ದೇಶದ ಆರ್ಥಿಕತೆ ಹಳಿಗೆ ಬರಲು ಸಾಧ್ಯ ಎಂದು ಈ ವರದಿ ಅಭಿಪ್ರಾಯಪಟ್ಟಿದೆ.

ಕೊರೊನಾ ಸೋಂಕಿನ ಎರಡನೇ ಅಲೆಯು ಆರ್ಥಿಕ ಚೇತರಿಕೆಗೆ ತಡೆಯೊಡ್ಡಿದೆ. ಈ ಬಾರಿಯೂ ವಾಡಿಕೆ ಮಳೆಯಾಗಲಿರುವ ಕಾರಣ ಆಹಾರ ವಸ್ತುಗಳ ಹಣದುಬ್ಬರದ ಒತ್ತಡ ಕಡಿಮೆಯಾಗಬಹುದಾದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕುಗಳ ದರ ಹೆಚ್ಚಳ ಮತ್ತು ಅಧಿಕ ಸಾಗಣೆ ವೆಚ್ಚವು ದೇಶೀಯ ಉತ್ಪಾದನೆ ಮತ್ತು ಸೇವಾ ವಲಯಕ್ಕೆ ಹೊಡೆತ ನೀಡುವ ಸಾಧ್ಯತೆಯಿದೆ. ಸ್ಥಳೀಯ ಮಟ್ಟದ ನಿರ್ಬಂಧಗಳು ಜಾರಿಯಲ್ಲಿರುವ ಕಾರಣ ಪೂರೈಕೆ ಸರಪಳಿಗೆ ತೊಂದರೆಯಾಗಿದೆ. ಇದು, ಮೂಲ ಹಣದುಬ್ಬರ(ಆಹಾರ ಮತ್ತು ಇಂಧನ ಹೊರತುಪಡಿಸಿ)ದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಈ ವರದಿ ತಿಳಿಸಿದೆ.

ಸರಕಾರವೇನು ಮಾಡಬೇಕು?: ಹರ್ಡ್‌ ಇಮ್ಯೂನಿಟಿ ಸೃಷ್ಟಿಯಾಗಬೇಕೆಂದರೆ ಲಸಿಕೆ ವಿತರಣೆ ಪ್ರಕ್ರಿಯೆ ವೇಗ ಪಡೆಯಬೇಕು. ಹಾಗಾಗಬೇಕೆಂದರೆ ಸೆಪ್ಟಂಬರ್‌ ವೇಳೆಗೆ 113 ಕೋಟಿ ಡೋಸ್‌ ಲಸಿಕೆಗಳು ಬೇಕೇ ಬೇಕು. ಪ್ರತೀ ದಿನ ಸುಮಾರು 93 ಲಕ್ಷ ಮಂದಿಗೆ ಲಸಿಕೆ ಹಾಕಬೇಕು (ಈವರೆಗೆ ಹಾಕಲಾದ ದೈನಂದಿನ ಗರಿಷ್ಠ ಲಸಿಕೆಯೆಂದರೆ 42.65 ಲಕ್ಷ). ಇದನ್ನು ಸಾಧಿಸಲು ಸರಕಾರವು, ಆಗಸ್ಟ್‌ ಹಾಗೂ ಸೆಪ್ಟಂಬರ್‌ ತಿಂಗಳಲ್ಲಿ ಎರಡೆರಡು ಪಾಳಿಯಲ್ಲಿ ದಿನದ 24 ಗಂಟೆಯೂ ಲಸಿಕೆ ವಿತರಣೆ ಪ್ರಕ್ರಿಯೆಯನ್ನು ಯುದೊœàಪಾದಿಯಲ್ಲಿ ನಡೆಸಬೇಕು. ಸೂಕ್ತ ಯೋಜನೆ, ಲಸಿಕೆಗಳ ಸಾಗಣೆ, ದಾಸ್ತಾನು ಸಾಮರ್ಥ್ಯ ಹೆಚ್ಚಳ, ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮತ್ತಿತರ ಕೆಲಸಗಳನ್ನೂ ಸರಕಾರ ನಡೆಸಬೇಕು ಎನ್ನುತ್ತದೆ ಈ ಆರ್ಥಿಕ ಮುನ್ನೋಟ ವರದಿ.

ಬಿಹಾರ ಮೃತರ ಸಂಖ್ಯೆ ಪರಿಷ್ಕರಣೆ; ದೇಶದಲ್ಲಿ ಒಂದೇ ದಿನ 6,148 ಸಾವು :

Advertisement

ಹೊಸದಿಲ್ಲಿ: ಬಿಹಾರದಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆಯನ್ನು ಆರೋಗ್ಯ ಇಲಾಖೆಯು ಪರಿಷ್ಕರಿಸಿ, ಹೊಸ ಸಂಖ್ಯೆಯನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾವಿನ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಈ ವರೆಗೆ 5500 ಕ್ಕಿಂತಲೂ ಕಡಿಮೆ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದೇ ಬಿಹಾರ ಹೇಳಿಕೊಂಡು ಬಂದಿತ್ತು. ಆದರೆ, ಗುರುವಾರ ಇದಕ್ಕೆ 3,951 ಹೆಚ್ಚುವರಿ ಸಾವನ್ನು(ಈ ಸಾವುಗಳು ಯಾವಾಗ ಸಂಭವಿಸಿವೆ ಎಂಬ ಮಾಹಿತಿ ಇಲ್ಲ) ಸೇರಿಸಿ, ಹೊಸ ಅಂಕಿಅಂಶ ಬಿಡುಗಡೆ ಮಾಡಿದ ಅಲ್ಲಿನ ಆರೋಗ್ಯ ಇಲಾಖೆ, ಈವರೆಗೆ ಸೋಂಕಿಗೆ ಬಲಿಯಾದವರ ನೈಜ ಸಂಖ್ಯೆ 9,429 ಎಂದು ಘೋಷಿಸಿತು. ಇದರ ಪರಿಣಾಮವೆಂಬಂತೆ, ದೇಶಾದ್ಯಂತ 24 ಗಂಟೆಗಳಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6,148 ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಜತೆಗೆ, ಈ ಅವಧಿಯಲ್ಲಿ 94,052 ಮಂದಿಗೆ ಸೋಂಕು ದೃಢಪಟ್ಟಿದೆ. ಗುಣಮುಖ ಪ್ರಮಾಣ ಶೇ.94.77ಕ್ಕೇರಿದೆ.

ಭಾರತಕ್ಕೆ ಸಿಗಲಿದೆ 8 ಕೋಟಿ ಡೋಸ್‌ ಲಸಿಕೆ :

ವಾಷಿಂಗ್ಟನ್‌/ಸಿಯೋಲ್‌: ಮುಂದಿನ  ಎರಡು ವರ್ಷಗಳಲ್ಲಿ ಅಮೆರಿಕ ಸರಕಾರ ಜಗತ್ತಿನ ವಿವಿಧ ದೇಶಗಳಿಗೆ ಫೈಜರ್‌ ಕಂಪೆನಿಯಿಂದ 500 ಮಿಲಿಯ ಡೋಸ್‌ ಲಸಿಕೆ ಖರೀದಿಸಿ ವಿತರಿಸಲಿದೆ. ಈ ಪೈಕಿ ಭಾರತಕ್ಕೆ ಎಂಟು ಕೋಟಿ ಡೋಸ್‌ ಲಸಿಕೆ ಸಿಗಲಿದೆ. ವಿಶ್ವಸಂಸ್ಥೆ ಪ್ರಾಯೋಜಿತ ಜಾಗತಿಕ ಕೊವ್ಯಾಕ್ಸ್‌ ಲಸಿಕೆ ಹಂಚಿಕೆ ಯೋಜನೆ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ.2ರಂದು ತನ್ನ ಪಾಲಿನಿಂದ ಜಗತ್ತಿಗೆ ಶೇ.75ರಷ್ಟು ಲಸಿಕೆ ವಿತರಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರಕಟಿಸಿದ್ದರು. ಅದರನ್ವಯ ಭಾರತಕ್ಕೆ ಮಾಸಾಂತ್ಯದ ಒಳಗಾಗಿ 8 ಕೋಟಿ ಡೋಸ್‌ ಲಸಿಕೆ ಸಿಗಲಿದೆ. ಕೆಲವು ದಿನಗಳ ಹಿಂದಷ್ಟೇ ಫೈಜರ್‌ ಲಸಿಕೆಯ ಮೊದಲ ಕಂತು ಮುಂದಿನ ತಿಂಗಳ ಮೊದಲ ವಾರದಲ್ಲಿ ಲಭ್ಯವಾಗಲಿದೆ ಎಂದು ಪ್ರಕಟಿಸಿತ್ತು. ಅಮೆರಿಕ ಸರಕಾರದ ನಿರ್ಧಾರವನ್ನು ಏಷ್ಯಾ ಖಂಡದ ದೇಶಗಳ ಸರಕಾರಗಳು ಸ್ವಾಗತಿಸಿವೆ.

ಸಂಕಷ್ಟ ಮೊದಲ ತ್ತೈಮಾಸಿಕಕ್ಕೆ ಸೀಮಿತ :

ಕೊರೊನಾ ಸೋಂಕಿನ 2ನೇ ಅಲೆಯು ದೇಶದ ಆರ್ಥಿಕತೆಗೆ ಸ್ವಲ್ಪಮಟ್ಟಿಗೆ ಪೆಟ್ಟು ಕೊಟ್ಟಿದ್ದರೂ, ಅದು ಪ್ರಸಕ್ತ ವಿತ್ತ ವರ್ಷದ ಮೊದಲ ತ್ತೈಮಾಸಿಕಕ್ಕೆ ಮಾತ್ರ ಸೀಮಿತವಾಗಿರಲಿದೆ ಎಂದೂ ವಿತ್ತ ಸಚಿವಾಲಯದ ಮಾಸಿಕ ವರದಿ ಹೇಳಿದೆ. ಜತೆಗೆ, ಲಸಿಕೆ ನೀಡುವಿಕೆ ಪ್ರಕ್ರಿಯೆಯು ಸಮರೋಪಾದಿಯಲ್ಲಿ ನಡೆದರೆ ಮತ್ತು ಬಜೆಟ್‌ನ ಘೋಷಣೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದರೆ, ಎರಡನೇ ತ್ತೈಮಾಸಿಕದಲ್ಲಿ ಆರ್ಥಿಕತೆ ಜಿಗಿತುಕೊಳ್ಳಲಿದೆ ಎಂದೂ ವರದಿ ತಿಳಿಸಿದೆ.

ಫೈಜರ್‌ ಲಸಿಕೆಗೆ ಆಂಶಿಕ ರಕ್ಷಣೆ? :

ಹೊಸದಿಲ್ಲಿ: ಅಮೆರಿಕದ ಬಯಾನ್‌ಟೆಕ್‌ ಕಂಪನಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಫೈಜರ್‌ ಲಸಿಕೆಗೆ ಭಾರತದಲ್ಲಿ ಆಂಶಿಕ ರಕ್ಷಣೆ ದೊರೆಯುವ ಸಾಧ್ಯತೆ ದಟ್ಟವಾಗಿದೆ. ಲಸಿಕೆಯಿಂದ ಯಾವುದೇ ಪ್ರತಿಕೂಲ ಪರಿಣಾಮ ಉಂಟಾದರೆ ಲಸಿಕಾ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರಿಂದ ರಕ್ಷಣೆ ನೀಡುವ ಕುರಿತು ಮಾತುಕತೆ ನಡೆಯುತ್ತಿದೆ. ಫೈಜರ್‌ಗೆ ಸರಕಾರ ಇಂಥ ವಿನಾಯ್ತಿ ನೀಡಿದರೆ, ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ವಿದೇಶಿ ಲಸಿಕೆಗಳು ಭಾರತಕ್ಕೆ ಲಗ್ಗೆಯಿಡುವ ಸಾಧ್ಯತೆಯಿದೆ. ಫೈಜರ್‌ಗೆ ಭಾರತದಲ್ಲಿ ಸುಮಾರು 730 ರೂ. ದರ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next