ಗದಗ: ಕೋವಿಡ್ ಸೋಂಕು ನಿಯಂತ್ರಣದಲ್ಲಿ ಲಸಿಕಾಕರಣದ ಪಾತ್ರ ಪ್ರಮುಖವಾಗಿದೆ. ಹಾಗಾಗಿ, ಅರ್ಹ ಮಕ್ಕಳು, ವೃದ್ಧರು ಸೇರಿ ಎಲ್ಲರಿಗೂ ಲಸಿಕಾಕರಣ ಪೂರ್ಣಗೊಳಿಸಬೇಕು. ಸೋಂಕು ನಿಯಂತ್ರಣ ಕ್ರಮಗಳನ್ನು ಎಲ್ಲ ಸಾರ್ವಜನಿಕರು ಪಾಲಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಆರೋಗ್ಯ ಇಲಾಖೆ ಹಾಗೂ ಜಿಮ್ಸ್ ವೈದ್ಯಾ ಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ಕುರಿತು ಅಂಕಿ ಅಂಶಗಳ ಪರಿಶೀಲಿಸಿ ಸೋಂಕು ನಿಯಂತ್ರಣ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಅರ್ಹರೆಲ್ಲರಿಗೂ ಎರಡು ಡೋಸ್ ಲಸಿಕೆ ನೀಡಬೇಕು. ಈ ಕಾರ್ಯದಲ್ಲಿ ವಿಳಂಬ ನೀತಿ ಬೇಡ ಎಂದರು.
ಸೋಂಕಿನ ಪ್ರಮಾಣ ಅಧಿಕವಾದಲ್ಲಿ ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದು, ಅಲ್ಲಿಯೇ ಚಿಕಿತ್ಸೆ ನೀಡಬೇಕು. ಉತ್ತಮ ರೀತಿಯ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.
ತಾಲೂಕು ಆಸ್ಪತ್ರೆಗಳಿಗೆ ಒದಗಿಸಲಾಗಿರುವ ಆಮ್ಲ ಜನಕ ಸಾಂಧ್ರಕ ಯಂತ್ರ ಹಾಗೂ ಆಕ್ಸಿಜನ್ ಸಿಲಿಂಡರ್ ಗಳನ್ನು ನಿಗದಿತ ಸಮಯದೊಳಗೆ ಸರಬರಾಜು ಮಾಡುವಂತೆ ಸಂಬಂಧಿ ತ ಆಕ್ಸಿಜನ್ ಎಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಟ್ಟುಕೊಳ್ಳಬೇಕು. ಸೋಂಕಿತರಿಗೆ ತಾಲೂಕು ಆಸ್ಪತ್ರೆಗಳಲ್ಲಿಯೇ ಉತ್ತಮ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕೆಂದರು.
Related Articles
ಆಸ್ಪತ್ರೆಗಳ ಸ್ಥಿತಿಗತ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಶೀಘ್ರಗತಿಯಲ್ಲಿ ತಮ್ಮ ಹಂತದಲ್ಲಿಯೇ ಮಾಡಿಟ್ಟು ಕೊಳ್ಳಬೇಕು. ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಬೇಕೆಂದರು.
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ನಿರ್ಮಾಣ ಶೀಘ್ರವಾಗಿ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ಮುಂದಾಗಬೇಕು. ಅಲ್ಲದೇ, ಜಿಮ್ಸ್ ಆವರಣದಲ್ಲಿ ಆರಂಭವಾದ ಮಾಡ್ನೂಲರ್ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಸಣ್ಣಪುಟ್ಟ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕೆಂದರು.
ಜಿಪಂ ಸಿಇಒ ಡಾ|ಸುಶೀಲಾ ಬಿ. ಮಾತನಾಡಿ, ಮಳೆಗಾಲ ಪ್ರಾರಂಭವಾಗಿರುವದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಸಾಧ್ಯತೆಯಿದೆ. ಅವುಗಳ ಹತೋಟಿಗೆ ಆರೋಗ್ಯ ಇಲಾಖಾ ಅಧಿ ಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅನುಸರಿಸಬೇಕಾದ ಮುನ್ನೆ ಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದರು.
ಡಿಎಚ್‌ಒ ಡಾ|ಜಗದೀಶ ನುಚ್ಚಿನ ಮಾತನಾಡಿ, ಸೋಂಕು ಪತ್ತೆ ಕಾರ್ಯ ಜಿಲ್ಲಾದ್ಯಂತ ನಿರಂತರವಾಗಿ ನಡೆದಿದೆ. ಸದ್ಯ ಜಿಲ್ಲೆಯಲ್ಲಿ ಒಂದು ಸೋಂಕಿನ ಸಕ್ರಿಯ ಪ್ರಕರಣವಿದೆ. ಸೋಂಕಿತರ ಚಿಕಿತ್ಸೆಗಾಗಿ ಜಿಮ್ಸ್‌ನಲ್ಲಿ 445 ಹಾಸಿಗೆಗಳು ಲಭ್ಯವಿವೆ. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳು ಸೇರಿ ಒಟ್ಟಾರೆ 1167 ಹಾಸಿಗೆಗಳು ಸೋಂಕಿತರ ಚಿಕಿತ್ಸೆಗಾಗಿ ಲಭ್ಯವಿವೆ ಎಂದರು.
ಜಿಮ್ಸ್ ಅಧೀಕ್ಷಕ ಡಾ. ರಾಜಶೇಖರ ಮ್ಯಾಗೇರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಿ.ಎಸ್. ಪಲ್ಲೇದ, ಆರ್‌ಸಿಎಚ್ ಅಧಿಕಾರಿ ಡಾ. ಬಿ.ಎಂ. ಗೋಜನೂರ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಇತರರಿದ್ದರು