Advertisement

ಮೂರನೇ ಅಲೆ: ನಿರ್ಲಕ್ಷ್ಯ ಬೇಡ; ಎಚ್ಚರಿಕೆ ಇರಲಿ

03:44 AM Jul 17, 2021 | Team Udayavani |

ದೇಶದಲ್ಲಿ ಇನ್ನೂ ಕೊರೊನಾ ಅಟ್ಟಹಾಸ ಮುಗಿದಿಲ್ಲ. ಪ್ರವಾಸಿ ಕ್ಷೇತ್ರಗಳಲ್ಲಿ, ಮಾರುಕಟ್ಟೆಗಳಲ್ಲಿ ಜನ ಸೇರುವುದು ಹೆಚ್ಚಾಗುತ್ತಲೇ ಇದೆ. ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಕೊರೊನಾ ಹೆಚ್ಚಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ, ನಿಯಂತ್ರಣಕ್ಕಾಗಿ ಸಲಹೆ, ಸೂಚನೆ ನೀಡಿದ್ದಾರೆ.

Advertisement

ಇದರ ಮಧ್ಯೆಯೇ ಕೇಂದ್ರ ಸರಕಾರ ನೇಮಕ ಮಾಡಿದ್ದ ಕೊರೊನಾ ಕಾರ್ಯಪಡೆ ಮುಂದಿನ 125 ದಿನಗಳು ನಿರ್ಣಾಯಕ ಎಂದಿದೆ. ಇನ್ನೂ ಜನರಲ್ಲಿ ಕೊರೊನಾ ಪ್ರತಿರೋಧಕ ಶಕ್ತಿ ಬೆಳೆದಿಲ್ಲ ಎಂದು ನೀತಿ ಆಯೋಗದ ಸದಸ್ಯ ಡಾ|ವಿ.ಕೆ.ಪೌಲ್‌ ಎಚ್ಚರಿಕೆ ನೀಡಿದ್ದಾರೆ. ಇನ್ನು ದೇಶದಲ್ಲಿ ಕೊರೊನಾ ಇಳಿಮುಖವಾಗುತ್ತಿರುವ ಪ್ರಮಾಣ ತೀರಾ ನಿಧಾನಗತಿಯಲ್ಲಿದೆ. ಇದು ಆತಂಕಕಾರಿ. ಜತೆಗೆ ಮುಂದಿನ ನಾಲ್ಕು ತಿಂಗಳು ಜನರು ಹೇಗೆ ವರ್ತಿಸುತ್ತಾರೆ ಎಂಬುದರ ಮೇಲೆ ಮೂರನೇ ಅಲೆಯ ಭವಿಷ್ಯ ನಿಂತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಮ್ಯಾನ್ಮಾರ್‌, ಇಂಡೋನೇಷ್ಯಾ, ಮಲೇಷ್ಯಾ, ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಇದು ಕಳವಳಕಾರಿ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹೇಳಿದ್ದಾರೆ.

ಹಾಗೆಯೇ ದೇಶದಲ್ಲಿ ಇನ್ನೂ 73 ಜಿಲ್ಲೆಗಳಲ್ಲಿ ಪ್ರತೀ ದಿನ 100ಕ್ಕೂ ಹೆಚ್ಚು ಕೇಸುಗಳು ಪತ್ತೆಯಾಗುತ್ತಿವೆ. 47 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಇವೆಲ್ಲದರ ನಡುವೆ ಶುಕ್ರವಾರ ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದು, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಪ್ರಸ್ತಾವಿಸಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದ್ದು, ಸಾಧ್ಯವಾದಷ್ಟು ನಿಯಂತ್ರಣಕ್ಕೆ ಆಯಾ ಜಿಲ್ಲಾಡಳಿತಗಳು ಕ್ರಮ ವಹಿಸಬೇಕು ಎಂಬ ಸೂಚನೆಯನ್ನೂ ನೀಡಿದ್ದಾರೆ. ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಲಸಿಕೆ ನೀಡುವುದನ್ನು ಮುಂದುವರಿಸಬೇಕು ಎಂದೂ ಹೇಳಿದ್ದಾರೆ. ಅಲ್ಲದೆ ಮೂರನೇ ಅಲೆ ಬರಲಿದೆ ಎಂದು ಹೇಳುವುದಕ್ಕಿಂತ ಇದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು. ಸದ್ಯಕ್ಕಂತೂ ನಾವು ಮೂರನೇ ಅಲೆ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಅಲ್ಲದೆ, ಕಳೆದ ಕೆಲವು ದಿನಗಳಿಂದ ಶೇ.80ರಷ್ಟು ಕೇಸುಗಳು ಕೇವಲ 6 ರಾಜ್ಯಗಳಿಂದಲೇ ಬರುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕು ಎಂದೂ ಮೋದಿ ಅವರು ಎಚ್ಚರಿಕೆ ನೀಡಿದ್ದಾರೆ.

Advertisement

ಪ್ರಧಾನಿ ಅವರು ಹೇಳಿದಂತೆ ಕೊರೊನಾ ಹೆಚ್ಚಿರುವ ರಾಜ್ಯಗಳ ಜತೆಗೆ, ಸೋಂಕು ಕಡಿಮೆ ಇರುವ ರಾಜ್ಯಗಳಲ್ಲೂ ಸರಕಾರಗಳು ಸೋಂಕಿನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲೇಬೇಕು. ಸೋಂಕು ಹೆಚ್ಚಳವಾಗುವುದು ಅಥವಾ ಕಡಿಮೆಯಾಗುವುದು ಎರಡೂ ಜನರ ಕೈಯಲ್ಲೇ ಇದೆ. ಸಾಧ್ಯವಾದಷ್ಟು ಸರಕಾರಗಳು ಹೇಳಿರುವ ಕೊರೊನಾ ನಿಯಮಾವಳಿಗಳನ್ನು ಪಾಲಿಸಬೇಕು. ಸಾರ್ವಜನಿಕವಾಗಿ ಗುಂಪು ಸೇರದೇ ಇರಬೇಕು, ಕಡ್ಡಾಯವಾಗಿ ಮಾಸ್ಕ್ ಬಳಸಿ, ಪ್ರವಾಸಗಳನ್ನು ಮುಂದೂಡಬೇಕು. ಇದರ ಜತೆಗೆ ಜನರೂ ಬೇಗನೇ ಲಸಿಕೆ ಪಡೆದು ಸುರಕ್ಷಿತರಾಗಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next