ಚಾಮರಾಜನಗರ: ಅ.24ರಿಂದ ಸಾಲು ಸಾಲು ಸರ್ಕಾರಿ ರಜೆಗಳುಇರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಜರಾಯಿ ದೇವಾಲಯಗಳು, ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸ್ವಯಂ ಪ್ರೇರಿತರಾಗಿ ಪ್ರವಾಸಿಗರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲೇಬೇಕೆಂದು ಕಡ್ಡಾಯ ಮಾಡುತ್ತಿಲ್ಲ. ಆರೋಗ್ಯ ಸಿಬ್ಬಂದಿ ಸಲಹೆ ನೀಡುತ್ತಾರೆ. ಪ್ರವಾಸಿಗರು ಇಷ್ಟ ಪಟ್ಟರೆ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಪ್ರವಾಸಿ ತಾಣಗಳ ಹಾಗೂ ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಪ್ರವಾಸಿಗರು, ಭಕ್ತಾದಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಅಥವಾ ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಅಂತಹವರನ್ನು ದೇವಾಲಯದ ಪ್ರವೇಶಕ್ಕೆ ನಿರ್ಬಂಧಿಸಿ, ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಥವಾ ಜಿಲ್ಲಾ ಕಂಟ್ರೋಲ್ ರೂಂ ನಂಬರ್ 1077 ಗೆ ಮಾಹಿತಿ ನೀಡಬೇಕು. ಮಹಾಮಂಗಳಾರತಿ ಜ್ಯೋತಿ ಮುಟ್ಟುವುದನ್ನು ನಿರ್ಬಂಧಿಸಿ ದೂರದಿಂದ ಮಂಗಳಾರತಿ ಪಡೆದು ನಮಸ್ಕರಿಸಲು ಅವಕಾಶ ಕಲ್ಪಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಅ. 24ರಿಂದ 31ವರೆಗೆ ಗುಂಡ್ಲುಪೇಟೆ ತಾಲೂಕು ಬಂಡೀಪುರಉದ್ಯಾನವನ, ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಹಾಗೂ ಚಾಮರಾಜನಗರ ತಾಲೂಕುಕೆ.ಗುಡಿಗೆ ಮತ್ತು ಮುಜಾರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಿಗೆಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಬಾರಿ ಸರಳ ಕನ್ನಡ ರಾಜೋತ್ಸವ :
ಕೊಳ್ಳೇಗಾಲ: ವಾಲ್ಮೀಕಿ ಜಯಂತಿ, ಕನ್ನಡ ರಾಜೋತ್ಸವವನ್ನು ಸರಳವಾಗಿ ಆಚರಿಸಬೇಕು ಎಂದು ಶಾಸಕ ಎನ್.ಮಹೇಶ್ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅ.31ರಂದು ವಾಲ್ಮೀಕಿ ಜಯಂತಿಯನ್ನು ತಾಲೂಕು ಕಚೇರಿಯ ಆವರಣದಲ್ಲಿ ಸರಳವಾಗಿ ನಡೆಸಬೇಕು. ನ.1ರಂದು ಕನ್ನಡ ರಾಜೋತ್ಸವವನ್ನು ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಬೇಕು. ಶಾಲಾ ಮಕ್ಕಳ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಾರದು. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ನೀಡಬೇಕು. ಕನ್ನಡದಲ್ಲಿ ಹೆಚ್ಚು ಅಂಕ ಪಡೆದ35 ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು ಎಂದರು.